Advertisement

ವಿಪಕ್ಷಗಳ ಟೀಕೆಗೆ ಅರ್ಥವಿಲ್ಲ: ಸಚಿವ ಜಗದೀಶ್ ಶೆಟ್ಟರ್

05:08 PM May 13, 2020 | sudhir |

ಚಿತ್ರದುರ್ಗ: ಈಗ ವಿರೋಧ ಪಕ್ಷಗಳಿಗೆ ಕೆಲಸ ಇಲ್ಲ. ಆದರೆ, ಸುಮ್ಮನೆ ಇದ್ದರೆ ತಪ್ಪು ಮಾಹಿತಿ ಹೋಗುತ್ತದೆ. ಆದ್ದರಿಂದ ಸರ್ಕಾರದ ವಿರುದ್ಧ ಏನಾದರೂ ಟೀಕೆ ಮಾಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ನಾಯಕರು ಮಾತನಾಡುತ್ತಿದ್ದಾರೆ. ಈ ಟೀಕೆಗಳಿಗೆ ಅರ್ಥವಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರ್ಕಾರ ಕೋವಿಡ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಇದನ್ನು ಹಲವು ಸಮೀಕ್ಷೆಗಳು, ಪತ್ರಿಕೆಗಳು ಕೂಡಾ ಹೇಳುತ್ತಿವೆ ಎಂದರು.

ಆದರೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಸಾರ್ವಜನಿಕರ ಅಭಿಪ್ರಾಯವನ್ನೂ ಆಲಿಸದೆ, ಟೀಕೆಗಾಗಿ ಟೀಕೆ ಮಾಡುತ್ತಿದ್ದಾರೆ. ನಾವೀಗ ಸಂಕಷ್ಟದ ಸಂದರ್ಭದಲ್ಲಿದ್ದೇವೆ. ಈ ವೇಳೆ ಮುತ್ಸದ್ದಿತನ ತೋರಿಸಿ ಸರ್ಕಾರಕ್ಕೆ ರಚನಾತ್ಮಕ ಕೆಲಸ ಮಾಡಲಿ ಎಂದು ತಿಳಿಸಿದರು.

ರಾಜ್ಯಕ್ಕೆ ಶೇ. 70 ರಷ್ಟು ಸೋಂಕು ತಬ್ಲೀಘಿಗಳಿಂದ:
ಬೆಳಗಾವಿ, ಹುಬ್ಬಳ್ಳಿ ಮತ್ತಿತರೆಡೆಗಳಲ್ಲಿ ಶೇ.99 ರಷ್ಟು ಕೋವಿಡ್ ಸೋಂಕು ಬಂದಿರುವುದು ತಬ್ಲೀಘಿ ಜಮಾತ್ ಹಾಗೂ ಅಜ್ಮೀರ್ ಸಭೆಗಳಿಗೆ ಹೋಗಿ ಬಂದವರಿಂದ. ರಾಜ್ಯದಲ್ಲಿ ಶೇ. 60 ರಿಂದ 70 ರಷ್ಟು ಪ್ರಕರಣ ತಬ್ಲೀಘಿಗಳಿಂದ ಬಂದಿದೆ. ಇದು ಜನಸಾಮಾನ್ಯರಿಗೂ ಗೊತ್ತು. ಆದರೆ, ಡಿಕೆಶಿ, ಸಿದ್ದರಾಮಯ್ಯ ಕಾಮಾಲೆ ಕಣ್ಣಿನಿಂದ ನೋಡುತ್ತಿದ್ದಾರೆ. ತಮ್ಮ ವೋಟ್ ಬ್ಯಾಂಕ್ ರಕ್ಷಣೆಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸ್ವಲ್ಪ ಹೊರಗೆ ಬಂದರೆ ಎಲ್ಲವೂ ಅರ್ಥವಾಗಲಿದೆ. ಕಣ್ಣಿನ ಮುಂದಿರುವ ಕೋಮುವಾದದ ಪರದೆ ತೆಗೆಯಿರಿ ಎಂದು ಜಗದೀಶ್ ಶೆಟ್ಟರ್ ಹೇಳಿದರು.

20 ಲಕ್ಷ ಕೋಟಿ ಐತಿಹಾಸಿಕ ಪ್ಯಾಕೇಜ್:
ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಜನ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ದೇಶದ ಇತಿಹಾಸದಲ್ಲೇ ಬರೋಬ್ಬರಿ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಇದಾಗಿದೆ. ಇದನ್ನು ವಿಪಕ್ಷ ನಾಯಕರು ಟೀಕೆ ಮಾಡಿದರೆ ಅವರು ಅಲ್ಲಿರಲು ಯೋಗ್ಯರಲ್ಲ ಎನ್ನಬಹುದು ಎಂದರು.

Advertisement

ಪ್ಯಾಕೇಜ್‌ನಿಂದ ಸಣ್ಣ ಹಾಗೂ ಇತರೆ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಚೀನಾದಿಂದ ಹೊರಬರುವ ದೊಡ್ಡ ದೊಡ್ಡ ಕಂಪನಿಗಳಿಗೆ ಭಾರತ ಹಾಗೂ ಕರ್ನಾಟಕದಲ್ಲಿ ನೆಲೆ ಒದಗಿಸಿ ಇಲ್ಲಿ ಉದ್ಯೋಗ ಸೃಷ್ಟಿ ಮಾಡಲು ಅಗತ್ಯ ಭೂಮಿಕೆಯನ್ನು ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next