ಜಗಳೂರು: ತಾಲೂಕು ಮಟ್ಟದ ಬಹುತೇಕ ಕಚೇರಿಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಬರುವ ನೂರಾರು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣವು ತಾಲೂಕು ಕೇಂದ್ರವಾಗಿದ್ದು, 15ಕ್ಕೂ ಅಧಿಕ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಕಚೇರಿಗಳಲ್ಲಿ ಅಧಿ ಕಾರಿಗಳಿಗೆ ಮಾತ್ರ ತಮ್ಮ ತಮ್ಮ ಕೊಠಡಿಗಳಲ್ಲಿ ಶೌಚಾಲಯದ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಿದೆ. ನಿತ್ಯ 5 ಕಿಮೀನಿಂದ 30 ಕಿಮೀ ದೂರದ ಗ್ರಾಮಗಳಿಂದ ತಮ್ಮ ಕೆಲಸ ಕಾರ್ಯಗಳಿಗೆ ಬರುವಂತ ರೈತರು , ಯುವಕರು, ವೃದ್ದರು, ಮಹಿಳೆಯರಿಗೆ ಈ ಮೂಲ ಸೌಲಭ್ಯವಿಲ್ಲದೇ ಪರದಾಡುವಂತಾಗಿದೆ.
ಪುರುಷರು ಕಚೇರಿ ಸುತ್ತಮುತ್ತ ಹೇಗೊ ತಮ್ಮ ಕೆಲಸವನ್ನು ಮುಗಿಸಿಕೊಂಡು ಬಿಡುತ್ತಾರೆ, ಆದರೆ ಮಹಿಳೆಯರ ಸಮಸ್ಯೆ ಅವರಿಗೆ ಗೊತ್ತು. ಪಟ್ಟಣ ಪಂಚಾಯಿತಿ, ಶಿಕ್ಷಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಜಿ.ಪಂ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಬಿಸಿಎಂ ಇಲಾಖೆ, ಅರಣ್ಯ, ತೋಟಗಾರಿಕೆ, ಕೃಷಿ, ಪಶು ಆಸ್ಪತ್ರೆಗಳಲ್ಲಿ ಅಧಿಕಾರಿಗಳಿಗೆ ಮಾತ್ರ ಶೌಚಾಲಯದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಿದೆ. ವಿನಃ ಕೆಲಸ ಕಾರ್ಯಗಳಿಗೆ ಅಲೆದಾಡುವವರಿಗೆ ಇಲ್ಲ. ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ, ಖಜಾನೆ, ಉಪ ನೋಂದಣಿ ಕಚೇರಿ, ಚುನಾವಣಾ ಶಾಖೆ, ಸರ್ವೇ ಶಾಖೆ, ಆಧಾರ್ ನೋಂದಣಿ ಕೇಂದ್ರ, ಅಟಲ್ ಜನಸ್ನೇಹಿ ಕೇಂದ್ರ, ಭೂ ದಾಖಲೆ ಕೋಣೆ ಸೇರಿದಂತೆ ಶೇ.50 ಇಲಾಖೆಗಳು ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ನಿತ್ಯ ನೂರಾರು ಜನರು ಕಚೇರಿಗೆ ಬಂದವರು ಕಚೇರಿ ಸುತ್ತಮುತ್ತಲಿನಲ್ಲಿ ಬಯಲು ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಕನಿಷ್ಟ ಮೂಲ ಸೌಭ್ಯಗಳಾದ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಒದಗಿಸುವುದು ಸಾಮಾನ್ಯ. ಈ ಇಲಾಖೆಗಳ ಸುತ್ತಮುತ್ತ ಸಾರ್ವಜನಿಕ ಶೌಚಾಲಯವು ಸಹ ಇಲ್ಲ. ಪಟ್ಟಣದಲ್ಲಿ ಪ್ರವಾಸಿ ಮಂದಿರದ ಸಮೀಪ ಮತ್ತು ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಇವೆ.
ಇವು ಕೂಡ ಇಲಾಖೆಗಳಿಂದು ದೂರ ಇರುವುದರಿಂದ ಕಚೇರಿಗೆ ಬಂದಂತವರು ಇಲ್ಲಿಯವರೆಗೆ ಬರಲು ಸಾಧ್ಯವಾಗುವುದಿಲ್ಲ.
ವಿವಿಧ ಸರ್ಕಾರಿ ಕೆಲಸಗಳಿಗಾಗಿ 30 ಕಿಮೀ ದೂರದಿಂದ
ಬರುತ್ತೇವೆ. ಕಚೇರಿಗಳಲ್ಲಿ ನೀರು, ಶೌಚಾಲಯವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು.
.
ಶಂಭುಲಿಂಗಪ್ಪ,
ರೈತರು, ಬಸವನಕೋಟೆ
ಕೆಲವು ಕಚೇರಿಗಳಲ್ಲಿ ಶೌಚಾಲಯಗಳಿವೆ ಎಂಬ ಮಾಹಿತಿ ಇದೆ. ಕೆಲಸಕ್ಕೆ ಬರುವಂತ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
.
ಮಲ್ಲನಾಯ್ಕ,
ತಾಪಂ ಇಒ
ರವಿಕುಮಾರ್ ಜೆ.ಒ