ಜಗಳೂರು: ಕಳೆದ ಬಾರಿ ಸುರಿದ ಉತ್ತಮ ಮಳೆಯಿಂದ ತಾಲೂಕಿನಲ್ಲಿ ಈ ಬಾರಿ ನೀರಿನ ಬವಣೆ ಎದುರಾಗುವ ಸಾಧ್ಯತೆ ಕಡಿಮೆ ಇದೆ. ಕಳೆದ ಮೂರು ವರ್ಷಗಳಿಂದ ತಾಲೂಕಿನ ಕೆಲವೆಡೆ ಮಳೆಗಾಲದಲ್ಲಿಯೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಇತ್ತು. ಆದರೆ ಕಳೆದ ಬಾರಿ ಹಿಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಈ ವರ್ಷದ ಬೇಸಿಗೆಯಲ್ಲಿ ಸಹ ಕುಡಿಯುವ ನೀರಿನ ಸಮಸ್ಯೆ ಜನರನ್ನು ಅಷ್ಟಾಗಿ ಕಾಡದು ಎನ್ನಲಾಗುತ್ತಿದೆ.
ಬರದ ನಾಡು ಮತ್ತು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲೂಕಿನ ಕೃಷಿ ಮತ್ತು ಕುಡಿಯುವ ನೀರಿಗೆ ಮಳೆಯೇ ಆಧಾರ. ತಾಲೂಕಿನಲ್ಲಿ ಯಾವುದೇ ನದಿ ಮೂಲಗಳಿಲ್ಲ. ಹೀಗಾಗಿ ಮಳೆ ಬಂದರೆ ಮಾತ್ರ ನೀರು ಎನ್ನುವಂತಹ ಸ್ಥಿತಿ ಇದೆ. ಕಳೆದ ಮೂರು ವರ್ಷ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ನೀರಿನ ಟ್ಯಾಂಕರ್ ಗಳು ಸದ್ದು ಮಾಡುತ್ತಿದ್ದವು. 120 ಗ್ರಾಮಗಳಿಗೆ ಟ್ಯಾಂಕರ್ ಮತ್ತು ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಈ ಬಾರಿ ಹಿಂಗಾರು ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆಗಳಿಗೆ 3 ರಿಂದ 8 ಅಡಿವರೆಗೆ ನೀರು ಹರಿದು ಬಂದಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್ ವೆಲ್‌ಗಳಲ್ಲಿನ ನೀರು ಬತ್ತುವ ಸಾಧ್ಯತೆಗಳು ಕಡಿಮೆ. ಕಾನನಕಟ್ಟೆ ಗ್ರಾಮದಲ್ಲಿ ನೀರು ಕೊರತೆ ಕಾಣಿಸಿದ್ದು, 15 ದಿನಗಳಿಂದ ಖಾಸಗಿ ಬೋರ್‌ವೆಲ್ ಮೂಲಕ ನೀರು ಕೊಡಲಾಗುತ್ತಿದೆ. ತಾಲೂಕಿನಲ್ಲಿ ಸಮಸ್ಯೆ ಉದ್ಭವಿಸಬಹುದಾದ 50 ಹಳ್ಳಿಗಳನ್ನು ಗುರುತಿಸಲಾಗಿದ್ದು, ಕುಡಿವ ನೀರಿನ ಕೊರತೆ ಕಂಡು ಬಂದರೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ.
ಟ್ಯಾಂಕರ್ ಲಾಬಿಗೆ ಬಿಳಲಿದೆ ಕಡಿವಾಣ: ಗ್ರಾಮಸ್ಥರಿಗೆ ನೀರಿನ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ತಾಲೂಕು ಆಡಳಿತದಿಂದ ಪ್ರತಿಯೊಂದು ಗ್ರಾಮಗಳಿಗೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೀರು ಪೂರೈಕೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಒಂದು ಗ್ರಾಮಕ್ಕೆ ಎರಡು ಟ್ಯಾಂಕರ್ ಸರಬರಾಜು ಮಾಡಿ 6 ಬಾರಿ ಪೂರೈಸಿದ್ದೇವೆ ಎಂದು ಲೆಕ್ಕ ನೀಡುತ್ತಿದ್ದು, ಇದರಿಂದಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ ಬಿಲ್ ಪರಿಶೀಲನೆ ಇನ್ನೂ ಸಹ ನಡೆಯುತ್ತಲೇ ಇದೆ. 10 ಕೋಟಿಗೂ ಅಧಿಕ ಬಿಲ್: ಕಳೆದ ಮೂರು ವರ್ಷಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ ಬಿಲ್ 10 ಕೋಟಿ ದಾಟಲಿದೆ. ತಾಲೂಕು ಪಂಚಾಯಿತಿಯಿಂದ 2.50 ಕೋಟಿಗೂ ಅಧಿಕ ಹಣ ಪಾವತಿಸಲಾಗಿದೆ. ತಹಶೀಲ್ದಾರ್ ವ್ಯಾಪ್ತಿಗೆ ಬಂದಾಗ ಜಿಪಿಎಸ್ ಮಾಡಿರುವ ಟ್ಯಾಂಕರ್‌ಗೆ ಇಲ್ಲಿಯವರೆಗೆ 4 ಕೋಟಿ 50 ಲಕ್ಷ ರೂ. ಬಿಲ್ ನೀಡಲಾಗಿದೆ. ಜಿಪಿಎಸ್ ಇಲ್ಲದೇ ನೀರು ಸರಬರಾಜು ಮಾಡಲಾಗಿದೆ ಎನ್ನುವ 3 ಕೋಟಿ ರೂ. ಮೊತ್ತದ ಬಿಲ್‌ಗಳು ತಹಶೀಲ್ದಾರ್ ಸಹಿಗಾಗಿ ಕಾಯುತ್ತಿದ್ದು, ಜಿಪಿಎಸ್ ಇಲ್ಲದವುಗಳ ಬಿಲ್ ಹಣ ಪಾವತಿ ಮಾಡಲಿಕ್ಕೆ ಬರುವುದಿಲ್ಲ ಎಂದು ತಹಶೀಲ್ದಾರ್ ತಡೆ ಹಿಡಿದ್ದಾರೆ.
ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಆದರೆ ಇದುವರೆಗೂ ನೀರಿನ ಸಮಸ್ಯೆ ಉಲ್ಬಣಗೊಂಡಿಲ್ಲ. ಸಮಸ್ಯೆ ಉದ್ಭವಿಸಬಹುದಾದ 50 ಹಳ್ಳಿಗಳನ್ನು ಇಲಾಖೆಯಿಂದ ಗುರುತಿಸಲಾಗಿದ್ದು, ಅಲ್ಲಿಯೂ ಸಹ ಇನ್ನೂ ಸಮಸ್ಯೆ ಕಂಡು ಬಂದಿಲ್ಲ. ಸಮಸ್ಯೆಯಾದರೆ ಖಾಸಗಿ ಬೋರ್ ವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು.
ಹುಲ್ಲುಮನಿ ತಿಮ್ಮಣ್ಣ,
ತಹಶೀಲ್ದಾರ್
ಕಳೆದ ವರ್ಷದಿಂದ ಚಿಕ್ಕಮಲ್ಲನಹೊಳೆ ಗ್ರಾಮಕ್ಕೆ ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜು ಮಾಡಲಾಗಿತ್ತು. 15 ದಿನಗಳಿಂದ ಕಾನನಕಟ್ಟೆ ಗ್ರಾಮಕ್ಕೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಕೊಡಲಾಗುತ್ತಿದೆ. ಬೇರೆ ಯಾವ ಗ್ರಾಮದಲ್ಲಿಯೂ ಇಷ್ಟೊಂದು ಸಮಸ್ಯೆ ಇಲ್ಲ.
ಹೇಮಾಜಿ ನಾಯ್ಕ,
ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ನೀರಿನ ಪ್ರಮಾಣ ಕಡಿಮೆಯಾದ ಮಾಹಿತಿ ಬಂದಿದ್ದರೂ ಸಮಸ್ಯೆ ಇನ್ನೂ ಕಂಡು ಬಂದಿಲ್ಲ. ಸ್ಥಳ ಪರಿಶೀಲನೆ ಮಾಡಿದ ನಂತರ ವ್ಯವಸ್ಥೆ ಮಾಡಲಾಗುವುದು.
ಮಲ್ಲಾ ನಾಯ್ಕ,
ತಾಪಂ ಇಒ
ರವಿಕುಮಾರ ಜೆ.ಓ. ತಾಳಿಕೆರೆ