ಜಗಳೂರು: ಭದ್ರಾ ಮೇಲ್ದಂಡೆ ಜಗಳೂರು ಶಾಖಾ ಕಾಲುವೆಯ ಮಾರ್ಗ ಬದಲಾವಣೆ ಮಾಡದಂತೆ ಮತ್ತು ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ಒಂದು ತಿಂಗಳು ಪೂರೈಸಿದರೂ ಜನಪ್ರತಿನಿಧಿಗಳು-ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ. ಜೂ. 17ರಿಂದ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಕುಳಿತಿದ್ದರೂ ಸರಕಾರ ನಮ್ಮ ಸಮಸ್ಯೆ ಕೇಳಿಲ್ಲ, ಮಾತುಕತೆ ನಡೆಸಿಲ್ಲ ಎಂದು ಹೋರಾಟ ಸಮಿತಿ ದೂರಿದೆ.
•ಏತಕ್ಕೆ ಹೋರಾಟ: ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕಾದ ಜಗಳೂರನ್ನು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಸೇರ್ಪಡೆ ಮಾಡಿದ್ದರು. ಸುಮಾರು 10 ವರ್ಷಗಳ ಹೋರಾಟದ ನಂತರ, ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಯೋಜನೆಯ 2.4 ಟಿ.ಎಂ.ಸಿ ನೀರಿನಲ್ಲಿ ತಾಲೂಕಿಗೆ ಸಹ 1.8 ಟಿಎಂಸಿ ಅಡಿ ನೀರು ಮುಂಜೂರಾಯಿತು.
ಮೂಲ ಯೋಜನೆಯ ಪ್ರಕಾರ ಬೆಳಘಟ್ಟ ಮಾರ್ಗದಿಂದ ಜಗಳೂರು ಶಾಖಾ ಕಾಲುವೆ ಮೂಲಕ ಸಂಗೇನಹಳ್ಳಿ ಕೆರೆಗೆ ನೀರು ಹರಿಸಿ ಅಲ್ಲಿಂದ ತಾಲೂಕಿನ ಇತರೆ ಗ್ರಾಮಗಳಿಗೆ ಮತ್ತು ಕೆರೆಗಳಿಗೆ ನೀರು ತುಂಬಿಸುವುದಾಗಿತ್ತು.
ಆದರೆ ರಾಜಕಾರಣಿಗಳು ಮತ್ತು ನೀರಾವರಿ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಚಿತ್ರದುರ್ಗದ ಕಾತ್ರಾಳ್ ಕ್ರಾಸ್ ನಿಂದ ಶಾಖಾ ಕಾಲುವೆ ನಿರ್ಮಾಣ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ರೈತರು ಮತ್ತು ಹೋರಾಟ ಸಮಿತಿಯವರು ಮತ್ತೆ ಹೋರಾಟ ಪ್ರಾರಂಭಿಸಿದ್ದರಿಂದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಗ ಬದಲಾವಣೆ ಮತ್ತು ಸಮಗ್ರ ನೀರಾವರಿಗೆ ಸಂಬಂಧಿಸಿದಂತೆ ದೇಸಾಯಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಆದರೆ ಸಮಿತಿ ಇನ್ನೂ ಸಭೆಯೇ ನಡೆಸಿಲ್ಲ.
•ವರದಿಗೆ ಆಗ್ರಹಿಸಿ ರಸ್ತೆತಡೆ: ಈ ಯೋಜನೆಯ ಕಾಮಗಾರಿ ಬೆಳಘಟ್ಟದಲ್ಲಿ ನಡೆಯುತ್ತಿದ್ದು, ಇನ್ನೇನು ತಾಲೂಕಿನಲ್ಲಿ ಕಾಮಗಾರಿ ಪ್ರಾರಂಭವಾಗಬೇಕಿದೆ. ಹೀಗಾಗಿ ಮಾರ್ಗ ಬದಲಾವಣೆ ಕುರಿತು ದೇಸಾಯಿ ಸಮಿತಿ ಕೂಡಲೇ ವರದಿ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳು ಸೇರಿ ಜೂ. 3 ರಂದು ದೊಣ್ಣೆಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿವಮೂರ್ತಿ ಮೇ. 30 ರಂದು ಕಲ್ಲೇದೇವರಪುರ ಗ್ರಾಮದಲ್ಲಿ ಸಭೆ ಕರೆದು ಹದಿನೈದು ದಿನಗಳೊಳಗೆ ದೇಸಾಯಿ ಸಮಿತಿ ಸಭೆ ಕರೆಯುವ ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದ್ದರು.
•ಅನಿರ್ದಿಷ್ಟ ಧರಣಿ: ಜಿಲ್ಲಾಧಿಕಾರಿಗಳು ನೀಡಿದ ಗಡುವು ಮುಗಿದರೂ ಸಭೆ ನಡೆಯದ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯವರು ಜೂ. 17 ರಿಂದ ತಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ತಾಲೂಕಿನ ವಿವಿಧ ಗ್ರಾಮಗಳ ಸದಸ್ಯರು ಪ್ರತಿನಿತ್ಯ ಧರಣಿಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ತಮಟೆ ಬಡೆಯುವುದು, ಕೋಲಾಟ, ಭಜನೆ, ಸೋಬಾನೆ ಪದ ಹಾಡುವುದು, ಅಡುಗೆ ಮಾಡುವ ಮೂಲಕ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆಯುವ ಯತ್ನ ನಡೆಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಮುಸ್ಟೂರು ಗ್ರಾಮದ ಓಂಕಾರ ಹುಚ್ಚ ನಾಗಲಿಂಗ ಸ್ವಾಮಿ ಮಠದ ಪೀಠಾದ್ಯಕ್ಷರಾದ ರುದ್ರಮುನಿ ಸ್ವಾಮಿ ಭೇಟಿ ನೀಡಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಕೂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಈ ಸಂಬಂದ ಚರ್ಚಿಸಲು ಸಿಎಂ ಭೇಟಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರೆ, ಸ್ಥಳೀಯ ಶಾಸಕ ಎಸ್.ವಿ. ರಾಮಚಂದ್ರ, ಇಲ್ಲಿ ಪ್ರತಿಭಟನೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ. ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿ ಸಿಎಂಗೆ ನಮ್ಮ ಸಮಸ್ಯೆ ತಿಳಿಸೋಣ ಎಂದು ಹೇಳಿದ್ದರು. ಮಾಜಿ ಶಾಸಕ ಎಚ್.ಪಿ ರಾಜೇಶ್, ಮಾರ್ಗ ಯಾವುದಿದ್ದರೇನು ಮೊದಲು ಕಾಲುವೆ ನಿರ್ಮಾಣವಾಗಲಿ, ನಂತರ ಹೋರಾಡೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.