Advertisement

ನೀರಿನ ಮರು ಬಳಕೆ ಇಂದಿನ ಅಗತ್ಯ

10:17 AM Jul 20, 2019 | Naveen |

ಜಗಳೂರು: ಗ್ರಾಮಗಳಲ್ಲಿ ಬಳಕೆ ಮಾಡಿದ ನೀರನ್ನು ವ್ಯರ್ಥಗೊಳಿಸದೆ ಒಂದೆಡೆ ಶೇಖರಿಸಿ ಬಳಕೆ ಮಾಡಬಹುದು ಎಂದು ಮಣ್ಣು ಸಂರಕ್ಷಣೆ ಹಾಗೂ ಜಲಶಕ್ತಿ ಪರಿಶೀಲನಾ ಕೇಂದ್ರ ತಂಡದ ಮುಖ್ಯಸ್ಥ ಡಾ| ವಿಶಾಲ್ ಪ್ರತಾಪ್‌ಸಿಂಗ್‌ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.

Advertisement

ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಣ್ಣು ಸಂರಕ್ಷಣೆ ಮತ್ತು ಮತ್ತು ಜಲಶಕ್ತಿ ಯೋಜನೆಯಡಿ ಮಾಡಿರುವ ಕಾಮಗಾರಿಗಳನ್ನು ಪರಿಶೀಲಿಸಿ, ನಂತರ ಬಿಳಿಚೋಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಣ್ಣು ಸಂರಕ್ಷಣೆ ಮತ್ತು ಜಲಶಕ್ತಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮಸ್ಥರು ಬಳಕೆ ಮಾಡಿದ ಚರಂಡಿ ನೀರನ್ನು ಎಲ್ಲಿಗೆ ಬಿಡುತ್ತೀರಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ್‌ ಕುಮಾರ್‌ರನ್ನು ಪ್ರಶ್ನಿಸಿದಾಗ, ಬಳಕೆ ಮಾಡಿದ ನೀರನ್ನು ಊರ ಹೊರಗಿನ ಹಳ್ಳಕ್ಕೆ ಬಿಡುತ್ತೇವೆ ಎಂದರು.

ಪ್ರತಿನಿತ್ಯ ಪ್ರತಿಯೊಬ್ಬರು ಸ್ನಾನ, ಬಟ್ಟೆ ಮತ್ತು ಪಾತ್ರೆ ತೊಳೆಯುವುದು ಸೇರಿದಂತೆ ಇತರೆ ಬಳಕೆಗೆ ಸಾವಿರಾರು ಲೀಟರ್‌ ನೀರು ಚರಂಡಿ ಮೂಲಕ ಹಳ್ಳ ಸೇರಿ ವ್ಯರ್ಥವಾಗುತ್ತದೆ.

ಗ್ರಾಮದ ಹೊರಭಾಗದಲ್ಲಿ ದೊಡ್ಡ ಗುಂಡಿಯನ್ನು ತೆಗೆದು, ಅದರಲ್ಲಿ ಗ್ರಾಮಸ್ಥರು ಬಳಕೆ ಮಾಡಿದ ಚರಂಡಿ ನೀರು ಶೇಖರಿಸಿದರೆ ಕೆಲವು ದಿನಗಳ ನಂತರ ಈ ಕೊಳಚೆ ನೀರಿನಲ್ಲಿರುವ ಗಟ್ಟಿ ಪದಾರ್ಥಗಳು ತಳದಲ್ಲಿ ಶೇಖರಣೆಯಾಗುತ್ತವೆ. ಮೇಲೆ ತಿಳಿ ನೀರು ನಿಲ್ಲುತ್ತದೆ. ಆ ನೀರನ್ನು ನೀವು ಶುದ್ಧೀಕರಿಸಿ ಬಳಕೆ ಮಾಡಿಕೊಳ್ಳಬಹುದು. ತಳದಲ್ಲಿ ಶೇಖರಣೆಯಾದ ಗಟ್ಟಿ ಪದಾರ್ಥಗಳು ಕೊಳೆತು ಗುಣಮಟ್ಟದ ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ಅದನ್ನೂ ಬಳಸಬಹುದು. ಈ ರೀತಿ ಮಾಡುವುದರಿಂದ ಅಂರ್ತಜಲ ಮಟ್ಟ ಹೆಚ್ಚಾಳವಾಗುತ್ತದೆ. ಈ ಪದ್ಧತಿಯನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಅಳವಡಿಸಿಕೊಳ್ಳಬೇಕು ಎಂದರು.

Advertisement

ಕೃಷಿ ಇಲಾಖೆಯಿಂದ ಹೊಸಕೆರೆ ಸಮೀಪ ಇಳಿಜಾರು ಪ್ರದೇಶದಲ್ಲಿ ಬಂಡ್‌ ಹಾಗೂ ಬದು ನಿರ್ಮಾಣ ಮಾಡಿದ್ದು ಅಂರ್ತಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಮಾಡಿ ಕೆರೆಯಲ್ಲಿ ಮಳೆ ನೀರು ಇಂಗುವಂತೆ ಮಾಡಬೇಕಾಗಿದೆ.

ಸಕಲ ಜೀವಿಗಳಿಗೆ ನೀರು ಅತೀ ಅವಶ್ಯಕವಾಗಿ ಬೇಕು. ನೀರಿನ ಸಮರ್ಪಕ ಬಳಕೆ ಕುರಿತು ನಾವೆಲ್ಲ ಅರಿವು ಹೊಂದಬೇಕಾಗಿದೆ. ಜಲಸಿರಿ ಯೋಜನೆಯ ಉದ್ದೇಶ ಅಂರ್ತಜಲ ಮಟ್ಟ ಹೆಚ್ಚಿಸುವುದು. ಇದಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದರು.

ಸಭೆಗೂ ಮುನ್ನ ಅಧಿಕಾರಿಗಳ ತಂಡ ತಾಲೂಕಿನ ಹೊಸಕೆರೆ, ಗುತ್ತಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇ ಅರಿಕೆರೆ ಕೆರೆ, ಕಲ್ಲೇನಹಳ್ಳಿಯ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯ ವಿಜ್ಞಾನಿ ಡಾ| ದೇವಿತಾ ರಾಜು, ಪ್ರಭಾರಿ ಈಒ ವೀರಭದ್ರಸ್ವಾಮಿ , ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಿಡಿಒ ಪ್ರಭಾಕರ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next