Advertisement
ಕಾರ್ಯಕ್ರಮದಲ್ಲಿ ಹಲಸಿನಿಂದ ತಯಾರಿಸಿದ ಖಾದ್ಯಗಳನ್ನು ಮಾರಾಟ ಮಾಡುವ 13ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿತ್ತು. ಕಾರ್ಕಳದಿಂದ ಬಂದಿದ್ದ ಸಂತೋಷ್ ಅವರು, ಹಲಸಿನ ಬೀಜದಿಂದ ತಯಾರಿಸಿದ ಹಪ್ಪಳ, ವೊಡೆ, ಕೇಕ್ ಹಾಗೂ ಹಣ್ಣಿನಿಂದ ಮಾಡಿದ ಚಿಪ್ಸ್, ಪತ್ರೊಡೆ, ಗಾರಿಗೆ, ಕಡುಬು, ಕಬಾಬ್, ಬೋಂಡಾ, ವೊಡಪಾವು ಗಮನ ಸೆಳೆದವು.
Related Articles
Advertisement
ಚಾಲನೆ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ರೋಟರಿ ಗವರ್ನರ್ ರೋಟೇರಿಯನ್ ಜೋಸೆಪ್ ಮ್ಯಾಥು, ಬಡವರ ಹಣ್ಣು ಎಂದೇ ಖ್ಯಾತಿಗೊಂಡಿರುವ ಹಲಸು ಔಷಧ ಗುಣಗಳಿಂದ ಮುನ್ನೆಲೆಗೆ ಬರುತ್ತಿದೆ. ಬರಗಾಲ ಎದುರಿಸಿ ನಿಲ್ಲುವ ಹಲಸು ರಾಸಾಯನಿಕ ಔಷಧ, ಗೊಬ್ಬರ ಯಾವುದನ್ನು ಬೇಡುವುದಿಲ್ಲ. ಹಾಗಾಗಿ ನಗರದ ಗ್ರಾಹಕರು ಹಲಸು ಮತ್ತು ಅದರಿಂದ ತಯಾರಿಸಿದ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ರೈತರ ಅಭಿವೃದ್ಧಿಗೆ ನೆರವಾಗುವಂತೆ ಸಲಹೆ ನೀಡಿದರು.
ಪುಸ್ತಕ ಬಿಡುಗಡೆ: ಸಾವಯವ ಕೃಷಿಕ ಶಿವನಾಪುರದ ರಮೇಶ್ ಮಾತನಾಡಿ, 15 ಬಗೆಯ ಹಲಸಿನ ತಳಿಗಳ ಗುಣಗಳ ವಿಶೇಷತೆಯನ್ನು ವಿವರಿಸಿದರು. ವೇದಿಕೆಯಲ್ಲಿ ಸಹಜ ಕೃಷಿಕ ಎ.ಪಿ.ಚಂದ್ರಶೇಖರ್ ರಚಿಸಿರುವ “ಹಲಸು ಬಿಡಿಸಿದಾಗ ‘ ಪುಸ್ತಕ ಬಿಡುಗಡೆಗೊಳಿಸಲಾಯಿತು. ಜೈವಿಕ್ ಕೃಷಿಕ್ ಸಂಸ್ಥೆಯ ಗೌರಾವಾಧ್ಯಕ್ಷ ಡಾ.ಕೆ.ರಾಮಕೃಷ್ಣಪ್ಪ, ಸಹಜ ಸಮೃದ್ಧ ಅಧ್ಯಕ್ಷ ಎನ್.ಆರ್.ಶೆಟ್ಟಿ, ಬೆಂಗಳೂರು ಕೃಷ್ಠಿ ವಿವಿ ಪ್ರಾಧ್ಯಾಪಕಿ ಡಾ.ಎಸ್.ಶಾಮಲಾ ರೆಡ್ಡಿ ಮಾತನಾಡಿದರು.
ಹಲಸು ನೆಟ್ಟು, ಬರ ಅಟ್ಟು ಕಾರ್ಯಾಗಾರದಲ್ಲಿ ಹಿರೇಹಳ್ಳಿ ಫಾರಂ ಮುಖ್ಯಸ್ಥ ಡಾ.ಜಿ.ಕರುಣಾಕರನ್, ಕೃಷಿಕ ಹೆಗ್ಗವಾಡಿಪುರದ ಶಿವಕುಮಾರಸ್ವಾಮಿ ಅವರು ಹಲಸಿನ ಮಹತ್ವ , ವಿಶೇಷತೆ ಮತ್ತು ಹಲಸು ಬೆಳೆದರೆ ಹೇಗೆ ಆದಾಯ ಗಳಿಸಬಹುದು ಎಂಬುದನ್ನು ತಿಳಿಸಿದರು. ರೋಟೇರಿಯನ್ ರಿಜಿನಾಲ್ಡ ವೆಸ್ಲಿ, ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣಪ್ರಸಾದ್, ರೊಟೇರಿಯನ್ ಉಲ್ಲಾಸ್ ಪಂಡಿತ್ ಇದ್ದರು.
ಕರ್ನಾಟಕ ಹಲಸಿನ ತವರು: ದೇಶದಲ್ಲಿ ಸಾವಿರಕ್ಕೂ ಹೆಚ್ಚು ಹಲಸಿನ ತಳಿಗಳಿದ್ದು, ರಾಜ್ಯದಲ್ಲಿ 150 ತಳಿಗಳು ಇವೆ. ಕರ್ನಾಟಕ ಹಲಸಿನ ತವರಾಗಿದ್ದು, ನೂರಾರು ಬಗೆಯ ಹಲಸಿನ ತಳಿಗಳು ಇಲ್ಲಿ ವಿಕಸಿತಗೊಂಡಿವೆ. ಹಲಸಿನಿಂದ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರು ಮಾಡಬಹುದಾಗಿದ್ದು, ಹಲಸಿನಿಂದ ಮೌಲ್ಯವರ್ಧಿತ ಉತ್ಪನ್ನ ಮಾಡಿದಾಗ ರೈತನಿಗೂ ಆದಾಯ ಬರುತ್ತದೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್.ದಿನೇಶ್ ತಿಳಿಸಿದರು.
ಕಸಿ ಸಸಿಗಳ ಭರ್ಜರಿ ಮಾರಾಟ: ಬೆಳಗ್ಗೆ ಹಲಸಿನ ಹಬ್ಬ ಆರಂಭವಾಗುತ್ತಿದ್ದಂತೆ ಒಬ್ಬೊಬ್ಬರಾಗಿಯೇ ಕಾರ್ಯಕ್ರಮಕ್ಕೆ ಬಂದವರು ತಮಗಿಷ್ಟವಾದ ತಳಿಯ ಕಸಿ ಸಸಿಗಳನ್ನು ಖರೀದಿಸಿದರು. ಅವುಗಳಲ್ಲಿ ಸಿಂಧೂ, ಹೆಜ್ಜೆನು, ಅಂಟುರಹಿತ, ಬೈರ, ವಿಯಟ್ನಾಂ ಸೂಪರ್ ಅರ್ಲಿ, ಬೆಂಗ್ ಸೂರ್ಯ, ನಾಗಚಂದ್ರ, ರಾಮಚಂದ್ರ, ಕಾಚಳ್ಳಿ ಹಸಲು, ಲಾಲ್‌ಬಾಗ್ ಮಧುರ, ಸಿಂಗಾಪುರ ಹಲಸು, ಜೇನು ಬೊಕ್ಕೆ, ಸರ್ವ ಋತು ಹಲಸು, ರುದ್ರಾಕ್ಷಿ ಬೊಕ್ಕೆ, ಈ-11, ಜೆ-33 ಮುಂತಾದ ತಳಿಯ ಹಲಸಿನ ಸಸಿಗಳು ಹೆಚ್ಚು ಮಾರಾಟವಾದವು.
ಇವುಗಳ ಜೊತೆಗೆ ಹುಣಸೇ, ಸೀಬೆ, ನೇರಳೆ, ನೆಲ್ಲಿ, ಮಾವಿನ ಸಸಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕೃಷಿ ಮತ್ತು ಹಲಸು ಕೃಷಿ ಸಂಬಂಧಿತ ಪುಸ್ತಕಗಳನ್ನೂ ಮಾರಾಟಕ್ಕೆ ಇಡಲಾಗಿತ್ತು. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಹಬ್ಬದಲ್ಲಿ ಅನೇಕ ಗ್ರಾಹಕರು ಭಾಗವಹಿಸಿ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.