ಜಗಳೂರು: ಶುಕ್ರವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ಹಿರೇಮಲ್ಲನಹೊಳೆ ಸಮೀಪವಿರುವ ಚಿನ್ನಗರಿ ನದಿ ಸುಮಾರು ಅರ್ಧ ಟಿಎಂಸಿ ನೀರು ಸಂಗ್ರಹಗೊಂಡಿದೆ.
ತಾಲೂಕಿನ ಕಲ್ಲದೇವರಪುರ, ತೋರಣಗಟ್ಟೆ, ದೋಣಿಹಳ್ಳಿ, ಮುಸ್ಟೂರು, ಸಿದ್ದಿಹಳ್ಳಿ, ಮೂಡಲ ಮಾಚೀಕೆರೆ, ಹಿರೆಮಲ್ಲನ ಹೊಳೆ ಸೇರಿದಂತೆ ಸುಮಾರು 50ಕ್ಕೂ ಅ ಧಿಕ ಗ್ರಾಮಗಳಲ್ಲಿ ನದಿ ನೀರಿನಿಂದ ಅಂತರ್ಜಲ ಹೆಚ್ಚಾಗುತ್ತಿದೆ. ಹಿರೇ ಮಲ್ಲನಹೋಳೆ ಜೀವನಾಡಿ ಎಂದೇ ಕರೆಯುವ ಚಿನ್ನಗರಿ ನದಿಯು ಚಿತ್ರದುರ್ಗದ ಕಾತ್ರಳ್ ಕೆರೆಯಿಂದ ಸಂಗೇನಹಳ್ಳಿ ಕೆರೆಯ ಮೂಲಕ ದೋಣೆಹಳ್ಳಿ, ಹಿರೇ ಮಲ್ಲನಹೊಳೆಯ ಜಿನಿಗಿ ಹಳ್ಳ ತಲುಪಿ ನಂತರ ಚಿಕ್ಕಮಲ್ಲನಹೊಳೆ, ಅಬ್ಬನೆಹಳ್ಳಿ, ತೋರೆಕೊಲಂನ ಹಳ್ಳಿಯಿಂದ ಮೊಳಕಾಲ್ಮೂರು ನಿಂದ ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನ ತಾಳಿಕೆರೆ ಸಮೀಪವಿರುವ ಬಿಟಿಪಿ ಡ್ಯಾಂಗೆ ಸೇರುತ್ತದೆ.
ಈ ಭಾಗದ ನೀರು ಪೋಲಾಗಬಾರದು ಎಂಬ ಉದ್ದೇಶದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಅಂದಿನ ಮೈಸೂರು ಅರಸ ಶ್ರೀಕಂಠದತ್ತ ಕೃಷ್ಣ ರಾಜ ಒಡೆಯರ ಕಾಲದಲ್ಲಿ ಹಿರೆಮಲ್ಲನ ಹೊಳೆ ಹತ್ತಿರ ಜಿನಿಗಿ ಹಳ್ಳಕ್ಕೆ ನಾಲ್ಕು ಬ್ಯಾರೇಜ್‌ನ ಚಿಕ್ಕ ಅಣೆಕಟ್ಟು ಕಟ್ಟಲಾಯಿತು. ಇದರಲ್ಲಿ ಎರಡು ಬ್ಯಾರೇಜ್ ನೀರು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಿಗೆ ಸೇರಿದೆ. ಆದರೆ ರಾತ್ರಿ ಸಮಯದಲ್ಲಿ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿನ ರೈತರು ಬಂದು ನೀರನ್ನು ಬಿಟ್ಟುಕೊಂಡು ಹೋಗುತ್ತಿರುವುದರಿಂದ ಇಲ್ಲಿ ನೀರು ನಿಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಸದಾಕಾಲ ನೀರು ಜಿನಿಗಿ ಹಳ್ಳ ಹರಿಯುತ್ತಿರುವ ಕಾರಣ ಈ ಭಾಗವನ್ನು ತೆರೆಸಾಳು ಭಾಗವೆಂದು ಕರೆಯಲಾಗುತ್ತಿದೆ. ಅಂಗೈಯಲ್ಲಿ ತುಪ್ಪ ಇಟ್ಟು ಕೊಂಡು ಬೆಣ್ಣೆಗೆ ಅಲೆದಾಡಿದರು ಎಂಬ ಗಾದೆ ಮಾತಿನಂತೆ ಈ ನೀರನ್ನು ಶೇಖರಣೆ ಮಾಡಿ ತಾಲೂಕಿನ ವಿವಿಧ ಕೆರೆಗಳಿಗೆ ಪೈಪ್‌ಲೈನ್ ಮೂಲಕ
ನೀರು ತುಂಬಿಸಬಹುದು. ಆದರೆ ಜನಪ್ರತಿನಿ ಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ವ್ಯರ್ಥವಾಗಿ ನೆರೆ ರಾಜ್ಯಕ್ಕೆ ಹರಿಯುತ್ತಿದೆ.