Advertisement

ಮರೆಯಾಗುತ್ತಿರುವ ಆಲೆಮನೆಗೆ ಮರುಜೀವ ನೀಡಿದ ರೈತರು

09:52 AM Dec 17, 2019 | Sriram |

 ವಿಶೇಷ ವರದಿತೆಕ್ಕಟ್ಟೆ: ಆಧುನಿಕ ಭರಾಟೆಗೆ ಸಿಲುಕಿ ನಲುಗುತ್ತಿರುವ ಗ್ರಾಮೀಣ ಕೃಷಿ ಸಂಸ್ಕೃತಿ ಜತೆಗೆ ಗ್ರಾಮೀಣ ಭಾಗದ ರೈತರು ನೂರಾರು ಎಕರೆ ಕೃಷಿಭೂಮಿಯಲ್ಲಿ ಬೆಳೆದಿದ್ದ ಕಬ್ಬು ಕಟಾವಿಗೆ ಸಿದ್ಧವಾಗಿದ್ದು, ಕಬ್ಬು ಮಾರಾಟ ಮಾಡಲು ಸಮರ್ಪಕವಾದ ವ್ಯವಸ್ಥೆಯ ಕೊರತೆಯಿಂದಾಗಿ ಕೆದೂರು ಗ್ರಾ.ಪಂ. ವ್ಯಾಪ್ತಿಯ ಶಾನಾಡಿಯ ಪ್ರಗತಿಪರ ಸಾವಯವ ಕೃಷಿಕರಾದ ಶಾನಾಡಿ ರಾಮಚಂದ್ರ ಭಟ್‌ ಹಾಗೂ ಉಮಾನಾಥ ಶೆಟ್ಟಿ ಅವರು ಗ್ರಾಮೀಣ ಭಾಗದಲ್ಲಿ ಮರೆಯಾಗುತ್ತಿರುವ ಕಬ್ಬಿನ ಆಲೆಮನೆ (ಬೆಲ್ಲದ ಗಾಣ) ಮರುಜೀವ ತುಂಬುವ ಕೈಂಕರ್ಯದಲ್ಲಿ ತೊಡಗಿ ಮಾದರಿಯಾಗಿದ್ದಾರೆ.

Advertisement

ವಾರಾಹಿ ಕಾಲುವೆ ನೀರಿನಲ್ಲೇ ಬೆಳೆದ ಕಬ್ಬು
ಉಡುಪಿ ಜಿಲ್ಲೆಯಲ್ಲಿ 1980ರಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ವಾರಾಹಿ ಯೋಜನೆಗೆ ಏಕಕಾಲದಲ್ಲಿಯೇ ಚಾಲನೆ ದೊರಕಿದ್ದು, ವಾರಾಹಿ ಯೋಜನೆ ಮಾತ್ರ ಕುಂಟುತ್ತ ಸಾಗಿದ್ದು ರೈತರ ಕೃಷಿ ಭೂಮಿಗೆ ನೀರು ಹರಿದು ಬರುವಾಗ ಸಕ್ಕರೆ ಕಾರ್ಖಾನೆಗೆ ಮೂಲವಸ್ತುವಾದ ಕಬ್ಬು ಇಲ್ಲದೆ ಅನಿವಾರ್ಯವಾಗಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ರೈತರ ಬಹು ದಿನದ ಕನಸಾಗಿ ಉಳಿದಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಗೊಳ್ಳುವುದು ಎನ್ನುವ ಭರವಸೆಯಲ್ಲಿದ್ದಾರೆ. ಬೆಳೆದು ನಿಂತ ಕಬ್ಬಿನ ಬೆಳೆಯನ್ನು ಏನು ಮಾಡಬೇಕು ಎನ್ನುವ ಆತಂಕ ಗ್ರಾಮೀಣ ಭಾಗದ ಅದೆಷ್ಟೋ ರೈತರಲ್ಲಿ ಕಾಡತೊಡಗಿರುವುದು ವಾಸ್ತವ ಸತ್ಯ. ಪರಿಣಾಮ ರೈತರು ಸಮೂಹ ವೈಜ್ಞಾನಿಕವಾಗಿ ಚಿಂತನೆ ಮಾಡಿ ತಮ್ಮ ಹೊಲದ ಸಮೀಪದಲ್ಲಿಯೇ ಬೆಳೆದು ನಿಂತ ಕಬ್ಬುಗಳನ್ನು ಅರೆಯಲು ಕಬ್ಬಿನ ಆಲೆಮನೆಗೆ (ಬೆಲ್ಲದ ಗಾಣ) ಸ್ಥಾಪಿಸಿ ಬೆಲ್ಲ ಉತ್ಪಾದನೆಗೆ ಮುಂದಾಗಿದ್ದಾರೆ.


ಗ್ರಾಮಕ್ಕೆ ಹರಿದು ಬಂದ ವಾರಾಹಿ ಕಾಲುವೆ ನೀರನ್ನೇ ಸಮರ್ಪಕವಾಗಿ ಬಳಸಿಕೊಂಡ ರೈತರು ಸುಮಾರು 12 ಎಕರೆ ವಿಸ್ತೀರ್ಣದಲ್ಲಿ ಬೆಳೆದು ನಿಂತ ಕಬ್ಬು ಹೊರಜಿಲ್ಲೆಗಳಿಗೆ ಮಾರಾಟ ಮಾಡಿದ್ದರು ಕೂಡ ಸರಿಯಾದ ಬೆಂಬಲ ಬೆಲೆ ಸಿಗುವುದೋ ಇಲ್ಲವೋ ಎನ್ನುವ ಆತಂಕ ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ ಸಾಗಾಟ ವೆಚ್ಚವೇ ಅಧಿಕವಾಗುವುದನ್ನು ಅರಿತ ರೈತರು ಸುಮಾರು 6ಲಕ್ಷ ರೂ. ವ್ಯಯಿಸಿ ಯಂತ್ರೋಪಕರಣ ಹಾಗೂ ಘಟಕ ನಿರ್ಮಿಸುವ ಮೂಲಕ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸುವ ನಿಟ್ಟಿನಿಂದ ಅನುಭವಿ ತಂಡಗಳ ಮಾರ್ಗದರ್ಶನ ಪಡೆದು ಡಿ.16ರಂದು ಬೆಲ್ಲ ತಯಾರಿಕಾ ಘಟಕ ಆರಂಭಿಸಲಾಗಿದೆ.

ರಾಸಾಯನಿಕ ಮುಕ್ತ ಬೆಲ್ಲ ತಯಾರಿಯ ಉದ್ದೇಶ
ಬೆಲ್ಲದ ಗಾಣ ಗ್ರಾಮದಲ್ಲಿ ನಿರ್ಮಿಸಬೇಕು ಎನ್ನುವ ಮಹದಾಸೆಯನ್ನು ಹೊಂದಿದ ನನ್ನ ಸಹಪಾಠಿ ಸಾವಯವ ಕೃಷಿಕ ಉಮಾನಾಥ ಶೆಟ್ಟಿ ಅವರ ಯೋಚನೆಗೆ ಬೆನ್ನೆಲುಬಾಗಿ ನಿಂತೆ. ಹಿಂದೆ ನಮ್ಮ ಗ್ರಾಮದಲ್ಲಿದ್ದ ಅದೆಷ್ಟೋ ಆಲೆ ಮನೆಗಳು ಮರೆಯಾಗಿದ್ದು, ಇಂತಹ ಘಟಕಗಳು ನಮ್ಮ ಗ್ರಾಮದಲ್ಲಿ ಸ್ಥಾಪಿತವಾಗುವುದರಿಂದ ಮುಂದಿನ ದಿನಗಳಲ್ಲಿ ಪರಿಸರದಲ್ಲಿನ ಕಬ್ಬು ಬೆಳೆಗಾರರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುವುದು. ಒಟ್ಟಾರೆಯಾಗಿ ನಮ್ಮ ಗ್ರಾಮದಲ್ಲಿ ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಿಸಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ ಜತೆಗೆ ರೈತರ ಸಹಕಾರವೂ ಕೂಡ ಬಹಳ ಮುಖ್ಯ.
-ಶಾನಾಡಿ ರಾಮಚಂದ್ರ ಭಟ್‌,
ಬೆಲ್ಲದ ಗಾಣವನ್ನು ಸ್ಥಾಪಿಸಿದವರು

ಗ್ರಾಮಕ್ಕೆ ವರ
ಹಿಂದೆ ಕೋಣಗಳ ಸಹಾಯದಿಂದ ಬೆಲ್ಲದ ಗಾಣವನ್ನು ಬಾರಕೂರಿನ ಬೆಣ್ಣೆಕುದ್ರು ಪರಿಸರದಲ್ಲಿ ಸ್ಥಾಪಿಸಲಾಗಿದ್ದು, ಇಂದಿಗೂ ಬೆಣ್ಣೆಕುದ್ರು ಬೆಲ್ಲಕ್ಕೆ ಅತಿಯಾದ ಬೇಡಿಕೆ ಇದೆ. 40 ವರ್ಷದಿಂದ ನೈಸರ್ಗಿಕ ಬೆಲ್ಲ ಉತ್ಪಾದನೆ ಕಾಯಕದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದೇನೆ. ಬದಲಾದ ಕಾಲದಲ್ಲಿ ಯಂತ್ರಗಳನ್ನು ಉಪಯೋಗಿಸಿ ಕೆದೂರಿನ ಶಾನಾಡಿ ಗ್ರಾಮದಲ್ಲಿ ಕಬ್ಬು ಅರೆಯಲಾಗುತ್ತಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಿಂದ ಇಲ್ಲಿಗೆ ಬಂದಿದ್ದೇನೆ. ಮರೆಯಾದ ಆಲೆಮನೆಗಳು ಮತ್ತೆ ಮರುಜೀವ ಪಡೆದಿರುವುದು ಮುಂದಿನ ದಿನಗಳಲ್ಲಿ ಈ ಗ್ರಾಮಕ್ಕೆ ವರವಾಗಲಿದೆ. ಸುಮಾರು 12 ಡಬ್ಬ ಕಬ್ಬಿನ ಹಾಲಿನಲ್ಲಿ ಸರಾಸರಿ 50 ಕೆಜಿ ಬೆಲ್ಲ ತಯಾರಿಸಬಹುದು. ಇಂತಹ ಘಟಕಗಳ ಸ್ಥಾಪನೆಗೆ ಯುವ ಸಮುದಾಯಗಳು ಆಸಕ್ತಿ ತಳೆಯಬೇಕು.
-ರಾಜು ಪೂಜಾರಿ ಕುಮ್ರಗೋಡು ಬೆಣ್ಣೆಕುದ್ರು,
ಅನುಭವಿ ನೈಸರ್ಗಿಕ ಬೆಲ್ಲ ತಯಾರಕರು

ಯಂತ್ರ ಜೋಡಣೆ
ಇಂತಹ ಬೆಲ್ಲದ ತಯಾರಿಕಾ ಘಟಕದಲ್ಲಿ ಶೇ.75 ರಷ್ಟು ಯಂತ್ರಜೋಡಣಾ ಕಾರ್ಯವನ್ನೇ ನಮ್ಮ ತಂಡ ಮಾಡುತ್ತದೆ. 30 ವರ್ಷಗಳಿಂದ ಈ ಕಾರ್ಯದಲ್ಲಿ ನಾವು ತೊಡಗಿಕೊಂಡಿದ್ದು ಈಗಾಗಲೇ ಹಲವು ಭಾಗಗಳಲ್ಲಿ ರೈತರು ಇಂತಹ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ.
-ಶ್ರೀನಿವಾಸ್‌ ಬ್ರಹ್ಮಾವರ,
ಯಂತ್ರಗಳನ್ನು ಸಿದ್ದಪಡಿಸಿದವರು

Advertisement
Advertisement

Udayavani is now on Telegram. Click here to join our channel and stay updated with the latest news.

Next