Advertisement
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಗೆ ಸೇರಿದೆ ಸೀತಾರಾಮಪುರಂ ಎಂಬ ಪುಟ್ಟಹಳ್ಳಿ. ಅಲ್ಲಿ ಒಂದು ಅನಕ್ಷರಸ್ಥ ರೈತ ಕುಟುಂಬ. ಆ ಕುಟುಂಬದಲ್ಲಿ ಜನಿಸಿದವನೇ ಶ್ರೀಕಾಂತ್ ಬೊಳ್ಳಾ. ಸಾಮಾನ್ಯವಾಗಿ, ಗಂಡುಮಗು ಹುಟ್ಟಿದಾಗ, ಕುಲಪುತ್ರ ಬಂದ ಎಂಬ ಖುಷಿಯಲ್ಲಿ ಮನೆಮಂದಿಯೆಲ್ಲಾ ಸಂಭ್ರಮಿಸುವುದುಂಟು. ಆದರೆ, ಶ್ರೀಕಾಂತ್ ಹುಟ್ಟಿದಾಗ ಹಾಗೇನೂ ಆಗಲಿಲ್ಲವಂತೆ. ಕಾರಣ, ಮಗುವಿಗೆ ಹುಟ್ಟುತ್ತಲೇ ಅಂಧತ್ವ ಜೊತೆಯಾಗಿತ್ತು. ಅದನ್ನು ಕಂಡ ಸಂಬಂಧಿಕರು/ ನೆರೆಹೊರೆಯವರೆಲ್ಲ ಹೇಳಿದರಂತೆ: “ಈ ಮಗುವಿನಿಂದ ಏನೇನೂ ಉಪಯೋಗವಿಲ್ಲ. ನಿಮಗೆ ಇದು ಮುಂದೆ ಹೊರೆ ಆಗುತ್ತೆ. ಸಮಸ್ಯೆ ಆಗುತ್ತೆ. ಕುರುಡು ಮಗುವನ್ನು ಸಾಕುವುದು ಬಹಳ ಕಷ್ಟ. ನಿಮಗಿರೋದು ಅಂಗೈ ಅಗಲದ ಭೂಮಿ. ಈಗಲೇ ಮೂರು ಹೊತ್ತಿನ ಅನ್ನ ಸಂಪಾದನೆಗೆ ಒದ್ದಾಡ್ತಾ ಇದೀರ. ಅದು ಗೊತ್ತಿದ್ದೂ ಈ ಕುರುಡು ಮಗೂನ ಜೊತೇಲಿ ಇಟ್ಕೊಂಡ್ರೆ ಸಾಯೋತನಕ ವಿಪರೀತ ಕಷ್ಟ ಅನುಭವಿಸಬೇಕಾಗುತ್ತೆ. ಒಂದು ಕೆಲ್ಸ ಮಾಡಿ. ಅಟ್ಯಾಚ್‌ಮೆಂಟ್ ಬೆಳೆಯುವ ಮೊದಲೇ ಈ ಮಗುವನ್ನು ಮರೆತುಬಿಡಿ. ಹಾಲು ಕುಡಿಸುವಾಗ ಜೊತೆಗೇ ಒಂದು ಭತ್ತದ ಕಾಳನ್ನು ಮಗುವಿನ ಬಾಯಿಗೆ ಹಾಕಿಬಿಡಿ. ಆಗ ಉಸಿರಾಟದ ಸಮಸ್ಯೆಯಿಂದ ಮಗು ಕಣ್ಮುಚ್ಚುತ್ತೆ. ಎಡಗೈಲಿ ಕೊಟ್ಟ ದೇವರು, ಬಲಗೈಯಲ್ಲಿ ಕಿತ್ತುಕೊಂಡ ಅಂದುಕೊಂಡು ಸುಮ್ಮನೆ ಇದ್ದುಬಿಡಿ…’ ನೆಚ್ಚಿನ ಟೀಚರ್, ಬೊಲಾಂಟ್ ಕಂಪನಿಯ ನಿರ್ದೇಶಕಿ ಸ್ವರ್ಣಲತಾ ಜೊತೆ
ಇಂಥಾ ಯಾವ ಸಲಹೆಗಳಿಗೂ ಶ್ರೀಕಾಂತ್ ಬೊಳ್ಳಾನ ಹೆತ್ತವರು ಕಿವಿಗೊಡಲಿಲ್ಲ. “ನಮ್ಮ ಮಗು ನಮಗೆ ಹೊರೆಯಲ್ಲ, ಹೇಗೋ ಬದುಕಿಕೊಳ್ಳುತ್ತೆ ಬಿಡಿ’ ಎಂದುಬಿಟ್ಟರು. ವರ್ಷಗಳು ಉರುಳಿದವು. ಶ್ರೀಕಾಂತನಿಗೆ ಐದು ವರ್ಷವಾಯಿತು. ಇವನಿಗೆ ಕೃಷಿ ಕೆಲಸದ ಪರಿಚಯ ಮಾಡಿಕೊಡಬೇಕು. ಆನಂತರದಲ್ಲಿ ಹೇಗೋ ಬದುಕಿಕೊಳ್ತಾನೆ ಎಂದು ಯೋಚಿಸಿದ ಶ್ರೀಕಾಂತನ ತಂದೆ, ಮಗನನ್ನು ಜಮೀನಿನ ಬಳಿಗೆ ಕರೆದೊಯ್ದರು. ಆದರೆ, ಸಂಪೂರ್ಣ ಕುರುಡನಾಗಿದ್ದ ಮಗನಿಂದ ಕೃಷಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಗೊತ್ತಾದಾಗ, ಮುಂದೇನು ಮಾಡಬೇಕೆಂದು ತೋಚದೆ, ತಮ್ಮ ಊರಿನಿಂದ ಐದು ಕಿಲೋಮೀಟರ್ ದೂರವಿದ್ದ ಸರ್ಕಾರಿ ಶಾಲೆಗೆ ಸೇರಿಸಿಬಿಟ್ಟರು.
“ಸಮನ್ವಯ’ ಎನ್.ಜಿ.ಓ. ತಂಡದ ಜೊತೆ ಮುಂದೆ, ಹೈದರಾಬಾದ್‌ನಲ್ಲಿದ್ದ ಅಂಗವಿಕಲರ ಮಕ್ಕಳ ಶಾಲೆಯಲ್ಲಿ ಶ್ರೀಕಾಂತ್‌ನ ಶಿಕ್ಷಣ ಮುಂದುವರಿಯಿತು. ಸಮಸ್ಯೆಗಳು ಇಲ್ಲೂ ಮುಂದುವರಿದವು. ಈ ವೇಳೆಗೆ ಮಾನಸಿಕವಾಗಿ ಸ್ವಲ್ಪ ಗಟ್ಟಿಯಾಗಿದ್ದ ಶ್ರೀಕಾಂತ, ಟೀಕೆಯ ಮಾತುಗಳನ್ನಾಡುವವರು ನನಗೆ ಕಾಣಿಸುವುದಿಲ್ಲ. ಅವರ ಮಾತುಗಳು ನನಗೆ ಕೇಳಿಸುವುದೂ ಇಲ್ಲ ಎಂದುಕೊಂಡೇ ಶ್ರದ್ಧೆಯಿಂದ ಓದಲು ಕುಳಿತ. ಆಗಲೇ ಅಬ್ದುಲ್ ಕಲಾಂ ಅವರ ಕಣ್ಣಿಗೂ ಬಿದ್ದ. ಈತನ ಶೈಕ್ಷಣಿಕ ಸಾಧನೆ ಕಂಡ ಕಲಾಂ, ವೆರಿಗುಡ್ ಅಂದಿದ್ದರು. ಮುಂದೆ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ, ಇಡೀ ಆಂಧ್ರಪ್ರದೇಶ ಶ್ರೀಕಾಂತನನ್ನು ಬೆರಗು, ಅಭಿಮಾನದಿಂದ ನೋಡಿತ್ತು. ಕಾರಣ, ಸಂಪೂರ್ಣ ಅಂಧತ್ವ ಹೊಂದಿದ್ದ ಈ ಹುಡುಗ ಶೇ. 90 ಅಂಕಗಳೊಂದಿಗೆ ಪಾಸಾಗಿದ್ದ.
Related Articles
ಲಂಡನ್ ಪ್ರಶಸ್ತಿ ಸಮಾರಂಭದಲ್ಲಿ ಉದ್ಯಮಿ ಲಕ್ಷ್ಮಿ ಮಿತ್ತಲ್ ಜೊತೆ
Advertisement
“ಅಲ್ಲ ಸಾರ್, ಓದುವವನು ನಾನು. ಆದ್ರೆ ಇಂಥ ಕೋರ್ಸ್‌ನ್ನೇ ಓದು ಅನ್ನೋಕೆ ನೀವ್ಯಾರು?’ ಎಂದು ತಿರುಗಿ ಪ್ರಶ್ನಿಸಿದ ಶ್ರೀಕಾಂತ್. ಅಷ್ಟೇ ಅಲ್ಲ, ಸೈನ್ಸ್ ವಿಭಾಗದಲ್ಲಿ ತನಗೆ ಸೀಟ್ ನಿರಾಕರಿಸಿದ ಶಿಕ್ಷಣ ಇಲಾಖೆಯ ನೀತಿಯನ್ನು ಪ್ರಶ್ನಿಸಿ ಕೋರ್ಟಿಗೂ ಹೋದ. ಅಲ್ಲಿ ಆರು ತಿಂಗಳವರೆಗೆ ವಿಚಾರಣೆ ನಡೆಯಿತು. ಮುಂದೆ ಏನೇ ತೊಂದರೆಯಾದರೂ ಅದಕ್ಕೆ ನಾನೇ ಜವಾಬ್ದಾರ ಎಂದು ಮುಚ್ಚಳಿಕೆ ಬರೆಸಿಕೊಂಡು ಸೀಟ್ ಕೊಡಬಹುದು ಎಂದು ನ್ಯಾಯಾಲಯ ಆದೇಶಿಸಿತು. ಆ ಸಂದರ್ಭವನ್ನು ನೆನಪಿಸಿಕೊಂಡು ಶ್ರೀಕಾಂತ್ ಹೇಳುತ್ತಾನೆ : “ನ್ಯಾಯಾಲಯದ ಆದೇಶ ನನ್ನ ಪರವಾಗಿ ಬರುವ ವೇಳೆಗೆ ಆರು ತಿಂಗಳು ಕಳೆದುಹೋಗಿದ್ದವು. ಮುಕ್ಕಾಲು ಭಾಗ ಪಾಠಗಳನ್ನು ಬೋಧಿಸಿಯಾಗಿತ್ತು. ಇರಲಿ, ಇಂಥ ಸವಾಲುಗಳಿಗೆ ಅಂಜಬಾರದು ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಹತ್ತಾರು ಮಂದಿಯನ್ನು ಕಾಡಿ, ಬೇಡಿ ಪಿಯುಸಿ ಪಠ್ಯದ ಆಡಿಯೊ ಕೆಸೆಟ್‌ಗಳನ್ನು ಸಂಗ್ರಹಿಸುವಲ್ಲಿ ಕಡೆಗೂ ಯಶಸ್ವಿಯಾದೆ. ಮರುದಿನದಿಂದ ಕೆಸೆಟ್‌ಗಳನ್ನು ಕೇಳುತ್ತಲೇ ಬದುಕುವುದು ನನ್ನ ದಿನಚರಿಯಾಯಿತು. ನಂಬಿದರೆ ನಂಬಿ, ಬಿಟ್ರೆ ಬಿಡಿ. ಪಿಯುಸಿ ಕಲಿಕೆಯ ಎರಡು ವರ್ಷಗಳಲ್ಲಿ ನನಗೆ ಕೆಸೆಟ್‌ನ ಮಾತುಗಳಲ್ಲದೆ ಬೇರ್ಯಾವ ಮಾತುಗಳೂ ಕೇಳಿಸಲಿಲ್ಲ. ಕಡೆಗೊಮ್ಮೆ ಸೆಕೆಂಡ್ ಪಿಯುಸಿಯ ಫಲಿತಾಂಶವೂ ಬಂತು. ನಾನು ಕಾಲೇಜಿನ ಟಾಪರ್ ಅನ್ನಿಸಿಕೊಂಡಿದ್ದೆ. ಶೇ.98 ಅಂಕಗಳೊಂದಿಗೆ ಗೆಲುವಿನ ಧ್ವಜ ಹಾರಿಸಿದ್ದೆ…’
ಸೈನ್ಸ್‌ನಲ್ಲಿ ಶೇ.98 ಪರ್ಸೆಂಟ್ ಪಡೆದವರು ಏನ್ಮಾಡ್ತಾರೆ ಹೇಳಿ? ಎಂಜಿನಿಯರಿಂಗ್‌ಗೆ ಸೇರೊತಾರೆ. ಅದೇ ಉದ್ದೇಶದಿಂದ ಶ್ರೀಕಾಂತ್ ಕೂಡ ಐಐಟಿ ಹಾಗೂ ಬಿಟ್ಸ್ ಪಿಲಾನಿ ಸೇರಿದಂತೆ ಐದಾರು ಪ್ರತಿಷ್ಠಿತ ಕಾಲೇಜುಗಳಿಗೆ ಅರ್ಜಿ ಹಾಕಿದರೆ, ಅಲ್ಲಿನವರು ಎಂಟ್ರೆನ್ಸ್ ಎಕ್ಸಾಂ ಬರೆಯುವುದಕ್ಕೇ ಅವಕಾಶ ಕೊಡಲಿಲ್ಲವಂತೆ. ಸಂಪೂರ್ಣ ಅಂಧತ್ವ ಹೊಂದಿರುವ ವಿದ್ಯಾರ್ಥಿ ಎಂಜಿನಿಯರಿಂಗ್ ಓದಲು ಸಾಧ್ಯವೇ ಇಲ್ಲ. ಆ ಕಾರಣದಿಂದಲೇ ನಿಮಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂಬ ಕಾರಣ ಹೇಳಿಯೇ ಆ ಕಾಲೇಜುಗಳ ಪ್ರವೇಶವನ್ನು ನಿರಾಕರಿಸಿದ್ದವು.
ಶ್ರೀಕಾಂತ್ ಹೇಳುತ್ತಾರೆ: “ಅಂಧತ್ವ ನಡುವಯಸ್ಸಿನಲ್ಲೆಲ್ಲೋ ನನ್ನ ಜೊತೆಯಾಗಲಿಲ್ಲ. ಅದು ನನಗೆ ಹುಟ್ಟಿನಿಂದಲೇ ಜೊತೆಯಾಗಿತ್ತು. ಆ ಸಮಸ್ಯೆಯನ್ನು ಜೊತೆಗಿಟ್ಟುಕೊಂಡೇ ಪ್ರತಿ ವರ್ಷವೂ ಶೇ. 90 ಅಂಕಗಳೊಂದಿಗೇ ನಾನು ಪಾಸ್ ಆಗಿದ್ದೆ. ನಮ್ಮ ಕಾಲೇಜುಗಳು, ಪ್ರಿನ್ಸಿಪಾಲರುಗಳು, ಆಡಳಿತಮಂಡಳಿಯವರು ಅದೇನನ್ನೂ ಗಮನಿಸಲೇ ಇಲ್ಲ. ನೀನು ಕುರುಡ ಅಲ್ವೇನಯ್ನಾ, ಇದೆಲ್ಲಾ ನಿನಗೆ ಯಾಕೆ ಬೇಕು? ಕಣ್ಣಿಲ್ಲದ ನೀನು ಎಂಜಿನಿಯರಿಂಗ್ ಆಗಿ ಏನು ಸಾಧಿಸಬೇಕು? ಎಂದೆಲ್ಲಾ ಉತ್ಸಾಹ ಕುಗ್ಗಿಸುವಂಥ ಮಾತುಗಳನ್ನಾಡಿದರು. ಇಂಥವರೊಂದಿಗೆ ವಾದಿಸಿ ಪ್ರಯೋಜನವಿಲ್ಲ. ಭಾರತದಲ್ಲಿದ್ದು ಕ್ಷಣಕ್ಷಣವೂ ಅವಮಾನಕ್ಕೆ ಗುರಿಯಾಗುವ ಬದಲು ವಿದೇಶಕ್ಕೆ ಹೋಗಿ ಓದುವುದೇ ಮೇಲು ಅನ್ನಿಸಿತು. ನಾನು ತಡಮಾಡಲಿಲ್ಲ. ಅಮೆರಿಕದ ವಿವಿಗಳಿಗೆ ಅರ್ಜಿ ಹಾಕಿದೆ. ಅಲ್ಲಿ ಒಂದೆರಡಲ್ಲ, ನಾಲ್ಕು ಪ್ರತಿಷ್ಠಿತ ಕಾಲೇಜುಗಳಲ್ಲಿ (ಭಾರೀ ಸ್ಕಾಲರ್‌ಶಿಪ್ ಸಹಿತ) ಸೀಟ್ ಸಿಕ್ಕಿತು. ಕಡೆಗೆ, ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಆಯ್ಕೆ ಮಾಡಿಕೊಂಡೆ.
ಭಾರತದಲ್ಲಿ ಆದವಲ್ಲ, ಅಂಥ ಯಾವ ಅನುಭವವೂ ಅಮೆರಿಕದಲ್ಲಿ ಆಗಲಿಲ್ಲ. ಅಲ್ಲಿನ ಜನ ಈ ಹುಡುಗನ ಛಲವನ್ನು ಮೆಚ್ಚಿಕೊಂಡರು. ಬುದ್ಧಿವಂತಿಕೆಗೆ ತಲೆದೂಗಿದರು. ಓದು ಮುಗಿಯುವ ಮೊದಲೇ ಭಾರೀ ಸಂಬಳದ ಆಮಿಷವೊಡ್ಡಿ – “ಇಲ್ಲಿಯೇ ಇದ್ದು ಬಿಡಿ. ಕೆಲಸ ಕೊಡಲಿಕ್ಕೆ ನಾವು ಸಿದ್ಧರಿದ್ದೇವೆ’ ಎಂದರು. ಆದರೆ ಶ್ರೀಕಾಂತ್‌ನ ಯೋಚನೆಯೇ ಬೇರೆಯಾಗಿತ್ತು. ಅಂಗವೈಕಲ್ಯ ಎಂಬ ಶಾಪದಿಂದ ಭಾರತದ ಮಕ್ಕಳು ಎಷ್ಟೆಲ್ಲಾ ತೊಂದರೆಗಳಿಗೆ ಈಡಾಗುತ್ತಿದ್ದಾರೆ ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಆ ಮಕ್ಕಳಿಗೆ ಹೇಗಾದರೂ ನೆರವಾಗಬೇಕು. ಅವರಿಗೆ ನೌಕರಿ ಕೊಡುವಂಥ ಒಂದು ಉದ್ಯಮ ಆರಂಭಿಸಬೇಕು ಎಂಬುದು ಅವನ ಉದ್ದೇಶವಾಗಿತ್ತು. ಆತ ಸೀದಾ ಹೈದರಾಬಾದ್‌ಗೆ ಬಂದ. ಈ ಸಂದರ್ಭದಲ್ಲಿ ಸ್ವರ್ಣಲತಾ ಎಂಬ ಸಹೃದಯಿ ಶಿಕ್ಷಕಿ ಹಾಗೂ ರವಿ ಮಾಂತಾ ಎಂಬ ಉದ್ಯಮಿಯ ನೆರವು ಶ್ರೀಕಾಂತ್‌ಗೆ ಸಿಕ್ಕಿತು. ನಂತರದ ಕೆಲವೇ ದಿನಗಳಲ್ಲಿ ‘ಸಮನ್ವಯ’ ಎಂಬ ಎನ್‌ಜಿಓ ಅಸ್ತಿತ್ವಕ್ಕೆ ಬಂತು.
ಈಗ ಏನಾಗಿದೆ ಗೊತ್ತೆ? ಕೇವಲ 25 ವರ್ಷದ ಶ್ರೀಕಾಂತ್ ಬೊಳ್ಳಾ ‘ಬೊಲಾಂಟ್’ ಇಂಡಸ್ಟ್ರೀಸ್ ಎಂಬ ಸುಮಾರು 50 ಕೋಟಿ ಮೌಲ್ಯದ ಉದ್ದಿಮೆ ಸ್ಥಾಪಿಸಿದ್ದಾರೆ. ಹೈದರಾಬಾದ್, ತೆಲಂಗಾಣ ಸೇರಿದಂತೆ ಹಲವು ಕಡೆಗಳಲ್ಲಿ ಅದರ ಶಾಖೆಗಳಿವೆ. ಅಲ್ಲಿ ಪರಿಸರಸ್ನೇಹಿ ವಸ್ತುಗಳು ತಯಾರಾಗುತ್ತವೆ. ಶ್ರೀಕಾಂತ್‌ನ ಯಶೋಗಾಥೆ ತಿಳಿದು ಬೆರಗಾಗಿರುವ ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ, ಈತನ ಉದ್ಯಮದಲ್ಲಿ ತಾವೂ ಬಂಡವಾಳ ಹೂಡಿದ್ದಾರೆ. ಅವಿದ್ಯಾವಂತರು, ಅಂಗವಿಕಲರಿಗೇ ಹೆಚ್ಚಾಗಿ ತಮ್ಮ ಕಂಪನಿಯಲ್ಲಿ ಕೆಲಸ ಕೊಟ್ಟಿರುವ ಶ್ರೀಕಾಂತ್, ಅಂಧ ಮಕ್ಕಳಿಗಾಗಿ ಬ್ರೈಲ್ ಲಿಪಿಯ ಪುಸ್ತಕಗಳನ್ನು ಉಚಿತವಾಗಿ ನೀಡಿದ್ದಾರೆ. ಈವರೆಗೆ, ಸುಮಾರು 1000ಕ್ಕೂ ಹೆಚ್ಚು ಶಾಲೆಗಳಲ್ಲಿ ತಮ್ಮ ಬದುಕಿನ ಕಥೆ ಹೇಳಿಕೊಂಡಿದ್ದಾರೆ.
ಅಮೆರಿಕದಲ್ಲಿ ಓದುವುದು, ಅಲ್ಲಿಯೇ ನೌಕರಿ ಹಿಡಿಯುವುದೇ ಜೀವನ ಎಂದು ಹೆಚ್ಚಿನವರು ನಂಬಿರುವಾಗ- ನನ್ನಂಥ ಸಾವಿರಾರು ಅಂಗವಿಕಲರ ಬಾಳಿಗೆ ನೆರವಾಗಬೇಕೆಂಬುದೇ ನನ್ನಾಸೆ ಎಂದಿರುವ, ಹೇಳಿದಂತೆಯೇ ಬದುಕುತ್ತಿರುವ ಶ್ರೀಕಾಂತ್ ಬೊಳ್ಳಾನಿಂದ ನಾವೆಲ್ಲಾ ಕಲಿಯುವುದು ಬಹಳಷ್ಟಿದೆ, ಅಲ್ಲವೇ?
ಎ.ಆರ್. ಮಣಿಕಾಂತ್