ಜಗಳೂರು: ಸರ್ಕಾರದ ವಿವಿಧ ವಸತಿ ಯೋಜನೆಯಡಿ 2000ಕ್ಕೂ ಅಧಿಕ ಫಲಾನುಭವಿಗಳು ಮನೆ ನಿರ್ಮಿಸಿಕೊಂಡು 1 ವರ್ಷ ಕಳೆದರೂ ಸಹ ಸರಕಾರದಿಂದ ಅನುದಾನ ಬಿಡುಗಡೆಯಾಗದೇ ಸಾಲ ಸೂಲ ಮಾಡಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ತಾಲೂಕಿನ ಫಲಾನುಭವಿಗಳಿಗೆ ಬರಬೇಕಾದ ಮೊತ್ತವೇ ಸುಮಾರು 8 ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗುತ್ತಿದೆ. ಸರ್ಕಾರದ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಲ್ಲಿ ಕೆಲವರು ಈಗಾಗಲೇ ಬುನಾದಿ ಹಾಕಿದ್ದು , ಮತ್ತೆ ಕೆಲವರು ಸಜ್ಜಾವರೆಗೆ ಮತ್ತೆ ಕೆಲವರು ಸಂಪೂರ್ಣವಾಗಿ ಮನೆ ನಿರ್ಮಿಸಿಕೊಂಡು ಸರ್ಕಾರದ ಅನುದಾನಕ್ಕೆ ಕಾಯುತ್ತಿದ್ದಾರೆ.
ಸರ್ಕಾರ ವಸತಿ ಯೋಜನೆಗಳಡಿ ಮನೆ ಕಟ್ಟಿಕೊಳ್ಳಲು ನಾಲ್ಕು ಹಂತಗಳಲ್ಲಿ ಹಣ ಬಿಡುಗಡೆ ಮಾಡುತ್ತದೆ. ಫಲಾನುಭವಿಗಳು ಮೊದಲು ಹಣವನ್ನು ಹಾಕಿ ಮನೆ ನಿರ್ಮಿಸಿಕೊಳ್ಳಬೇಕು. ನಂತರ ಮನೆ ನಿರ್ಮಾಣದ ಹಂತ ಗಮನಿಸಿ ಸರಕಾರ ಫಲಾನುಭವಿಯ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಪದ್ಧತಿ ಇದೆ. ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ 2017-18 ನೇ ಸಾಲಿನಲ್ಲಿ ಅಂಬೇಡ್ಕರ್ ನಿವಾಸ್ ಯೋಜನೆಯಡಿ 2169, ಬಸವ ವಸತಿ ಯೋಜನೆಯಡಿ 440 ಫಲಾನುಭವಿಗಳಿದ್ದಾರೆ.
ಅಂಬೇಡ್ಕರ್ ನಿವಾಸ ಯೋಜನೆಯಡಿ 2169 ಫಲಾನುಭವಿಗಳಲ್ಲಿ 39 ಫಲಾನುಭವಿಗಳು ಇನ್ನೂಕಾಮಗಾರಿ ಪ್ರಾರಂಭಿಸಿಲ್ಲ. 451 ಜನ ಬುನಾದಿ ಹಾಕಿದ್ದು, 250 ಜನ ಸಜ್ಜಾವರೆಗೆ ನಿರ್ಮಿಸಿಕೊಂಡಿದ್ದು 253 ಫಲಾನುಭವಿಗಳು ಚಾವಣಿವರೆಗೆ, 279 ಫಲಾನುಭವಿಗಳು ಸಂಪೂರ್ಣ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಕಳೆದ 7 ತಿಂಗಳುಗಳಿಂದ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ವಸತಿಯೋಜನೆ ನೊಡಲ್ ಅಧಿಕಾರಿ ತಿಮ್ಮೇಶ್, ಸಾಲ ಸೂಲ ಮಾಡಿ ಮನೆ ನಿರ್ಮಿಸಿಕೊಂಡು ಒಂದೂವರೆ ವರ್ಷ ಕಳೆದರೂ ಸಹ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಸಾಲ ಪಡೆದವರಿಗೆ ಬಡ್ಡಿ ಕಟ್ಟಲು ಸಹ ಆಗದಿರುವಂತ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಕಷ್ಟವನ್ನು ಯಾರೂ ಕೇಳುತ್ತಿಲ್ಲ ಎನ್ನುತ್ತಾರೆ ಕೆಳಗೊಟೆ ಗ್ರಾಮದ ಫಲಾನುಭವಿ ವಿಶಾಲಮ್ಮ.
ಸಮೀಕ್ಷೆಗೆ ಮಾತ್ರ ಸೀಮಿತವಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ: ತಾಲೂಕಿನಲ್ಲಿ 1205 ಜನ ವಸತಿ ರಹಿತರಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ ಸಮೀಕ್ಷೆ ನಡೆದು ಒಂದೂವರೆ ವರ್ಷ ಕಳೆದರೂ ಸಹ ಒಬ್ಬ ಫಲಾನುಭವಿಗೂ ಮನೆ, ನಿವೇಶನ ದೊರೆತಿಲ್ಲ. ಜನಪ್ರತಿನಿ ಧಿಗಳು ಪೊಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಫಲಾನುಭವಿಗಳು ದೂರಿದ್ದಾರೆ.