ಜಗಳೂರು: ದೇವರ ಕೃಪೆ ಮತ್ತು ಹಿರಿಯರ ಆಶೀರ್ವಾದದಿಂದ ತಾಲೂಕಿನಲ್ಲಿ ಇದುವರೆಗೂ ಕೋವಿಡ್ ಪ್ರಕರಣಗಳು ಕಂಡು ಬಂದಿಲ್ಲ. ಹಾಗಂತ ಆದರೂ ಮೈಮರೆಯುವಂತಿಲ್ಲ. ಮಕ್ಕಳು ಹಾಗೂ ವಯೋವೃದ್ಧರನ್ನು ಜಾಗೃತೆಯಿಂದ ನೋಡಿಕೊಳ್ಳುವುದರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಶಾಸಕ ಎಸ್ .ವಿ. ರಾಮಚಂದ್ರ ಹೇಳಿದರು.
ಪಟ್ಟಣದ ತರಳಬಾಳು ಕೇಂದ್ರದಲ್ಲಿ ಶನಿವಾರ ತಾಲೂಕು ಬಿಜೆಪಿ ಘಟಕ ಮತ್ತು ಎಸ್.ವಿ.ಆರ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್ ವಾರಿಯರ್ಗೆ ಅಭಿನಂದನೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕು ಆಡಳಿತ, ಪೊಲೀಸ್, ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೋವಿಡ್ ವಾರಿಯರ್ಸ್ ಗಳಾಗಿ ನನ್ನ ಜೊತೆಗಿದ್ದಾರೆ. ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣ ಬಾರದಂತೆ ನೋಡಿಕೊಂಡು ಜನರು ನೆಮ್ಮದಿಯ ನಿಟ್ಟುಸಿರು ಬಿಡಲು ಕಾರಣರಾಗಿರುವುದು ಶ್ಲಾಘನೀಯ ಎಂದರು. ತಾಲೂಕಿನಲ್ಲಿ ಕಳೆದ 3 ತಿಂಗಳಿನಿಂದ ಕೂಲಿ ಕಾರ್ಮಿಕರು ದುಡಿಮೆಯಿಲ್ಲದೆ ಕಂಗಾಲಾಗಿದ್ದರು. ಹಾಗಾಗಿ ನರೇಗಾದಡಿ ಕೃಷಿ, ಕೆರೆ ಹೂಳೆತ್ತುವುದು, ಬದು ನಿರ್ಮಾಣದಂತಹ ಕೆಲಸ ನೀಡಲಾಗಿದೆ. ಉಚಿತವಾಗಿ ಕಿಟ್ ಕೊಡುತ್ತಾರೆ ಎಂಬ ಆಸೆ ಇಟ್ಟುಕೊಳ್ಳದೆ ದುಡಿಮೆಯ ಹಣದಲ್ಲಿ ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.
ನಾನು ಶಾಸಕನಾಗಿ ಇಡೀ ಕ್ಷೇತ್ರದಲ್ಲಿ ಸಂಘ ಸಂಸ್ಥೆಗಳ, ಕ್ರಷರ್‌ಗಳ ಹಾಗೂ ಪಕ್ಷದ ಕಾರ್ಯಕರ್ತರ ದೇಣಿಗೆಯಿಂದ ಮತ್ತು ವೈಯಕ್ತಿಕವಾಗಿ ಸಾದ್ಯವಾದಷ್ಟು ಸಹಾಯ ಮಾಡಿ ಕಷ್ಟದಲ್ಲಿ ನೆರವಾಗಿದ್ದೇನೆ. ಟೀಕೆ, ವದಂತಿಗಳ ಬಗ್ಗೆ ಕಿವಿಗೊಡುವುದಿಲ್ಲ. ತಾಲೂಕನ್ನು ಮಾದರಿಯಾಗಿಸುವುದು ನನ್ನ ಗುರಿ ಎಂದರು.
ಉಪ ವಿಭಾಗಾಧಿಕಾರಿಯಾಗಿ ನೇಮಕಗೊಂಡಿರುವ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಶಾಸಕರ ಸೂಚನೆಯಂತೆ ತಾಲೂಕು ಆಡಳಿತದಿಂದ ಕೋವಿಡ್-19 ನಿಯಂತ್ರಿಸಲು ಸಮರೋಪಾದಿಯಲ್ಲಿ ಶ್ರಮಿಸಿದ್ದೇವೆ. ಅಲ್ಲದೆ ಟೀಮ್ ಎಸ್ ವಿಆರ್ ಬಳಗದಲ್ಲಿ ಕೆಲಸ ಮಾಡಿದ್ದಕ್ಕೆ ನನಗೆ ತೃಪ್ತಿಯಿದೆ ಎಂದರು. ಸಿಪಿಐ ದುರುಗಪ್ಪ ಮಾತನಾಡಿ, ಕೋವಿಡ್ ಆಕ್ರಮಣವಾಗಿಲ್ಲ ಎಂಬ ನಿರ್ಲಕ್ಷ್ಯ ಬೇಡ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿಕೊಂಡು ಜಾಗೃತರಾಗಿರಬೇಕು. ಕಾನೂನು ಉಲ್ಲಂಘನೆ ಮಾಡದೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದೆ ವೇಳೆ 173 ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ತಲಾ 500 ರೂ. ಪ್ರೋತ್ಸಾಹಧನವನ್ನು ಶಾಸಕರು ವಿತರಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್ ಪಲ್ಲಾಗಟ್ಟೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಜಿಪಂ ಉಪಾಧ್ಯಕ್ಷ ಸಿದ್ದಪ್ಪ ಯರಬಳ್ಳಿ, ಜಿಪಂ ಸದಸ್ಯ ಎಸ್.ಕೆ. ಮಂಜುನಾಥ್, ಪಪಂ ಅಧ್ಯಕ್ಷ ಜೆ.ವಿ. ನಾಗರಾಜ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.