ಜಗಳೂರು: ತಾಲೂಕಿನ ರಂಗಯ್ಯನ ದುರ್ಗ ಅರಣ್ಯ ಪ್ರದೇಶದ ತಪ್ಪಲಿನಲ್ಲಿರುವ ಆರಾಧ್ಯ ದೇವತೆ ಮಡ್ರಳ್ಳಿ ಚೌಡಮ್ಮ ದೇವಸ್ಥಾನದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತಾ ದಿಗಳಿಗೆ ತೀವ್ರ ಸಮಸ್ಯೆ ಉಂಟಾಗಿದ್ದರೂ ನೀರಿನ ವ್ಯವಸ್ಥೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಭಕ್ತರು ದೂರಿದ್ದಾರೆ.
ತಾಲೂಕಿನ ಗುರುಸಿದ್ದಪುರ ಗ್ರಾಮದ ಸಮೀಪವಿರುವ ರಂಗಯ್ಯನ ದುರ್ಗ ಅರಣ್ಯ ತಪ್ಪಲಿನಲ್ಲಿ ಈ ಭಾಗದ ಆರಾಧ್ಯ ದೇವಿ ಮಡ್ರಳ್ಳಿ ಚೌಡಮ್ಮ ದೇವಿ ನೆಲೆಸಿದ್ದು, ದೇವಿಯ ಸ್ಥಾನಕ್ಕೆ ಪ್ರತಿನಿತ್ಯ ನೂರಾರು ಮಂದಿ ದರ್ಶನಕ್ಕೆ ಬರುತ್ತಾರೆ ಮಂಗಳವಾರ ಮತ್ತು ಶುಕ್ರವಾರ ತಾಲೂಕು ಅಲ್ಲದೇ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವಿವಾಹ, ನಾಮಕರಣ, ಪರುವು ಮೊದಲಾದ ಕಾರ್ಯಕ್ರಮಗಳೂ ಜರುಗುತ್ತವೆ.
ಈ ಕಾರ್ಯಕ್ರಮಗಳಿಗೆ ಮತ್ತು ದರ್ಶನಕ್ಕೆ ಬರುವ ಭಕ್ತರಿಗೆ ಕೈ ಕಾಲು ತೊಳೆಯಲು, ಕುಡಿಯಲು ಹಾಗೂ ಅಡುಗೆ ಮಾಡಲು ನೀರಿನ ಅವಶ್ಯಕತೆ ಇದ್ದು, ನೀರಿಲ್ಲದೇ ಭಕ್ತಾದಿಗಳು ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದಲ್ಲಿ ಮೂರು ಬೋರ್‌ವೆಲ್ ಗಳಿದ್ದು, ಒಂದು ಬೋರವೆಲ್‌ನಲ್ಲಿ ಅಂರ್ತಜಲ ಕೊರತೆಯಿಂದ ನೀರು ಬರುತ್ತಿಲ್ಲ. ಎರಡನೇ ಬೋರವೆಲ್ ಅಪರಿಚಿತ ವಾಹನ ಹಾಯ್ದು ಹಾಳಾಗಿದ್ದು, ನೀರು ಬರುತ್ತಿಲ್ಲ. ಮೂರನೆ ಬೊರವೆಲ್ ದೇವಸ್ಥಾನದಿಂದ ದೂರದಲ್ಲಿದ್ದು, ಇಲ್ಲಿಂದ ನೀರನ್ನು ದೇವಸ್ಥಾನ ಸಮೀಪವಿರುವ ನೀರಿನ ಟ್ಯಾಂಕ್‌ಗೆ ಸರಬರಾಜು ಮಾಡಿದರೆ ಅನುಕೂಲವಾಗುತ್ತದೆ ಎಂಭುದು ಭಕ್ತರ ಅಂಬೋಣ. ನೀರಿನ ವ್ಯವಸ್ಥೆ ಮಾಡುವಂತೆ ಪಂಚಾಯಿತಿ ಗಮನಕ್ಕೆ ತಂದರೆ ಪಿಡಿಒ ಅಮಾನತುಗೊಂಡಿದ್ದಾರೆ.
ಪಂಚಾಯಿತಿಯಲ್ಲಿ ಯಾರೂ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ದೇವಸ್ಥಾನ ಸಮೀಪದ ವ್ಯಾಪಾರಿಗಳು ದೂರುತ್ತಾರೆ.