ಹುಬ್ಬಳ್ಳಿ: ಬಿ.ಎಲ್.ಸಂತೋಷ್ , ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿಯವರ ಕಪಿಮುಷ್ಟಿಯಲ್ಲಿ ರಾಜ್ಯ ಬಿಜೆಪಿ ಇದ್ದು, ತಾವೆ ನಿರ್ಣಯ ಮಾಡಿ ವರಿಷ್ಠರಿಂದ ಹೇಳಿಸುತ್ತಾರೆ. ಬಿಜೆಪಿಯವರಿಗೆ ನನ್ನ ಸೋಲಿಸುವುದೇ ಪ್ರಮುಖ ಅಜೆಂಡಾವಾಗಿದೆ. ಆದರೆ ಕ್ಷೇತ್ರದ ಜನ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ವಾಗ್ದಾಳಿ ನಡೆಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವನ್ನು ದೇಶದಲ್ಲಿ ಸೆಂಟರ್ ಸ್ಟೇಜ್ ಗೆ ತರುವಂತೆ ಮಾಡಿದ್ದು ಬಿಜೆಪಿಯವರು.
ಬಿಜೆಪಿ ಗೆ ನಾನೇನು ಅನ್ಯಾಯ ಮಾಡಿದ್ದೆ. ಪಕ್ಷ ಕಟ್ಟಿ ಬೆಳೆಸಿದ ನನಗೆ ಟಿಕೆಟ್ ಯಾಕಿಲ್ಲ ಎಂಬ ಅಂಶವನ್ನು ಇಂದಿಗೂ ನೀಡಿಲ್ಲ. ಶೆಟ್ಟರ್ ಕಡೆಗಣಿಸಿದ್ದಕ್ಕೆ ಬಿಜೆಪಿ ಹಣೆಬರಹ ಈಗ ಗೊತ್ತಾಗುತ್ತಿದೆ. ನನಗೆ ಮಾಡಿದ ಅನ್ಯಾಯದ ನೋವು ಉತ್ತರ ಕರ್ನಾಟಕದಲ್ಲಿ ಪರಿಣಾಮ ಬೀರುತ್ತಿದೆ. ಬಿಜೆಪಿ ತಳಪಾಯವೇ ಅಲುಗಾಡುವಂತಾಗಿದೆ ಎಂದರು.
ನಾನು ಶಾಸಕನಾಗಿ ಜನರೊಂದಿಗೆ ಇರಬೇಕೆಂದು ಬಯಸಿದ್ದೆ ಯಾವ ಅಧಿಕಾರ ಬೇಡ ಎಂದು ಟಿಕೆಟ್ ಕೇಳಿದ್ದೆ .ನಕಾರಾತ್ಮಕ ಒಂದು ಅಂಶ ಹೇಳದೆ ಪಕ್ಷ ಕಟ್ಟಿ ಬೆಳೆಸಿದ ನನಗೆ ಅನ್ಯಾಯ ಮಾಡಲಾಯಿತು.
ಹು.ಧಾ.ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಲಗೊಳ್ಳಲು ನನ್ನ ಶ್ರಮವಿದೆ. ಹಳೇ ಮೈಸೂರು ಭಾಗದಲ್ಲಿ, ಧಾರವಾಡದ ಇತರೆ ಕ್ಷೇತ್ರಗಳಲ್ಲಿ ಯಾಕೆ ಬಿಜೆಪಿ ಇಷ್ಟೊಂದು ಗಟ್ಟಿಯಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ದ ಹರಿಹಾಯ್ದ ಶೆಟ್ಟರ್, ಜೋಶಿ ಯವರು ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ತಿಳಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಏನಾಗಲಿದೆ ಎಂಬುದು ಚುನಾವಣೆ ಫಲಿತಾಂಶ ಬರಲಿ ಗೊತ್ತಾಗಲಿದೆ ಎಂದರು.
ಮೀಸಲಾತಿಗೆ ಸುಪ್ರೀಂಕೋರ್ಟ್ ತಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವಸರವೇ ಅಪಘಾತಕ್ಕೆ ಕಾರಣ ಎನ್ನುವಂತಾಗಿದೆ.
ಸರಿಯಾಗಿ ವಿಚಾರ ಮಾಡಿ ತೀರ್ಮಾನ ತೆಗೆದುಕೊಳ್ಳದಿದ್ದರೆ ಹೀಗೆ ಆಗೋದು. ಮತಬ್ಯಾಂಕ್ ಗಾಗಿ ಇಂತಹ ಘೋಷಣೆ ಮಾಡಿದರೆ ಹೀಗೆ ಆಗೋದು ಎಂದರು.
ಇದನ್ನೂ ಓದಿ: Mangaluru; ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು