ಜಗಳೂರು: ಸೊಕ್ಕೆ ಗ್ರಾಮದಲ್ಲಿ 3 ದಿನಕ್ಕೊಮ್ಮೆ ಮನೆಗೆ 4 ಬಿಂದಿಗೆ ನೀರು ಮಾತ್ರ ತಾಲೂಕಾಡಳಿತ ಪೂರೈಸುತ್ತಿದ್ದು, ಈ ನೀರು ಸಾಕಾಗದೇ ಗ್ರಾಮಸ್ಥರು ಸುಮಾರು ಒಂದೂವರೆ ಕಿ.ಮಿ ದೂರದ ಜಮಿನುಗಳಿಗೆ ತೆರಳಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಸೊಕ್ಕೆ ಗ್ರಾಮವು ಹೋಬಳಿ ಮತ್ತು ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದು ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಹೊಂದಿದೆ.
12 ಬೋರಿದ್ದರೂ ನೀರಿಲ್ಲ: ಗ್ರಾಮದಲ್ಲಿ 12 ಬೋರ್‌ವೆಲ್ ಪೈಕಿ 5 ಬೋರ್‌ಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ನೀರು ಬರುತ್ತಿದ್ದು ಉಳಿದ ಬೋರ್‌ಗಳು ಬತ್ತಿವೆ. ನೀರಿರುವ ಬೋರ್‌ಗಳಿಂದ ಸಂಗ್ರಹಣಾ ತೊಟ್ಟಿ ಭರ್ತಿ ಮಾಡಿ ಗ್ರಾಮಸ್ಥರಿಗೆ ನೀರು ಪೂರೈಸಲಾಗುತ್ತಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದರೂ ಸಹ ಖಾಸಗಿ ಬೋರ್‌ವೆಲ್ನಿಂದ ನೀರು ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಅಥವಾ ಟ್ಯಾಂಕರ್ ನೀರು ಪೂರೈಸಲು ಮುಂದಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
1.5 ಕಿ.ಮೀ ದೂರದಿಂದ ನೀರು: ಸೊಕ್ಕೆ ಗ್ರಾಮದ ಸುತ್ತ ಮುತ್ತಲಿನ ಜಮಿನುಗಳಿಂದ ಪ್ರತಿದಿನ ಜನರು ಕೈಗಾಡಿಯಲ್ಲಿ ನೀರು ತರುವ ಸ್ಥಿತಿ ಇದೆ. ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸುಡು ಬಿಸಿಲಿನಲ್ಲಿ ನೀರು ತರುವುದೇ ಗ್ರಾಮಸ್ಥರ ಕಾಯಕವಾಗಿದೆ. ಎಲ್ಲರಿಗೂ ನೀರು ಸಿಗದೇ ಮಹಿಳೆಯರು ನಿತ್ಯ ಜಗಳವಾಡುವುದು ಸಾಮಾನ್ಯವಾಗಿದೆ.
ಇರುವ ಬೋರ್‌ವೆಲ್ಗಳಲ್ಲಿ ಗ್ರಾಮಸ್ಥರಿಗೆ ನೀರನ್ನು ನೀಡಲಾಗುತ್ತಿತ್ತು. ಈಗ ಸಮಸ್ಯೆ ತೀವ್ರಗೊಳ್ಳುತ್ತಿದ್ದು ಈ ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಪಿಡಿಓಗೆ ಸೂಚನೆ ನೀಡಲಾಗುವುದು.
•
ಕೆ.ಓ.ಜಾನಕಿರಾಮ್,
ತಾಪಂ ಇಓ, ಜಗಳೂರು.
ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದರೂ ಸಹ ಟ್ಯಾಂಕರ್ ಅಥವಾ ಖಾಸಗಿ ಬೋರ್‌ವೆಲ್ ಮೂಲಕ ನೀರು ತರುವ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಯವರು ಮಾಡುತ್ತಿಲ್ಲ.
•
ಪರಶುರಾಮ, ಲಕ್ಷ್ಮಣ, ಗ್ರಾಮಸ್ಥರು