ಹುಬ್ಬಳ್ಳಿ: ಯಡಿಯೂರಪ್ಪ ಬಿಜೆಪಿಗೆ ಬೇಡವಾದ ಶಿಶು ಎನ್ನುವ ಮೊದಲು ಕಾಂಗ್ರೆಸ್ ನಲ್ಲಿ ತಮ್ಮ ಸ್ಥಾನ ಏನೆಂಬುದನ್ನು ಸಿದ್ದರಾಮಯ್ಯ ತಿಳಿದುಕೊಳ್ಳಲಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರು ತಿರುಗೇಟು ನೀಡಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲು ಅವರ ಹೈಕಮಾಂಡ್ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ಸಿನಲ್ಲೆ ಸಾಕಷ್ಟು ಗೊಂದಲಗಳಿವೆ. ಕಾಂಗ್ರೆಸ್ ನಲ್ಲಿ ತಮ್ಮ ಸ್ಥಾನವೇ ಗಟ್ಟಿಯಾಗಿಲ್ಲ ಎಂಬುದನ್ನು ಅವರು ಅರಿಯಲಿ ಎಂದರು. ವಿಧಾನಸಭಾ ವಿಪಕ್ಷ ನಾಯಕನ ಆಯ್ಕೆ ಮಾಡಲಾಗದ ಸ್ಥಿತಿಗೆ ಕಾಂಗ್ರೆಸ್ ಹೈಕಮಾಂಡ್ ತಲುಪಿದೆ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪ ಬಿಜೆಪಿಗೆ ಬೇಡವಾದ ಶಿಶು ಎನ್ನುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಅಷ್ಟೊಂದು ಪ್ರಾಮುಖ್ಯತೆ ಕೊಡಬೇಕಾಗಿಲ್ಲ. ಡಿಸಿಎಂ ಮಾಡುವುದು ನಮ್ಮ ಪಕ್ಷದ ತೀರ್ಮಾನ. ಈ ಹಿಂದೆ ತಾವು ಡಿಸಿಎಂ ಆಗಿದ್ದನ್ನು ಸಿದ್ದರಾಮಯ್ಯನವರು ಮರೆಯಬಾರದು ಎಂದರು.
ಡಿ.ಕೆ.ಶಿವಕುಮಾರ ಅವರಿಗೆ ಸೇರಿದ ಎನ್ನಲಾದ ಹಣ ಬಗ್ಗೆ ಇಡಿ ವಿಚಾರಣೆ ನಡೆಸುತ್ತಿದೆ ಇದರಲ್ಲಿ ಬಿಜೆಪಿ ಪಾತ್ರ ಇಲ್ಲ ಎಂದರು.
ಜಿಂದಾಲ್ ಗೆ ಭೂಮಿ ಪರಭಾರೆಗೆ ಸಂಬಂಸಿದ ಹಿಂದಿನ ಸರಕಾರದ ಕಡತಗಳನ್ನು ನೋಡಿಲ್ಲ. ಈ ಕುರಿತ ಉಪ ಸಮಿತಿ ಸಮಿತಿ ಸರಕಾರಕ್ಕೆವರದಿ ಸಲ್ಲಿಸಿದೆ ಎಂಬುವುದನ್ನು ಮಾಧ್ಯಮಗಳ ಮೂಲಕ ತಿಳಿದಿದೆ.. ಹಿಂದೆ ಜಿಂದಾಲ್ ಗೆ ಭೂಮಿ ನೀಡುವ ವಿಚಾರದಲ್ಲಿ ವಿರೋಧ ಮಾಡಿದ್ದು ಹೌದು. ಆದರೆ ಹಿಂದಿನ ಸರಕಾರದ ಯಾವ ರಾಮಾಯಣ ಮಾಡಿದೆ ಎಂಬುವುದು ಕಡತ ನೋಡಿದ ಮೇಲೆ ಗೊತ್ತಾಗಲಿದೆ ಎಂದರು.