Advertisement

ವರಿಷ್ಠರಿಗೆ ಸಡ್ಡು ಹೊಡೆದ ಶೆಟ್ಟರ್‌: ಏನೇ ಆಗಲಿ ಅಖಾಡದಿಂದ ಹಿಂದೆ ಸರಿಯಲ್ಲ

12:36 AM Apr 12, 2023 | Team Udayavani |

ಹುಬ್ಬಳ್ಳಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಈ ಬಾರಿ ಟಿಕೆಟ್‌ ಇಲ್ಲ ಎಂಬ ವರಿಷ್ಠರ ಸಂದೇಶ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಇದಕ್ಕೆ ಸಡ್ಡು ಹೊಡೆದಿರುವ ಜಗದೀಶ್‌ ಶೆಟ್ಟರ್‌ ಅದು ಏನೇ ಆಗಲಿ, ಈ ಬಾರಿ ನನ್ನ ಸ್ಪರ್ಧೆ ಖಚಿತ’ ಎಂದು ಘೋಷಿಸಿದ್ದು ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.

Advertisement

ವರಿಷ್ಠರ ತೀರ್ಮಾನದ ವಿರುದ್ಧ ಶೆಟ್ಟರ್‌ ಸೆಡ್ಡು ಹೊಡೆಯುವರೋ ಅಥವಾ ಪಕ್ಷದ ಸೂಚನೆ ಪಾಲಿಸುವ ಶರಣಾಗತಿ ಮನೋಭಾವ ತೋರುವರೋ ಎಂಬ ಕುತ‌ೂ ಹಲ ಸೃಷ್ಟಿಯಾಗಿದೆ. ಮಂಗಳವಾರ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಶೆಟ್ಟರ್‌ ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಹೆಸರಿಲ್ಲದಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯ ಬಿಜೆಪಿಯಲ್ಲಿ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾದ ಜಗದೀಶ್‌ ಶೆಟ್ಟರ್‌ಗೆ ಈ ಬಾರಿ ಟಿಕೆಟ್‌ ಇಲ್ಲ ಎಂಬ ಸುದ್ದಿ ತನ್ನದೇ ರೀತಿಯಲ್ಲಿ ಕೆಲ ದಿನಗಳಿಂದ ಓಡಾಡುತ್ತಿತ್ತು. ಇದು ಪಕ್ಷದ ಹೈಕಮಾಂಡ್‌ ತೀರ್ಮಾನವಲ್ಲ, ನಮ್ಮದೇ ಪಕ್ಷದ ಕೆಲವರು ಉದ್ದೇಶ ಪೂರ್ವಕವಾಗಿ ಹಬ್ಬಿಸಿದ ವದಂತಿ, ಪಕ್ಷದ ವರಿಷ್ಠರು ಮಾತ್ರ ಇದುವರೆಗೂ ಆ ಬಗ್ಗೆ ನನ್ನೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ವತಃ ಶೆಟ್ಟರ್‌ ಸ್ಪಷ್ಟಪಡಿಸಿದ್ದರು. ಅಲ್ಲದೆ ನಾನೇ ಸ್ಪರ್ಧಿಸುವೆ ಎಂದು ಬಹಿರಂಗವಾಗಿ ಘೋಷಿಸಿದ್ದರು. ಆದರೆ ವದಂತಿಯೇ ನಿಜವಾದ ಸುದ್ದಿ ಎನ್ನುವಂತೆ ಮಂಗಳವಾರ ಪಕ್ಷದ ವರಿಷ್ಠರು ಹೊಸಬರಿಗೆ ಟಿಕೆಟ್‌ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳುವ ಮೂಲಕ ಆಘಾತ ನೀಡಿದ್ದಾರೆ.

2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಅನಂತರದಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವಾಗಿ ರೂಪು ಗೊಂಡಿತ್ತು. ಜನತಾ ಪರಿವಾರ ಹಾಗೂ ಕಾಂಗ್ರೆಸ್‌ ಹಿಡಿತ ದಲ್ಲಿದ್ದ ಕ್ಷೇತ್ರವನ್ನು ಜಗದೀಶ್‌ ಶೆಟ್ಟರ್‌ 1994ರಿಂದ ಇಲ್ಲಿ ವರೆಗೆ ಕ್ಷೇತ್ರದಲ್ಲಿ ಸತತವಾಗಿ 6 ಬಾರಿ ಗೆಲುವು ಸಾಧಿಸಿದ್ದಾರೆ. ಮಾಜಿ ಸಿಎಂ ಎಸ್‌.ಆರ್‌.ಬೊಮ್ಮಾಯಿ ಅವರಿಗೆ ಸೋಲುಣಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದ ಶೆಟ್ಟರ್‌ ಹಿಂದಿರುಗಿ ನೋಡಿದ್ದೆ ಇಲ್ಲ. ವಿಧಾನಸಭೆ ವಿಪಕ್ಷ ನಾಯಕರಾಗಿ, ಸಚಿವರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಸ್ಪೀಕರ್‌, ಮುಖ್ಯಮಂತ್ರಿ ಹೀಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದು, ಹಲವರಿಗೆ ಟಿಕೆಟ್‌ ಕೊಡಿಸಬಹುದಾದ ಸ್ಥಾನದಲ್ಲಿದ್ದವರು ಇದೀಗ ತಮ್ಮದೇ ಟಿಕೆಟ್‌ ಗ್ಯಾರೆಂಟಿ ಬಗ್ಗೆ ಯೋಚಿಸುವಂತಾಗಿದೆ.

ಜಗದೀಶ್‌ ಶೆಟ್ಟರ್‌ ಪಕ್ಷ ನಿಷ್ಠೆ ವಿಚಾ ರದಲ್ಲಿ ಯಾವುದೇ ಸಂಶಯ- ಶಂಕೆ ಇಲ್ಲ. ಮೃದು ಸ್ವಭಾವದ ವ್ಯಕ್ತಿ. ಯಾ ವುದೇ ವಿವಾದ ವಿಷಯಗಳು ಬಂದಾ ಗಲೂ ಬಹಿರಂಗ ಹೇಳಿಕೆ ನೀಡದೆ ಅದನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸುತ್ತೇನೆ, ಅಲ್ಲಿ ನನ್ನ ಅಭಿಪ್ರಾಯ ಏನೆಂದು ಹೇಳುತ್ತೇನೆ ಎಂದು ಜಾರಿಕೊಳ್ಳುವ ಜಾಯ ಮಾನದವರು. ಆದರೆ ಇದೀಗ ಮೊದಲ ಬಾರಿಗೆ ಪಕ್ಷದ ವರಿಷ್ಠರ ಅನಿಸಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಜಗದೀಶ್‌ ಶೆಟ್ಟರೇ ಸ್ಪರ್ಧಿಸುತ್ತಾರೆ: ಪಕ್ಷದ ವರಿಷ್ಠರು ನೀವು ಸೂಚಿಸಿದ ಕಾರ್ಯಕರ್ತರಿಗೆ ಟಿಕೆಟ್‌ ನೀಡುತ್ತೇವೆ ಎಂಬ ಪ್ರಸ್ತಾವನೆ ಮುಂದಿಟ್ಟರೆ ನಿಮ್ಮ ನಿಲುವೇನು ಎಂಬುದಕ್ಕೂ ತೀಕ್ಷವಾಗಿ ಪ್ರತಿಕ್ರಿಯಿಸಿರುವ ಅವರು, ಜಗದೀಶ್‌ ಶೆಟ್ಟರೇ ಸ್ಪರ್ಧಿಸುತ್ತಾರೆ ಇದರಲ್ಲಿ ಯಾವ ಅನು ಮಾನವೂ ಬೇಡ, ನಾನೇ ಸ್ಪರ್ಧಿಸಲು ಸಿದ್ಧನಿರುವಾಗ ಇನ್ನೊಬ್ಬರ ಹೆಸರು ನಾನೇಕೆ ಹೇಳಲಿ ಎಂದು ಪ್ರಶ್ನಿಸುವ ಮೂಲಕ ವರಿಷ್ಠರ ಅನಿಸಿಕೆಗೆ ಸಡ್ಡು ಹೊಡೆಯುವ ಲಕ್ಷಣ ತೋರಿದ್ದಾರೆ. ಕ್ಷೇತ್ರ ಮಟ್ಟಿಗೆ ಬಿಜೆಪಿ ಎಂದರೆ ಜಗದೀಶ್‌ ಶೆಟ್ಟರ್‌, ಶೆಟ್ಟರ್‌ ಎಂದರೆ ಬಿಜೆಪಿ ಎನ್ನುವಂತಿದೆ. ಕ್ಷೇತ್ರದ ಜನತೆಯೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಶೆಟ್ಟರ್‌, ಎಂತಹದ್ದೇ ಸ್ಥಿತಿ ಬರಲಿ ಸ್ಪರ್ಧೆ ಖಚಿತ ಎಂದಿರುವುದು ಮಾತ್ರ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಪಕ್ಷ ವ್ಯತಿರಿಕ್ತ ನಿಲುವು ತೆಗೆದು ಕೊಂಡರೂ ಸರಿ ನನ್ನ ಸ್ಪರ್ಧೆ ಇರುತ್ತೆ ಎನ್ನುವ ಅನಿಸಿಕೆ ಸಹಜವಾಗಿ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬೇರೆ ಪಕ್ಷದ ವಿಷಯವಾಗಿ ಕನಸಿನಲ್ಲಿಯೂ ಯೋಚಿಸದೆ ಬಿಜೆಪಿ ನಿಷ್ಠರಾಗಿದ್ದ ಜಗದೀಶ್‌ ಶೆಟ್ಟರ್‌ ಸ್ಪರ್ಧೆ ಮಾಡಿಯೇ ಸಿದ್ಧ ಎನ್ನುವುದಾದರೆ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಅಥವಾ ಪಕ್ಷೇತರಾಗಿ ಸ್ಪರ್ಧಿಸುತ್ತಾರೋ, ಪಕ್ಷದ ಹೈಕಮಾಂಡ್‌ ತನ್ನ ಮನಸ್ಸು ಬದಲಿ ಮತ್ತೆ ಶೆಟ್ಟರ್‌ಗೆ ಮಣೆ ಹಾಕಲಿದೆಯೋ ಎಂಬುದು ಕುತೂಹಲ ಮೂಡಿಸಿದೆ.

ನಕಲಿ ರಾಜೀನಾಮೆ ಪತ್ರ ತಂದ ಆತಂಕ
ಜಗದೀಶ್‌ ಶೆಟ್ಟರ್‌ಗೆ ಟಿಕೆಟ್‌ ಇಲ್ಲ ಎಂಬ ಸುದ್ದಿ ನಡುವೆಯೇ ಶೆಟ್ಟರ್‌ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ’ ಎಂಬ ನಕಲಿ ರಾಜೀನಾಮೆ ಪತ್ರವೊಂದು ಸುಳಿದಾಡುವ ಮೂಲಕ ಇನ್ನಷ್ಟು ಗೊಂದಲ ಸೃಷ್ಟಿಗೆ ಕಾರಣ ವಾಗಿತ್ತಲ್ಲದೆ, ಅನಂತರ ಸ್ವತಃ ಶೆಟ್ಟರ್‌ ಅವರು ಅದೊಂದು ನಕಲಿ ಪತ್ರವಾಗಿದ್ದು, ನಾನು ಯಾವುದೇ ರಾಜೀನಾಮೆ ಪತ್ರ ನೀಡಿಲ್ಲ. ಪಕ್ಷದ ವರಿಷ್ಠರ ಬಗ್ಗೆ ನನಗೆ ಈಗಲೂ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next