Advertisement

ಜಗದೀಶ ಶೆಟ್ಟರ್‌ ಮತ್ತೆ ಸ್ಪೀಕರ್‌ ?

03:05 PM Aug 03, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಬಿಜೆಪಿಯಲ್ಲಿ ನಾಯಕತ್ವ ಬದಲಾದರೂ ಅಸಮಾಧಾನದ ಹೊಗೆಯಾಡುತ್ತಲೇ ಇದೆ. ಇದರ ನಡುವೆ ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ಮತ್ತೂಮ್ಮೆ ಸ್ಪೀಕರ್‌ ಮಾಡಲಾಗುತ್ತಿದೆ ಎಂಬ ಸುದ್ದಿ ಬಿಜೆಪಿಯಲ್ಲಿ ಸುಳಿದಾಡತೊಡಗಿದರೆ. ಆದರೆ, ಇದಕ್ಕೆ ಜಗದೀಶ ಶೆಟ್ಟರ ಸುತಾರಾಂ ಒಪ್ಪುವುದಿಲ್ಲ ಎಂದು ಹೇಳಲಾಗುತ್ತಿದೆ.

ಪಕ್ಷದ ವಿಚಾರವೇ ಇರಲಿ, ಸರ್ಕಾರದ ವಿಷಯವೇ ಇರಲಿ ಸಾಮಾನ್ಯವಾಗಿ ಉದ್ವೇಗಕ್ಕೆ ಒಳಗಾದೆ ಸಹನೆಯಿಂದಲೇ ಹೇಳಿಕೆ ಕೊಡುವ, ಸಿಟ್ಟು ಮಾಡಿಕೊಳ್ಳದ ಸ್ವಭಾವದವರು ಬಿಜೆಪಿ ಹಿರಿಯ ನಾಯಕ ಜಗದೀಶ ಶೆಟ್ಟರ್‌. ಆದರೆ, ನೂತನ ಸಿಎಂ ಅಧಿಕಾರ ವಹಿಸಿಕೊಂಡಿದ್ದೇ ತಡ ಜಗದೀಶ ಶೆಟ್ಟರ ಅವರು ಸಚಿವ ಸ್ಥಾನ ಕುರಿತಾಗಿ ನೀಡಿದ ಆಕ್ರೋಶದ ಹೇಳಿಕೆ ಬಿಜೆಪಿಯಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ.

ಪಕ್ಷ-ಸರ್ಕಾರದ ವಿವಾದಾತ್ಮಕ ವಿಚಾರ ಬಂದಾಗ, ಮುಜುಗರ ಸನ್ನಿವೇಶ ಸೃಷ್ಟಿಸುವ ವಿದ್ಯಮಾನಗಳು ನಡೆದಾಗ ಅದರ ಬಗ್ಗೆ ಪ್ರತಿಕ್ರಿಯಿಸುವಾಗ ಬಿಜೆಪಿ ಹಿರಿಯ ನಾಯಕರ ಜಗದೀಶ ಶೆಟ್ಟರ ಎಂದಿಗೂ ಬಹಿರಂಗವಾಗಿ ಹೇಳಿಕೆ ನೀಡಿದವರಲ್ಲ. ಇಂತಹ ವಿಷಯ ಕುರಿತು ಪ್ರತಿಕ್ರಿಯೆ ನೀಡುವ ಸನ್ನಿವೇಶ ಬಂದಾಗ, ಇಂತಹ ವಿಚಾರಗಳನ್ನು ಮಾಧ್ಯಮದಲ್ಲಿ ಮಾತನಾಡುವಿದಲ್ಲ, ಅದೇನಿದ್ದರೂ ನನ್ನ ಅನಿಸಿಕೆಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುವೆ ಎಂದು ಹೇಳುವ ಮೂಲಕ ವಿವಾದ ಹೆಚ್ಚಿಸುವ, ಪಕ್ಷಕ್ಕೆ ಮುಜಗರ ತರುವಂತಹ ಹೇಳಿಕೆ ನೀಡಿದವರಲ್ಲ. ಆದರೆ, ಸಂಪುಟಕ್ಕೆ ಸೇರುವುದಿಲ್ಲ ಎಂದು ಹೇಳುವ ಅವರ ಮಾತಿನ ಹಿಂದೆ ಆತ್ಮಾಭಿಮಾನಕ್ಕೆ ನೋವಾಗಿದೆ, ನೈತಿಕತೆ ಒಪ್ಪುವುದಿಲ್ಲ ಎಂಬ ಮಾತು, ಸೌಮ್ಯ ಸ್ವಭಾವದ ಶೆಟ್ಟರ ಮನದೊಳಗೆ ಅಸಮಾಧಾನ ಕುದಿಯತೊಡಗಿದ್ದರ ಪ್ರತೀಕವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಜಗದೀಶ ಶೆಟ್ಟರ ಅವರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮದೇ ಯತ್ನಗಳನ್ನು ಕೈಗೊಂಡಿದ್ದು, ಹಿರಿಯರಾದ ಜಗದೀಶ ಶೆಟ್ಟರ ಅವರನ್ನು ಹುಬ್ಬಳ್ಳಿಯಲ್ಲಿ ಖುದ್ದು ಭೇಟಿ ಮಾಡಿ ಮಾತನಾಡುವ ಇರಾದೆ ಹೊಂದಿದ್ದರು. ಆದರೆ, ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಸ್ಥಿತಿ ವೀಕ್ಷಣೆ ಮುಗಿಸಿ ಬರುವುದು ವಿಳಂಬವಾಗಿದ್ದರಿಂದ ವಿಶೇಷ ವಿಮಾನ ಪೈಲೆಟ್‌ ರಾತ್ರಿ 9 ಗಂಟೆ ವೇಳೆಗೆ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಬೇಕೆಂಬ ಅನಿಸಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಶೆಟ್ಟರ ಭೇಟಿ ಮುಂದೂಡಿ ಬೆಂಗಳೂರಿಗೆ ತೆರಳಿದ್ದರು.

Advertisement

ಸ್ಪೀಕರ್‌ ಸುದ್ದಿ ಸುಳಿದಾಟ?: ಸಿಎಂ ಬಸವರಾಜ ಬೊಮ್ಮಾಯಿ ನೂತನ ಸರ್ಕಾರದಲ್ಲಿ ತಾವು ಯಾವುದೇ ಕಾರಣಕ್ಕೂ ಸಚಿವ ಸ್ಥಾನ ಪಡೆಯವುದಿಲ್ಲ ಎಂದು ಶೆಟ್ಟರ ಕಡ್ಡಿ ಮುರಿದಂತೆ ಹೇಳಿರುವುದಷ್ಟೇ ಅಲ್ಲದೆ, ನನಗೂ ಆತ್ಮಾಭಿಮಾನ ಎಂಬುದಿದೆ, ನೈತಿಕತೆ ಬಿಟ್ಟು, ಆತ್ಮಾಭಿಮಾನ ಬದಿಗಿರಿಸಿ ಸಚಿವ ಸ್ಥಾನ ಪಡೆಯಲಾರೆ ಎಂದಿರುವುದು ನೂತನ ಸಿಎಂಗೆ ತವರು ನೆಲದಿಂದಲೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜಗದೀಶ ಶೆಟ್ಟರ ಸಚಿವರಾಗುವುದಕ್ಕೆ ಒಪ್ಪದಿರುವುದು ಜತೆಗೆ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ, ಅವರನ್ನು ಮತ್ತೂಮ್ಮೆ ವಿಧಾನಸಭೆ ಸಭಾಧ್ಯಕ್ಷರನ್ನಾಗಿ ಮಾಡುವ ಚಿಂತನೆಗಳು ಬಿಜೆಪಿಯಲ್ಲಿ ಆರಂಭಗೊಂಡಿವೆ. ಪಕ್ಷದ ಹಿರಿಯರು ಹಾಗೂ ಈಗಾಗಲೇ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಅವರನ್ನೇ ಸ್ಪೀಕರ್‌ ಮಾಡುವ ಸುದ್ದಿ ರೆಕ್ಕೆ-ಪುಕ್ಕ ಪಡೆದುಕೊಂಡಿದೆ. ಸ್ಪೀಕರ್‌ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಚಿವ ಸ್ಥಾನ ನೀಡಿ, ಆ ಸ್ಥಾನಕ್ಕೆ ಶೆಟ್ಟರ ಅವರನ್ನು ತರುವ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ. ಹುಬ್ಬಳ್ಳಿ ಬಿಜೆಪಿ ವಲಯದಲ್ಲಿ ಶೆಟ್ಟರ್‌ ಸಾಹೇಬರಿಗೆ ಮತ್ತೆ ಸ್ಪೀಕರ್‌ ಸ್ಥಾನ ನೀಡುತ್ತಾರಂತೆ ಎಂದು ಚರ್ಚೆ ನಡೆಯುತ್ತಿದೆ. ಆದರೆ ಈ ಕುರಿತು ನನ್ನೊಂದಿಗೆ ಯಾರೂ ಚರ್ಚಿಸಿಲ್ಲ. ಒಂದು ವೇಳೆ ಅಂತಹ ಪ್ರಸ್ತಾಪ ಬಂದರೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಶೆಟ್ಟರ ತಮ್ಮ ಆಪ್ತರೊಂದಿಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next