Advertisement

ಎಳೆ ಹಲಸು ರುಚಿ ಸೊಗಸು 

02:25 PM Jan 17, 2018 | |

ಸಾಮಾನ್ಯವಾಗಿ ಚಳಿಗಾಲದ ಆರಂಭದಲ್ಲಿ ಎಳೆ ಹಲಸಿನಕಾಯಿಗಳು ಸಿಗುತ್ತವೆ. ಈ ಹಂತದಲ್ಲಿ ಅದನ್ನು “ಗುಜ್ಜೆ’ ಅನ್ನುತ್ತಾರೆ. ಕರಾವಳಿ ಮತ್ತು ಮಲೆನಾಡಿನ ಜನರಿಗೆ ಹಲಸಿನಕಾಯಿಯ ಅಡುಗೆಗಳು ಅಚ್ಚುಮೆಚ್ಚು. ಗುಜ್ಜೆಯ ಅಡುಗೆಯ ಸವಿ  ಹಾಗೂ ಅದನ್ನು ಹೆಚ್ಚಲು ಬೇಕಾದ ಕುಶಲತೆ ಎರಡನ್ನೂ ಬಲ್ಲವರೇ ಬಲ್ಲರು. ಗುಜ್ಜೆಯನ್ನು ಬಳಸಿ ತಯಾರಿಸುವ ಕೆಲವು ಅಡುಗೆಗಳ ರೆಸಿಪಿ ಇಲ್ಲಿವೆ:

Advertisement

1. ಗುಜ್ಜೆ ಪಲ್ಯ 
ಬೇಕಾಗುವ ಸಾಮಗ್ರಿ: ಹೆಚ್ಚಿದ ಗುಜ್ಜೆಯ ಹೋಳು-4 ಕಪ್‌, ಖಾರ ಪುಡಿ- 1/2 ಚಮಚ, ಅರಿಶಿನಪುಡಿ-ಚಿಟಿಕೆಯಷ್ಟು, ಉಪ್ಪು- ರುಚಿಗೆ ತಕ್ಕಷ್ಟು, ಬೆಲ್ಲ- ಸಣ್ಣ ತುಂಡು (ಬೇಕಿದ್ದರೆ ಮಾತ್ರ) ,ತೆಂಗಿನ ತುರಿ – ಒಂದು ಕಪ್‌. ಒಗ್ಗರಣೆಗೆ: ಉದ್ದಿನಬೇಳೆ, ಸಾಸಿವೆ, ಒಣಮೆಣಸಿನಕಾಯಿ, ಎಣ್ಣೆ, ಕರಿಬೇವು    

ಮಾಡುವ ವಿಧಾನ: ಗುಜ್ಜೆಯ ಹೋಳುಗಳಿಗೆ ಉಪ್ಪು, ಖಾರಪುಡಿ, ಅರಿಶಿನಪುಡಿ ಮತ್ತು ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿ  ಬೇಯಿಸಿ. ಬಾಣಲೆಯಲ್ಲಿ ಉದ್ದಿನಬೇಳೆ, ಸಾಸಿವೆ, ಒಣಮೆಣಸು ಮತ್ತು ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ. ಅದಕ್ಕೆ ಬೆಂದ ಹೋಳುಗಳನ್ನು ಸೇರಿಸಿ, ಸೌಟಿನಲ್ಲಿ ಕೈಯಾಡಿಸಿ. ಪಲ್ಯದಲ್ಲಿ  ಹೆಚ್ಚು ನೀರಿದ್ದರೆ, ಸಣ್ಣ ಉರಿಯಲ್ಲಿ ಇಂಗಿಸಿ, ತೆಂಗಿನ ತುರಿಯನ್ನು ಸೇರಿಸಿ ಪುನಃ ಬೆರೆಸಿದಾಗ ಗುಜ್ಜೆಯ ಪಲ್ಯ ಸಿದ್ಧ. ಅನ್ನ ಹಾಗೂ ಚಪಾತಿ ಜೊತೆಗೆ ಈ ಪಲ್ಯ ಇದ್ದರೆ ಬಲು ಚೆನ್ನ. 

2. ಗುಜ್ಜೆಯ ಜೀರಿಗೆ ಹುಳಿ 
ಬೇಕಾಗುವ ಸಾಮಗ್ರಿ: ಗುಜ್ಜೆ ಹೋಳು- 4 ಕಪ್‌,  ಖಾರದ ಪುಡಿ-ಅರ್ಧ ಚಮಚ , ಅರಿಶಿನಪುಡಿ-ಕಾಲು ಚಮಚ , ಹುಣಸೆಹಣ್ಣು -ಸಣ್ಣ ಗೋಲಿಯಷ್ಟು,  ಉಪ್ಪು-ರುಚಿಗೆ ತಕ್ಕಷ್ಟು, ತೆಂಗಿನ ತುರಿ – ಒಂದು ಕಪ್‌, ಜೀರಿಗೆ- ಒಂದು ಚಮಚ , ಹಸಿರು ಮೆಣಸು – 2. ಒಗ್ಗರಣೆಗೆ:
ಸಾಸಿವೆ,  ಒಣಮೆಣಸಿನಕಾಯಿ, ಎಣ್ಣೆ, ಕರಿಬೇವು.;    

ಮಾಡುವ ವಿಧಾನ:  ಹಲಸಿನ ಹೋಳುಗಳಿಗೆ ಉಪ್ಪು, ಖಾರಪುಡಿ, ಅರಿಶಿನಪುಡಿ ಮತ್ತು ಸ್ವಲ್ಪ ನೀರು ಹಾಕಿ ಕುಕ್ಕರ್‌ನಲ್ಲಿ  ಬೇಯಿಸಿ. ತೆಂಗಿನ ತುರಿ, ಜೀರಿಗೆ, ಹಸಿ ಮೆಣಸಿನಕಾಯಿ ಮತ್ತು ಹುಣಸೇಹಣ್ಣನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಬೆಂದ ಹೋಳುಗಳಿಗೆ  ರುಬ್ಬಿದ ಮಿಶ್ರಣ ಸೇರಿಸಿ, ಬೇಕಿದ್ದರೆ ನೀರು ಸೇರಿಸಿ, ಮಂದವಾಗಿ ಕುದಿಸಿ. ಇದಕ್ಕೆ ಸಾಸಿವೆ, ಒಣಮೆಣಸು ಮತ್ತು ಕರಿಬೇವು ಹಾಕಿದ ಒಗ್ಗರಣೆ ಸೇರಿಸಿದರೆ ಹಲಸಿನಕಾಯಿಯ ಜೀರಿಗೆ ಹುಳಿ ರೆಡಿ. 

Advertisement

3. ಗುಜ್ಜೆ ಸಾಂಬಾರು
ಬೇಕಾಗುವ ಸಾಮಗ್ರಿ: ಹೆಚ್ಚಿದ ಗುಜ್ಜೆ ಹೋಳು-4 ಕಪ್‌, ಅರಿಶಿನ ಪುಡಿ-ಚಿಟಿಕೆಯಷ್ಟು, ಉಪ್ಪು-ರುಚಿಗೆ ತಕ್ಕಷ್ಟು, ಮಸಾಲೆಗೆ: ಬ್ಯಾಡಗಿ ಒಣಮೆಣಸಿನಕಾಯಿ-4,  ದನಿಯಾ-1 ಚಮಚ, ಉದ್ದಿನಬೇಳೆ-ಅರ್ಧ ಚಮಚ, ಜೀರಿಗೆ- ಕಾಲು ಚಮಚ, ಮೆಂತ್ಯೆ-ಕಾಲು ಚಮಚ, ಇಂಗು- ಚಿಟಿಕೆಯಷ್ಟು, ಹುಣಸೆಹಣ್ಣು-ಸಣ್ಣ ಗೋಲಿಯಷ್ಟು,  ತೆಂಗಿನ ತುರಿ-ಒಂದು ಕಪ್‌ (ಬೇಕಿದ್ದರೆ: ಬೇಯಿಸಿದ ತೊಗರಿಬೇಳೆ ಅರ್ಧ ಕಪ್‌). ಒಗ್ಗರಣೆಗೆ: ಸಾಸಿವೆ, ಒಣಮೆಣಸಿನಕಾಯಿ, ಎಣ್ಣೆ, ಕರಿಬೇವು. 

ಮಾಡುವ ವಿಧಾನ:  ಹಲಸಿನಕಾಯಿಯ ಹೋಳುಗಳಿಗೆ ಉಪ್ಪು, ಖಾರದಪುಡಿ, ಅರಿಶಿನಪುಡಿ , ಹುಣಸೇಹಣ್ಣಿನ ರಸ ಮತ್ತು ಸ್ವಲ್ಪ ನೀರು ಹಾಕಿ ಬೇಯಿಸಿ. ಕೆಲವು ಹಲಸಿನಕಾಯಿಗಳಿಗೆ ಸ್ವಲ್ಪ ಒಗರು ರುಚಿ ಇರುವುದರಿಂದ ಬೇಕಿದ್ದರೆ ಸಣ್ಣ ತುಂಡು ಬೆಲ್ಲವನ್ನೂ ಸೇರಿಸಬಹುದು. ಮಸಾಲೆ ವಸ್ತುಗಳನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.  ತೆಂಗಿನ ತುರಿಯೊಂದಿಗೆ ಹುರಿದ ಮಸಾಲೆಯನ್ನು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಬೆಂದ ಹೋಳುಗಳಿಗೆ ರುಬ್ಬಿದ ಮಿಶ್ರಣ ಸೇರಿಸಿ, ಸಾಂಬಾರಿನ ಹದಕ್ಕೆ ಕುದಿಸಿ. ಗುಜ್ಜೆ ಸಾಂಬಾರಿಗೆ ಸಾಮಾನ್ಯವಾಗಿ ಬೇಯಿಸಿದ ತೊಗರಿಬೇಳೆ ಸೇರಿಸುವುದಿಲ್ಲ. ಬೇಕಿದ್ದರೆ ಸೇರಿಸಬಹುದು. ಜೊತೆಗೆ ಒಗ್ಗರಣೆ ಸೇರಿಸಿದರೆ, ಗುಜ್ಜೆಯ ಸಾಂಬಾರು ಸಿದ್ಧ. 

ಪೂರ್ವ ತಯಾರಿ:  ಹಲಸನ್ನು ಹೆಚ್ಚಲು ನಾಜೂಕಿನ ಚಾಕುಗಳಿಂದ ಬಲು ಕಷ್ಟ. ಇದಕ್ಕೆ ಮೆಟ್ಟುಗತ್ತಿ ಅಥವಾ ಈಳಿಗೆಮಣೆಯೇ ಸರಿ. ಮೇಣ (ಅಂಟು) ನೆಲಕ್ಕೆ ಅಂಟದಂತೆ ದೊಡ್ಡ ಪ್ಲಾಸ್ಟಿಕ್‌, ಅಡಿಕೆಯ ಹಾಳೆ ಅಥವಾ ಬಾಳೆಲೆಯನ್ನು ಹಾಸಿ ಅದರ ಮೇಲೆ ಗುಜ್ಜೆಯನ್ನು ಇರಿಸಿ, ಅರ್ಧ ಮಾಡಬೇಕು. ಕೈಗೆ ಎಣ್ಣೆ  ಸವರಿಕೊಂಡು, ಪೇಪರ್‌ನಲ್ಲೋ, ಬಾಳೆಲೆಯಲ್ಲೋ ಮೇಣವನ್ನು ಒರೆಸಿ, ಮುಳ್ಳುಗಳುಳ್ಳ ಸಿಪ್ಪೆ ಮತ್ತು ದಂಡನ್ನು ಬೇರ್ಪಡಿಸಿ, ದೊಡ್ಡ ತುಂಡುಗಳನ್ನಾಗಿ ಮಾಡಿ  ನೀರಿಗೆ ಹಾಕುವುದು ಮೊದಲ ಹಂತ. ನಂತರ ತರಕಾರಿಯಂತೆಯೇ ಹೆಚ್ಚಿ ಪಲ್ಯ, ಸಾಂಬಾರು, ಜೀರಿಗೆ ಹುಳಿ, ಉಪ್ಪಿನಕಾಯಿ ಇತ್ಯಾದಿಗಳನ್ನು ತಯಾರಿಸಬಹುದು. ಬಜ್ಜಿ, ಪಕೋಡ, ಮಂಚೂರಿ, ಕೂರ್ಮ, ಕಟ್ಲೆಟ್‌….ಇತ್ಯಾದಿ ಹಲವಾರು ತಿನಿಸುಗಳಿಗೂ ಗುಜ್ಜೆ ಸೈ. 

ಹೇಮಮಾಲಾ.ಬಿ

Advertisement

Udayavani is now on Telegram. Click here to join our channel and stay updated with the latest news.

Next