ಹಿರಿಯ ನಟ ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್ ಅವರ ಪುತ್ರಿಯರಾದ ವೈಭವಿ, ವೈನಿಧಿ, ವೈಸಿರಿ ಅವರುಗಳು ನಾಯಕಿಯರಾಗಿ ಎಂಟ್ರಿಕೊಟ್ಟಿರುವುದು ಗೊತ್ತೇ ಇದೆ. ಈ ಮೂವರು ಸಹೋದರಿಯರು “ಯಾನ’ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ಸಹ ಎಲ್ಲರಿಗೂ ಗೊತ್ತು. ಈಗ ಹೊಸ ಸುದ್ದಿಯೆಂದರೆ, “ಯಾನ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಹೌದು, ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಯಾನ’, ಜುಲೈ 12 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಯು/ಎ’ ಪ್ರಮಾಣ ಪತ್ರ ನೀಡಿ ಬಿಡುಗಡೆಯ ಹಾದಿಯನ್ನು ಸುಗಮಗೊಳಿಸಿದೆ.
“ಆಕ್ಮೆ ಮೂವೀಸ್ ಇಂಟರ್ ನ್ಯಾಷನಲ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಹರೀಶ್ ಶೇರಿಗಾರ್, ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದಾರೆ. ಸಿನಿಮಾ ಹಿನ್ನೆಲೆಯಿರುವ ಕುಟುಂಬದ ಮೂವರು ಸಹೋದರಿಯರು ನಟಿಸಿರುವುದು ಹೊಸದೇನಲ್ಲ. ಆದರೆ, ಮೂವರು ಸಹೋದರಿಯರು ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.
ಅದರಲ್ಲೂ ತಾಯಿ ನಿರ್ದೇಶನದಲ್ಲಿ ಕ್ಯಾಮೆರಾ ಮುಂದೆ ನಿಲ್ಲುತ್ತಿರುವುದು ಬಹುಶಃ ಭಾರತೀಯ ಚಿತ್ರರಂಗದಲ್ಲೇ ದಾಖಲೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಜರ್ನಿ ಕುರಿತಾದ ಕಥೆ ಎಂಬುದು ನಿರ್ದೇಶಕರ ಮಾತು. “ಯಾನ’ ಬಗ್ಗೆ ಹೇಳುವುದಾದರೆ, ಇದೊಂದು ಜನಿರ ಕಥೆ. ಬೆಂಗಳೂರಿನಿಂದ ಗೋವಾದವರೆಗೆ ಕಥೆ ನಡೆಯುತ್ತೆ.
ದಾರಿ ಮಧ್ಯೆ ಸಿಗುವ ಚಿತ್ರದುರ್ಗ, ದಾವಣಗೆರೆ ಹೀಗೆ ಕೆಲ ಸ್ಥಳಗಳಲ್ಲೂ ಚಿತ್ರ ಸಾಗುತ್ತದೆ. ಚಿತ್ರದಲ್ಲಿ ಮನರಂಜನೆ ಇರುತ್ತೆ. ಅದಕ್ಕಿಂತ ಹೆಚ್ಚಾಗಿ ಈ ವಯಸ್ಸಿನ ಹುಡುಗಿಯರು ಏನಿಷ್ಟ ಪಡ್ತಾರೆ, ಎಂಥಾ ಕಷ್ಟಪಡ್ತಾರೆ, ಏನೆಲ್ಲಾ ತೊಂದರೆ ಅನುಭವಿಸ್ತಾರೆ ಎಂಬುದನ್ನು ಹೇಳುತ್ತಿದ್ದಾರಂತೆ ಅವರು. ಚಿತ್ರಕ್ಕೆ ಸುಹಾಸ್ ಗಂಗಾಧರ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಚಿತ್ರಕಥೆ ಬರೆದರೆ, ಸಿಂಪಲ್ ಸುನಿ ಹಾಗೂ ಅಭಿಷೇಕ್ ಅವರು ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ.
ಚಿತ್ರದ ಹಾಡುಗಳಿಗೆ ಜೋಶ್ವಾ ಶ್ರೀಧರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ದೃಶ್ಯಗಳನ್ನು ಕರಮ್ ಚಾವ್ಲಾ ಅವರು ಛಾಯಾಗ್ರಹಣ ಮಾಡಿದ್ದಾರೆ. “ಯಾನ’ ಚಿತ್ರದಲ್ಲಿ ವೈಭವಿ, ವೈನಿಧಿ, ವೈಸಿರಿ ಅವರೊಂದಿಗೆ ಚಕ್ರವರ್ತಿ, ಸುಮುಖ, ಅಭಿಷೇಕ್, ಅನಂತನಾಗ್, ಸುಹಾಸಿನಿ, ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರ ರಾಜ್, ಸುಂದರ್, ವೀಣಾಸುಂದರ್, ಎಂ.ಎನ್.ಲಕ್ಷ್ಮೀದೇವಿ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.