ಹುಬ್ಬಳ್ಳಿ: ರಾಜ್ಯಾದ್ಯಂತ ವಕ್ಫ್ ಗೊಂದಲವು ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ವಕ್ಫ್ ಬೋರ್ಡ್ ಗೆ ಆಸ್ತಿ ಕೊಡಿಸುವ ಮೂಲಕ ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ರಾಜ್ಯ ಸರಕಾರ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ಬಗ್ಗೆ ನೋಟಿಸ್ ಕೊಟ್ಟಿದ್ದು ರಾಜ್ಯ ಸರ್ಕಾರ ಆಡಳಿತ ವೈಫಲ್ಯ. ಇದನ್ನು ಯಾರು ಕೇಳದಿದ್ದರೆ ಅದು ವಕ್ಫ್ ಬೋರ್ಡ್ ಆಸ್ತಿ ಆಗುತ್ತಿತ್ತು. ಕಾಂಗ್ರೆಸ್ ಸರಕಾರ ಇಷ್ಟೊಂದು ಹೀನ ಪರಿಸ್ಥಿತಿಗೆ ಇಳಿಯಬಾರದಿತ್ತು. ಕೂಡಲೇ ರೈತರಿಗೆ ನೀಡಿರುವ ನೋಟಿಸ್ ವಾಪಸ್ಸು ಪಡೆದು ರೈತರ ಕ್ಷಮೆಯಾಚಿಸಬೇಕು ಎಂದರು.
ಇದು ರೈತರ ಜಮೀನು ಕಬಳಿಸುವ ಈ ಕುತಂತ್ರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ರೈತರ ಹಿತಾಸಕ್ತಿ ಕಾಪಾಡಲು, ತುಷ್ಟಿಕರಣ ಖಂಡಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ. ನಮ್ಮ ಕಾಲದಲ್ಲಿ ಒಂದೋ ಎರಡು ಪ್ರಕರಣ ಆಗಿರಬಹುದು ಅದನ್ನು ಸ್ಥಳಿಯ ಅಧಿಕಾರಿಗಳನ್ನು ಕೇಳಬೇಕು. ನಮ್ಮ ಶೋಧನ ಸಮಿತಿ ವರದಿ ತಯಾರಿಸಲಿದೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಪ್ರಾಥಮಿಕವಾಗಿ ಸಾಭೀತಾಗಿದೆ. ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರು ಹಾಗೂ ಅಧಿಕಾರಿಗಳು ಇಡಿ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರ್ಕಾರದ ಮೇಲಿನ ಆಡಳಿತ ನಂಬಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೂಡಲೇ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಹೊರಟರೆ ಬಿಜೆಪಿ ಬಿಡಲ್ಲ… ಶಾಸಕ ಚನ್ನಬಸಪ್ಪ ಆಕ್ರೋಶ