ಬೆಳಗಾವಿ: ರಾಮದುರ್ಗ ಕ್ಷೇತ್ರದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮನೆಗೆ ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ ಶೆಟ್ಟರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಮಹದೇವಪ್ಪ ಯಾದವಾಡ ನಂತರ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಬಿಜೆಪಿ ಬಗ್ಗೆ ಅಸಮಾಧಾನ ಗೊಂಡಿದ್ದ ಮಹಾದೇವಪ್ಪ ಯಾದವಾಡ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ನಾಯಕರು ಗಾಳಹಾಕಿದ್ದರು.
ಇದರ ನಡುವೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಶುಕ್ರವಾರ ಮಹದೇವಪ್ಪ ಯಾದವಾಡ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು ವಿಶೇಷ ಮಹತ್ವ ಪಡೆದುಕೊಂಡಿದೆ.
ಮಹದೇವಪ್ಪ ಯಾದವಾಡ ಜೊತೆಗೆ ಮಾತುಕತೆ ನಡೆಸಿದ ಜಗದೀಶ್ ಶೆಟ್ಟರ್ ಯಾದವಾಡರ ಅಸಮಾಧಾನ ತಣಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಡೆದ ಕೆಲ ಕಹಿ ಘಟನೆಗಳನ್ನು ಮರೆತು ಎಲ್ಲರೂ ಗೆಲುವಿಗೆ ಶ್ರಮಿಸಲಿದ್ದಾರೆ. ಸ್ಥಳಿಯ ಮುಖಂಡರ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಕೋರ್ ಕಮಿಟಿಯ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.