Advertisement

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಆಗ್ರಹ

05:12 PM Mar 12, 2020 | Naveen |

ಜಗಳೂರು: ತಹಶೀಲ್ದಾರ್‌ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತಹ ಕೆಲಸ ಮಾಡುತ್ತಿದ್ದರೆ ಪೋಲಿಸ್‌ ಇಲಾಖೆಯವರೇ ಮರಳು ದಂಧೆಗೆ ಸಹಕಾರ ನೀಡುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಗಡಿ ಮಾಕುಂಟೆ ಸಿದ್ದೇಶ್‌ ದೂರಿದರು.

Advertisement

ಬುಧವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮರಳು ದಂಧೆಯ ಬಗ್ಗೆ ಸಭೆಯ ಗಮನಕ್ಕೆ ತಂದರು.

ಸಭೆ ಪ್ರಾರಂಭವಾಗುತ್ತಿದ್ದಂತೆ ಉದ್ಯೋಗ ಖಾತ್ರಿ ಮತ್ತು 14ನೇ ಹಣಕಾಸು ಯೋಜನೆಯಡಿ ಭಾರೀ ಅವ್ಯವಹಾರ ನಡೆದಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅನೇಕ ಬಾರಿ ಸಭೆಯ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಹನುಮಂತಾಪುರ ತಾಪಂ ಸದಸ್ಯೆ ಶಿಲ್ಪಾ ಸಭೆಯಿಂದ ಹೊರ ನಡೆದರು.

ಅಧ್ಯಕ್ಷೆ ಮಂಜುಳಾ ಸದಸ್ಯೆಯ ಮನವೊಲಿಸಲು ಮರಳಿ ಕರೆಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ತಾಲೂಕು ಪಂಚಾಯಿತಿ ಮಳಿಗೆಗಳನ್ನು ಹರಾಜು ಮಾಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಕೆಲ ಸದಸ್ಯರ ಸಹಿ ನಕಲು ಮಾಡಿ ಹರಾಜು ಪ್ರಕ್ರಿಯೆ ರದ್ದುಪಡಿಸಲಾಗಿದೆ ಎಂದು ಸದಸ್ಯ ಬಸವರಾಜ್‌,  ತಿಮ್ಮೇಶ್‌ ದೂರಿದಾಗ ಇಓ ಮಲ್ಲಾನಾಯ್ಕ ಮಾತನಾಡಿ, ಮಾ. 20 ರೊಳಗೆ ಮಳಿಗೆಯವರು 30 ಸಾವಿರ ರೂ. ಮುಂಗಡ ಹಣ ಮತ್ತು 5 ಸಾವಿರ ರೂ. ಬಾಡಿಗೆ ನೀಡಿದರೆ ಮಾತ್ರ ಅವರೇ ಮುಂದುವರೆಯಲಿದ್ದಾರೆ. ಇಲ್ಲವಾದರೆ ಅವರನ್ನು ಖಾಲಿ ಮಾಡಿಸಿ ಹರಾಜು ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

ತಾಲೂಕಿನಲ್ಲಿ ಮರಳು ಮಾಫಿಯ ಎಗ್ಗಿಲ್ಲದೇ ನಡೆಯುತ್ತಿದೆ. ಪ್ರಭಾವಿಗಳು ಮರಳನ್ನು ಅನ್ಯ ಜಿಲ್ಲೆಗೆ ಸಾಗಾಣಿಕೆ ಮಾಡುತ್ತಿದ್ದರೂ ಕಾನೂನು ಕ್ರಮ ಕೈಗೊಳ್ಳದೇ ಬಡವರು ಮನೆ ಕಟ್ಟಿಕೊಳ್ಳಲು ಸ್ಥಳೀಯವಾಗಿ ಸಿಗುವ ಮರಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸಿದರೆ ಪೊಲೀಸರು ಕೇಸು ಹಾಕುತ್ತಾರೆ ಎಂದು ತಾಪಂ ಸದಸ್ಯ ತಿಮ್ಮೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ದೊಣೆಹಳ್ಳಿ ತಾಪಂ ಸದಸ್ಯ ಮರೇನಹಳ್ಳಿ ಬಸವರಾಜ್‌ ಧ್ವನಿಗೂಡಿಸಿ, ತಾಲೂಕಿನ ಜಿನಗಿಹಳ್ಳ ಮತ್ತು ಗಡಿಮಾಕುಂಟೆ ಕೆರೆಯಲ್ಲಿ ರಾತ್ರಿಯ ವೇಳೆ ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದ್ದು ಅಧಿಕಾರಿಗಳು ತಡೆಯಬೇಕೆಂದರು. ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಮರಳು ದಂಧೆಗೆ ಕಡಿವಾಣ ಹಾಕಲು ಹಗಲಿರುಳು ಶ್ರಮಿಸಲಾಗುತ್ತಿದ್ದು, ಅನ್ಯ ಜಿಲ್ಲೆಗಳಿಗೆ ಮರಳು ಸಾಗಾಣಿಕೆಯಾಗುತ್ತಿದೆ ಎಂಬ ಮಾಹಿತಿ ಇದ್ದು ಯಾವುದೇ ಕಾರಣಕ್ಕೂ ಮರಳು ಸಾಗಾಣಿಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮರಳು ದಂಧೆ ಸುಳಿವು ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.

ಮನೆ ನಿರ್ಮಿಸಿಕೊಳ್ಳುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮರಳಿಗೆ ಕಾನೂನು ಬದ್ಧವಾಗಿ ಅವಕಾಶ ನೀಡುವಂತೆ ಲಿಖೀತವಾಗಿ ತಿಳಿಸಿದ್ದೆ. ಆದರೆ ಆವರು ಮರಳೇ ಇಲ್ಲ ಎಂದು ವರದಿ ನೀಡಿದ್ದಾರೆ.

ಜನತೆಯ ಅನುಕೂಲಕ್ಕಾಗಿ ಹರಿಹರ ಮತ್ತು ಹೊನ್ನಾಳಿ ಏಜೆನ್ಸಿಯ ಕಡೆಯಿಂದ ಈ ಭಾಗದಲ್ಲಿ ಮರಳು ಕೇಂದ್ರವನ್ನು ಆರಂಭಿಸಲಾಗುವುದು ಎಂದರು. ಸೊಕ್ಕೆ ತಾಪಂ ಸದಸ್ಯ ಗಡಿ ಮಾಕುಂಟೆ ಸಿದ್ದೇಶ್‌ ಮಾತನಾಡಿ, ತಹಶೀಲ್ದಾರ್‌ ಮರಳು ಸಾಗಣೆ ತಡೆಯಲು ಶ್ರಮಿಸುತ್ತಿದ್ದರೆ ಮರಳು ದಂಧೆಯಲ್ಲಿ ಪೊಲೀಸ್‌ ಇಲಾಖೆಯವರೇ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆಪಾದಿಸಿದರು.

ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಇಂಜನಿಯರ್‌ ಹೇಮೋಜಿನಾಯ್ಕ ವರದಿ ಮಂಡಿಸಿ, ಬೇಸಿಗೆಯ ವೇಳೆಗೆ ನೀರಿನ ಸಮಸ್ಯೆ ಉದ್ಭವಿಸಿದರೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಇಲಾಖೆಗಳು ಬಾಡಿಗೆ ಕಟ್ಟಡ ಬಿಟ್ಟು ತಾಪಂ ಆವರಣದ ಖಾಲಿ ಕಟ್ಟಡಗಳಿಗೆ ಸ್ಥಳಾಂತರಗೊಂಡರೆ ಲಕ್ಷಾಂತರ ರೂ. ಬಾಡಿಗೆ ಹಣ ಉಳಿಸಬಹುದಾಗಿದೆ ಎಂದಾಗ, ಕೂಡಲೇ ಶಿಫ್ಟ್‌ ಆಗುವಂತೆ ಇಓ ಸೂಚನೆ ನೀಡಿದರು. ತಾಪಂ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್‌, ಇಓ ಮಲ್ಲನಾಯ್ಕ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next