ಕಾಳಗಿ: ತಾಲೂಕಿನ ಪಸ್ತಪುರ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದ ನಾಲ್ಕು ಶಾಲಾ ಕೋಣೆ ಹಾಗೂ 25ಲಕ್ಷ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಭವನ, ಗಂಜಗೇರಾ ಗ್ರಾಮದಲ್ಲಿ 35ಲಕ್ಷ ರೂ. ವೆಚ್ಚದಲ್ಲಿ ಮೂರು ಶಾಲೆ ಕೊಣೆಗಳನ್ನು ಶಾಸಕ ಡಾ| ಅವಿನಾಶ ಜಾಧವ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ, ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜನಪ್ರತಿನಿಧಿಗಳು ತಂದಿರುವ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಜನಸಾಮಾನ್ಯರು ಅಭಿವೃದ್ಧಿ ಕೆಲಸಗಳು ತಮ್ಮದೆಂಬಂತೆ ಭಾವಿಸಿ ಗುಣಮಟ್ಟದಿಂದ ನಡೆಯುವಂತೆ ಜವಬ್ದಾರಿ ಹೊಣೆ ಹೊತ್ತಾಗ ಮಾತ್ರ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಅಪೆಂಡಿಕ್ಸ್ ಯೋಜನೆಯಲ್ಲಿ 10ಕೋಟಿ ರೂ. ವೆಚ್ಚದಲ್ಲಿ ರುಮ್ಮನಗೂಡ, ಮೋಘಾ ಮೂಲಕ ಯಲಕಪಳ್ಳಿ ವರೆಗಿನ ರಸ್ತೆ 18ಕಿ.ಮೀ ರಸ್ತೆ ನಿರ್ಮಾಣ, 7ಕೋಟಿ ರೂ. ವೆಚ್ಚದಲ್ಲಿ ಪಸ್ತಪುರ, ಅಲ್ಲಾಪುರ, ದೋಟಿಕೋಳ ರಸ್ತೆ ನಿರ್ಮಾಣ, ಪಸ್ತಪುರ-ಗಂಜಗೇರಾ ಮಾರ್ಗದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಎರಡು ಸಿಡಿ ಕಾಮಗಾರಿ, ಪಸ್ತಪುರ ಗ್ರಾಮದಲ್ಲಿ 1.10 ಕೋಟಿ ರೂ. ಹಾಗೂ ತಾಂಡಾದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಜಲಜೀವನ ಯೋಜನಯಲ್ಲಿ ಮನೆಮನೆಗೆ ನಳ ಸಂಪರ್ಕ ಒದಗಿಸಲಾಗುವುದು ಎಂದು ಹೇಳಿದರು.
ಗಂಜಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ತಾತ್ಕಾಲಿಕವಾಗಿ ಬೊರವೆಲ್ ಕೊರೆಯಿಸಿ ನೀರಿನ ವ್ಯವಸ್ಥೆ ಮಾಡಲಾಗುವುದು, ಜೆಜೆಎಂ ಯೋಜನೆ ಅಡಿಯಲ್ಲಿ ಮನೆಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಕೊಡುವ ಮೂಲಕ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಸುಗೂರನ ಪೂಜ್ಯ ಡಾ| ಚೆನ್ನರುದ್ರಮುನಿ ಶಿವಾಚಾರ್ಯರು, ಗ್ರಾ.ಪಂ ಅಧ್ಯಕ್ಷ ವಿರೇಶ ಘಂಟಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಬಸವಣಪ್ಪ ಕುಡ್ಡಳ್ಳಿ, ಅಲ್ಲಮಪ್ರಭು ಹುಲಿ, ಗೌಡಪ್ಪಗೌಡ ಕೊಟಗಾ, ಸಂಗ್ರಾಮ ಉಚ್ಚೇದ, ಗ್ರಾಪಂ ಉಪಾಧ್ಯಕ್ಷ ವಿಕಾಸ ಕೆ. ಜಾಧವ ಇದ್ದರು.