Advertisement

ಜನಾಗ್ರಹ ಇಲಾಖೆಗಳಿಗೆ ಕೇಳಿಸುತ್ತಿಲ್ಲ; ಪ್ರಾಣಾಪಾಯ ತಪ್ಪುತ್ತಿಲ್ಲ

11:15 AM Dec 08, 2017 | Team Udayavani |

ಮಂಗಳೂರು: ಮೂರು ರಾಷ್ಟ್ರೀಯ ಹೆದ್ದಾರಿಗಳ (ರಾ.ಹೆ. 66,75 ಮತ್ತು 169) ಸಂಗಮ ಸ್ಥಳವಾದ ನಂತೂರು ಜಂಕ್ಷನ್‌ ಅಪಾಯಕಾರಿ ತಾಣವಾಗಿದ್ದು, ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ.

Advertisement

ಈ ವೃತ್ತದಲ್ಲಿ ಗುರುವಾರ ಮುಂಜಾನೆ ಖಾಸಗಿ ಸರ್ವಿಸ್‌ ಬಸ್ಸೊಂದು ಅತಿ ವೇಗದಲ್ಲಿ ಬಂದು ಮಹಿಳೆಯೊಬ್ಬರ ಜೀವವನ್ನು ಬಲಿ ತೆಗೆದುಕೊಳ್ಳುವುದರ ಜತೆಗೆ ಸರಣಿ ಅಪಘಾತಕ್ಕೆ ಕಾರಣವಾಗಿದೆ. ಸಿಸಿ ಟಿವಿಯಲ್ಲಿ ಸೆರೆ ಸಿಕ್ಕಿರುವ ಈ ಅಪಘಾತದ ವೀಡಿಯೊ ಈಗ ವೈರಲ್‌ ಆಗಿದ್ದು, ಘಟನೆಯ ಭೀಕರತೆ ಹಾಗೂ ಬಸ್‌ ಚಾಲಕನ ಬೇಜವಾಬ್ದಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಖಾಸಗಿ ಬಸ್‌ ಚಾಲಕರು ನಗರದೊಳಗೆ ಅತಿವೇಗದಿಂದ ಮತ್ತು ಎರ್ರಾಬಿರ್ರಿ ನುಗ್ಗಿಸುವುದು ಸಾಮಾನ್ಯವಾ ಗಿದೆ. ಹೀಗೆ ಮನಸೋ ಇಚ್ಛೆ ಸಂಚರಿಸುವ ಖಾಸಗಿ ಬಸ್‌ಗಳ ವಿರುದ್ಧ ಸಂಚಾರ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಸಮಸ್ಯೆಯ ಭೀಕರತೆಯನ್ನು ಹೆಚ್ಚಿಸಿದೆ. ಇಂಥ ಬಸ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ ಜಾರಿಯಲ್ಲಿದ್ದರೆ ಒಂದಿಷ್ಟು ಅಪಘಾತಗಳನ್ನು ತಡೆಯಬಹುದಿತ್ತು ಎನ್ನುವುದು ಸಾರ್ವಜನಿಕ ವಲಯದ ಅಭಿಪ್ರಾಯ.

2758 ಪ್ರಕರಣ ದಾಖಲು
ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2017ರಲ್ಲಿ ಜನವರಿಯಿಂದ ನವೆಂಬರ್‌ ವರೆಗೆ ಖಾಸಗಿ ಬಸ್‌ಗಳು, ಕಾರು-ದ್ವಿಚಕ್ರ ವಾಹನ ಚಾಲಕರು ಸಹಿತ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆ ಸಂಬಂಧ ಸಂಚಾರ ಪೊಲೀಸರು ಒಟ್ಟು 2,758 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಅಂಕಿ-ಅಂಶದಿಂದಲೇ ಖಾಸಗಿ ಬಸ್‌ಗಳ ವಿರುದ್ಧ ನಿರ್ಲಕ್ಷ್ಯ ಅಥವಾ ಅಜಾರೂಕತೆಯ ವಾಹನ ಚಾಲನೆಗೆ ಸಂಬಂಧಿಸಿ ಹೆಚ್ಚಿನ ಪ್ರಕರಣಗಳು ದಾಖಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಹಾರ್ನ್ ಕಿರಿಕಿರಿ
ಸಾಮಾನ್ಯವಾಗಿ ನಗರದ ರಸ್ತೆಗಳಲ್ಲಿ ಸ್ಥಳದ ಕೊರತೆಯಿಂದ ವಾಹನಗಳು ಒಂದರ ಹಿಂದೊಂದರಂತೆ ಸಾಗುತ್ತವೆ. ಓವರ್‌ಟೇಕ್‌ ಕಷ್ಟ. ಆದರೆ, ಖಾಸಗಿ ಬಸ್‌ ಚಾಲಕರು ವಿನಾಕಾರಣ ತಮ್ಮ ಮುಂದಿನ ದ್ವಿಚಕ್ರ ಅಥವಾ ಖಾಸಗಿ ವಾಹನಗಳಿಗೆ ಕರ್ಕಶ ಹಾರ್ನ್ ಬಾರಿಸುತ್ತಾ ಕಿರಿಕಿರಿ ನೀಡುತ್ತಾರೆ. ಅಷ್ಟೇಅಲ್ಲ, ಒಂದುವೇಳೆ, ಬದಿಗೆ ಸರಿಯಲು ಜಾಗವಿಲ್ಲದಿದ್ದರೂ ಅವರಿಗೆ ದಾರಿ ಬಿಡಬೇಕು. ಇಲ್ಲವಾದರೆ ವಾಹನ ನಿಲ್ಲಿಸಿ ಬಾಯಿಗೆ ಬಂದಂತೆ ಬೈದು ಮುಜುಗರ-ಅಪಹಾಸ್ಯಕ್ಕೂ ಗುರಿಯಾಗಿಸುತ್ತಾರೆ. ಇನ್ನೊಂದೆಡೆ, ಕೆಂಪು ದೀಪದ ಸಿಗ್ನಲ್‌ ತೋರಿಸುತ್ತಿದ್ದರೂ, ತಮ್ಮ ಸಮಯ ಪಾಲನೆಗೆ ಮತ್ತು ಬೇರೆ ಬಸ್‌ ಗಳನ್ನು ಹಿಂದಿಕ್ಕಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಪೈಪೋಟಿಯಿಂದಾಗಿ ಸಿಗ್ನಲ್‌ಗ‌ಳಲ್ಲೂ ಇವರು ಹಾರ್ನ್ ಕಿರಿಕಿರಿ ನಿಲ್ಲಿಸುವುದಿಲ್ಲ.

Advertisement

ಸಿಸಿ ಟಿವಿ ಪ್ರಯೋಜನವಿಲ್ಲ
ನಗರದಲ್ಲಿ ಬಹುತೇಕ ಪ್ರಮುಖ ವೃತ್ತಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಟಿವಿಗಳಿವೆ. ಯಾವುದೇ ಖಾಸಗಿ ಬಸ್‌ಗಳು ಎರ್ರಾಬಿರ್ರಿ ಸಂಚರಿಸುವುದು ಕಂಡುಬಂದರೂ ಸುಲಭವಾಗಿ ಕ್ರಮ ಕೈಗೊಳ್ಳಬಹುದು. ಉದಾಹರಣೆಗೆ, ಹೆಲ್ಮೆಟ್‌ ಧರಿಸದೆ ಅಥವಾ ಸೀಟು ಬೆಲ್ಟ್ ಧರಿಸದೆ ವಾಹನ ಚಲಾಯಿಸಿದರೆ, ಸಿಸಿ ಟಿವಿ ಮೂಲಕ ಅಂಥವರನ್ನು ಪತ್ತೆ ಮಾಡಿ ಪೊಲೀಸರು ಮನೆ ಬಾಗಿಲಿಗೆ ದಂಡ ಹಾಕಿರುವ ನೋಟಿಸ್‌ ಕಳುಹಿಸುತ್ತಾರೆ. ಒಂದುವೇಳೆ, ಇದೇ ರೀತಿ ಪರಿಣಾಮಕಾರಿಯಾಗಿ ಸಂಚಾರ ನಿಯಮಗಳನ್ನು ಗಾಳಿಗೆ ತೂರುವ ಖಾಸಗಿ ಬಸ್‌ಗಳ ಮೇಲೂ ಜರಗಿಸಿದ್ದರೆ ಇಂಥ ಅವಘಡಗಳು ಘಟಿಸಲಾರದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಅವೈಜ್ಞಾನಿಕ ನಂತೂರು ವೃತ್ತ
ನಂತೂರು ವೃತ್ತದಲ್ಲಿ ಪದೇಪದೇ ಸರಣಿ ಅಪಘಾತ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯಾಗಲೀ, ಅಧಿಕಾರಿಗಳಾಗಲೀ ಎಚ್ಚೆತ್ತಿಲ್ಲ. ಇಲ್ಲಿ ಫ್ಲೈಓವರ್‌ ಅಥವಾ ಅಂಡರ್‌ ಪಾಸ್‌ ನಿರ್ಮಿಸುವ ಯೋಜನೆ ಇನ್ನೂ ಕೈಗೂಡಿಲ್ಲ. ವಾಹನಗಳ ಓಡಾಟ ದಿನೇದಿನೆ ಹೆಚ್ಚುತ್ತಿದ್ದು, ಈ ವೃತ್ತವು ಪ್ರಸ್ತುತ ಸಂಚರಿಸುವ ವಾಹನ ದಟ್ಟಣೆ ಸರಿಹೊಂದದೆ ಅವೈಜ್ಞಾನಿಕವಾಗಿದೆ.

ಕಡತಗಳಲ್ಲೇ ಉಳಿದ ಪ್ರಸ್ತಾವನೆ
ನಂತೂರು, ಕೆಪಿಟಿ ವೃತ್ತಗಳಲ್ಲಿ   ಫ್ಲೈ ಓವರ್‌ಗಳನ್ನು ನಿರ್ಮಿಸಬೇಕು ಎಂಬುದಾಗಿ ನಾಗರಿಕರು, ಜನಪ್ರತಿನಿಧಿಗಳು ಹೆದ್ದಾರಿ ಇಲಾಖೆ ಹಾಗೂ ಸರಕಾರವನ್ನು ಬಹುಕಾಲದಿಂದ ಒತ್ತಾಯಿಸುತ್ತಿದ್ದಾರೆ. ಸುರತ್ಕಲ್‌ನಿಂದ ಬಿ.ಸಿ.ರೋಡ್‌ ಜಂಕ್ಷನ್‌ ವೃತ್ತದವರೆಗೆ ರಾಷ್ಟ್ರೀಯ  ಹೆದ್ದಾರಿ ಚತುಷ್ಪಥವಾಗಿ ಮೇಲ್ದರ್ಜೆಗೇರುವ ಯೋಜನೆಯಲ್ಲಿ ನಂತೂರಿನಲ್ಲಿ ಫ್ಲೈ ಒವರ್‌ ನಿರ್ಮಾಣವೂ ಕೂಡಿತ್ತು. ಆದರೆ ಸಕಾಲದಲ್ಲಿ ಭೂಸ್ವಾಧೀನವಾಗದ ಕಾರಣ ಕಾಮಗಾರಿ ನಡೆಯಲಿಲ್ಲ. ಹೆದ್ದಾರಿ ಪ್ರಾಧಿಕಾರವೂ ಕೈಬಿಟ್ಟಿತು. ಜಿಲ್ಲಾಡಳಿತ ಎಚ್ಚೆತ್ತು ಭೂಸ್ವಾಧೀನ ಮಾಡಿದ್ದರೂ, ಗುತ್ತಿಗೆ ವಹಿಸಿಕೊಂಡ ಇರ್ಕಾನ್‌ ಯೋಜನಾ ವೆಚ್ಚ ದುಪ್ಪಟ್ಟು ಆದ ಹಿನ್ನೆಲೆಯಲ್ಲಿ ಒಪ್ಪಲಿಲ್ಲ.

ಕೆಪಿಟಿ ಹಾಗೂ ನಂತೂರಿನಲ್ಲಿ ಫ್ಲೈಓವರ್‌ ನಿರ್ಮಿಸಬೇಕು ಎಂದು ಮಹಾನಗರಪಾಲಿಕೆ ಸಾಮಾನ್ಯಸಭೆ, ತ್ತೈಮಾಸಿಕ ಕೆಡಿಪಿ ಸಭೆಗಳು, ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟ ಸಭೆಗಳಲ್ಲಿ ಜನಪ್ರತಿನಿಧಿಗಳು ಪ್ರಸ್ತಾವಿಸುತ್ತಲೇ ಬಂದಿದ್ದರು. ಆದರೆ ಪ್ರಯೋಜನವಾಗಿಲ್ಲ.

ಗೊಂದಲಮಯ ನಂತೂರು ವೃತ್ತ
ರಾ.ಹೆ. 66ರಲ್ಲಿ ಬರುವ ನಂತೂರು ವೃತ್ತ ವಾಹನ ಚಾಲಕರ ಪಾಲಿಗೆ ಗೊಂದಲದ ಗೂಡು. ಟ್ರಾಫಿಕ್‌ ಜಾಮ್‌ ನಿತ್ಯದ ಸಮಸ್ಯೆ. ವೃತ್ತದ ವಿನ್ಯಾಸವೇ ವಿಚಿತ್ರ. ಇಲ್ಲಿ ಸಮಸ್ಯೆ ಎಂದರೆ ಏಕಕಾಲಕ್ಕೆ ಎಲ್ಲ ಕಡೆಯಿಂದ ವಾಹನಗಳು ಬರುವ ಹಿನ್ನೆಲೆಯಲ್ಲಿ ಯಾರು ಎತ್ತಕಡೆ ತಿರುಗುತ್ತಾರೆ ಎಂಬುದೇ ಗೊತ್ತಾಗದು.

ಮೂರು ವರ್ಷಗಳಲ್ಲಿ ಎಂಟು ಸಾವು
ಟ್ರಾಫಿಕ್‌ ಪೊಲೀಸರ (ಪೂರ್ವ ಠಾಣೆ) ಅಂಕಿ ಅಂಶಗಳ ಪ್ರಕಾರ ನಂತೂರು ಜಂಕ್ಷನ್‌ನಲ್ಲಿ 2017 ರಲ್ಲಿ ಜನವರಿಯಿಂದ ಡಿಸೆಂಬರ್‌ 7 ರ ತನಕ ಸಂಭವಿಸಿದ ವಿವಿಧ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ತೀವ್ರ ಗಾಯ ಹಾಗೂ ನಾಲ್ವರು ಸಾಮಾನ್ಯ ಗಾಯಗೊಂಡಿದ್ದು, 4 ವಾಹನಗಳಿಗೆ ಹಾನಿಯಾಗಿದೆ. ಗುರುವಾರದ ಘಟನೆಯಲ್ಲೂ ಒಬ್ಬರು ಮೃತಪಟ್ಟು 17 ಮಂದಿ ಗಾಯಗೊಂಡಿದ್ದಾರೆ. 2016ರಲ್ಲಿ ಓರ್ವ ಸಾವು, 3 ಮಂದಿ ತೀವ್ರ ಗಾಯ, 6 ಜನ ಸಾಮಾನ್ಯ ಗಾಯ, 3 ವಾಹನಗಳು ಜಖಂಗೊಂಡಿವೆ. 2015 ರಲ್ಲಿ 5 ಜನ ಅಸುನೀಗಿದ್ದು, 5 ಮಂದಿ ತೀವ್ರ ಗಾಯ, 8 ಜನ ಸಾಮಾನ್ಯ ಗಾಯಗೊಂಡಿದ್ದು, 3 ವಾಹನಗಳಿಗೆ ಹಾನಿಯಾಗಿತ್ತು

61 ಲೈಸನ್ಸ್‌ ಅಮಾನತು
ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಅಕ್ಟೋಬರ್‌ ತಿಂಗಳಲ್ಲಿ ಒಟ್ಟು 61 ಜನರ ಲೈಸನ್ಸ್‌ ಅಮಾನತು ಮಾಡಿದೆ. ಅವುಗಳಲ್ಲಿ 39 ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣ ಹಾಗೂ 22 ಇತರ ಅಪರಾಧಗಳಿಗೆ ಸಂಬಂಧಿಸಿದ್ದು. 
ಜಿ.ಎಸ್‌. ಹೆಗಡೆ,
   ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು

ಎಷ್ಟೇ ದಂಡ ಹಾಕಿದರೂ ಅಷ್ಟಕ್ಕಷ್ಟೇ
ವಾಹನ ಚಾಲಕರಿಗೆ, ಕೆಲವು ಮಂದಿ ಬಸ್‌ ಚಾಲಕರಿಗೆ ಎಷ್ಟೇ ದಂಡ ಹಾಕಿದರೂ ಅಷ್ಟಕ್ಕಷ್ಟೇ. ನಂತೂರು ಜಂಕ್ಷನ್‌ಗೆ ಸಂಬಂಧಿಸಿ ರಾಷ್ಟ್ರೀಯ  ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ಜತೆ ಚರ್ಚಿಸಲಾಗುವುದು.
ಮಂಜುನಾಥ ಶೆಟ್ಟಿ,
   ಎ.ಸಿ.ಪಿ., ಸಂಚಾರ ವಿಭಾಗ

 ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next