Advertisement
ಹಾಗೆ ನೋಡಿದರೆ ಹಲಸು, ಕಲ್ಪವೃಕ್ಷಕ್ಕಿಂತ ಏನೇನೂ ಕಡಿಮೆಯದ್ದಲ್ಲ. ಬೀಜ, ಮರ, ಹೀಚು, ಹಣ್ಣು, ಸೋಳೆ, ಸಿಪ್ಪೆ, ದಿಂಡು- ಹೀಗೆ ಯಾವುದೂ ಹಲಸಿನಲ್ಲಿ ಬಿಸಾಡುವ ವಸ್ತು ಇಲ್ಲ. ತುಳುವ (ಅಂಬಲಿ) ಮತ್ತು ಬರಿಕ (ಬಕ್ಕೆ) ಎಂಬ ಎರಡು ಬಗೆಯ ಹಲಸಿನ ಹಣ್ಣು ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಸಿದ್ಧ. ತುಳುನಾಡಿನ ಜನ ತುಳುವ ಹಲಸಿನಂತೆ ಮೃದು ಮನಸ್ಸಿನವರೆಂದು ಪ್ರತೀತಿಯೇ ಇದೆ. ನಮ್ಮ ಹಿರಿಯರು ಹಲಸಿನ ಹಣ್ಣಿನಿಂದ ಹಲವು ಬಗೆಯ ಖಾದ್ಯಗಳನ್ನು ಮಾಡುತ್ತಿದ್ದರು. ಹಪ್ಪಳ, ಹಲ್ವ, ಗಟ್ಟಿ, ದೋಸೆ, ಇಡ್ಲಿ, ಗಾರಿಗೆ, ಉಪ್ಪಿನಕಾಯಿ, ಪಲ್ಯ, ಸಾರು, ಸಾಂಬಾರು, ಸಾಂಥಣಿ (ಬೇಯಿಸಿ ಒಣಗಿಸಿದ ಬೀಜ), ಉಪ್ಪಡಚ್ಚಿರ್ (ಉಪ್ಪಿನಲ್ಲಿ ಹಾಕಿದ ಸೋಳೆ), ಚಂಗುಲಿ, ಪಾಯಸ, ಪಾನೀಯ, ಕಡಬು – ಹೀಗೆ ಎಲ್ಲ ಋತುಗಳಿಗೂ ಸಲ್ಲುವ ಖಾದ್ಯ ವಸ್ತುಗಳನ್ನು ಹಲಸಿನಿಂದ ತಯಾರಿಸಲಾಗುತ್ತಿತ್ತು.
Related Articles
Advertisement
ಹಲಸಿನ ಮರ ಬಹೂಪಯೋಗಿಯಾಗಿದ್ದು ಪೀಠೊಪಕರಣಗಳ ತಯಾರಿಕೆ, ರಸ್ತೆ ಬದಿಯ ನೆರಳಾಗಿ, ದನಕರುಗಳಿಗೆ ಮೇವಾಗಿ, ಗಾಳಿ ತಡೆಗೆ – ಹೀಗೆ ಹಲವು ಆಯಾಮಗಳಲ್ಲಿ ಬಳಸಲಾಗುತ್ತದೆ. ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪೂಜೆ, ಹೋಮ-ಹವನಗಳಲ್ಲಿ ಹಲಸಿನ ಎಲೆ ಮತ್ತು ಮರದ ತುಂಡು (ಚೆಕ್ಕೆ)ಗಳನ್ನು ಉಪಯೋಗಿಸುತ್ತಾರೆ. ಹಲಸಿನಲ್ಲಿ ತುಳುವ, ಬರಿಕ ಮಾತ್ರವಲ್ಲದೆ ಸಿಂಗಾಪುರ ಹಲಸು, ಚಂದ್ರ ಹಲಸು, ರುದ್ರಾಕ್ಷಿ, ಜಾಣಗೆರೆ, ಲಾಲ್‌ಬಾಗ್, ಮಟ್ಟಂ, ಮಧುರ, ವಿಶು ಹಲಸು ಮೊದಲಾದ ಸುಮಾರು ಮೂವತ್ತು ಬಗೆಯ ತಳಿಗಳಿವೆ. ಕಸಿ ಮಾಡಿದ ಉತ್ತಮ ಜಾತಿಯ ಗಿಡಗಳು ಬೇಗನೆ ಫಲಕೊಡುತ್ತವೆ. ಈಗ ಮೇಣವಿಲ್ಲದ (ಗಮ್‌ಲೆಸ್) ಹಲಸಿನ ಹಣ್ಣು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಜಂಕ್‌ಫುಡ್, ಫಾಸ್ಟ್‌ಫುಡ್ ಸೇವನೆಯ ಚಟ ಬೆಳೆಸಿಕೊಂಡ ನಗರವಾಸಿಗಳಿಗೂ ಈಗ ಹಲಸಿನ ವಿವಿಧ ಬಗೆಯ ಖಾದ್ಯಗಳ ಪರಿಚಯವಾಗುತ್ತಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಾವಯವ ಉತ್ಪಾದಕರ ಬಳಗ ಮತ್ತಿತರ ಸಂಘಟನೆಗಳು ಪ್ರತೀ ವರ್ಷ ಆಚರಿಸುವ ಆಟಿದ ಕೂಟಗಳಲ್ಲಿ ಮಹಿಳೆ ಯರು ಉತ್ಸಾಹದಿಂದ ಪಾಲ್ಗೊಂಡು ಹಲಸಿನ ಹಲವು ತಿಂಡಿ-ತಿನಿಸುಗಳನ್ನು ಮಾಡಿ ಬಡಿಸುತ್ತಾರೆ. ಇದೀಗ ಕರಾವಳಿಯ ಉಭಯ ಜಿಲ್ಲೆಗಳ ಅಲ್ಲಲ್ಲಿ ಹಲಸಿನ ಹಬ್ಬಗಳನ್ನು ನಿರಂತರವಾಗಿ ನಡೆಸುವುದರ ಮೂಲಕ ಹಲಸಿನ ಹಣ್ಣಿನ ವಿರಾಟ್ ದರ್ಶನವನ್ನು ಮಾಡಿಸಲಾಗುತ್ತಿದೆ. ಜನರಿಗೆ ಹಲಸಿನ ವಿವಿಧ ರೀತಿಯ ಖಾದ್ಯಗಳನ್ನೂ ಇಲ್ಲಿ ಪರಿ ಚಯಿಸ ಲಾಗುತ್ತಿದೆ. ವಿಶೇಷ ತಳಿಗಳನ್ನು ಕೂಡ ಕೆಲವು ಕಡೆ ವಿತರಿಸಲಾಗುತ್ತಿದೆ. ಮತ್ತೂಂದೆಡೆ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯಗಳೂ ಈ ದಿಸೆಯಲ್ಲಿ ಗಂಭೀರ ಸಂಶೋಧನೆ ನಡೆಸಿವೆ.
ಹಲಸಿನಿಂದ ಜ್ಯೂಸ್, ಬರ್ಗರ್, ವೈನ್, ಜಾಮ್, ಫೇಡಾ, ಚಾಕಲೇಟ್, ಕರಿ ಕಡುಬು, ಹೋಳಿಗೆ, ಚಕ್ಕುಲಿ, ಅಪ್ಪ, ಪಕೋಡ, ಕ್ಯಾಂಡಿ, ಗುಜ್ಜೆ ಉಪ್ಪಿನಕಾಯಿ, ಕರಿದ ಬೀಜ, ಮಸಾಲೆ, ಐಸ್‌ಕ್ರೀಂ, ಪೌಡರ್, ಸ್ಕ್ವಾಶ್ ಇತ್ಯಾದಿ ಆಧುನಿಕ ಉತ್ಪನಗಳು ಸಾಧ್ಯ ಎಂಬುದು ಹಲಸಿನ ಮೇಳಗಳಿಂದ ಸಾಬೀತಾಗಿದೆ. ಮಾಲ್‌ಗಳಲ್ಲಿ ಮಾರಾಟವಾಗಲು ಆರಂಭವಾದ ಬಳಿಕ ಹಲಸಿಗೀಗ ರಾಜಯೋಗ ಪ್ರಾಪ್ತವಾಗಿದೆ.
ಅಮೆರಿಕ ಒಂದರಲ್ಲೇ ಸುಮಾರು 25 ಟನ್ ಹಲಸಿಗೆ ಬೇಡಿಕೆಯಿದೆ ಎಂದ ಬಳಿಕ ಬೇರೆ ಬೇರೆ ದೇಶಗಳಲ್ಲಿ ಬೇಡಿಕೆಗೆ ತಕ್ಕಂತೆ ರಫ್ತು ಮಾಡುವ ವಿಪುಲ ಅವಕಾಶ ಹಲಸು ಬೆಳೆಗಾರರ ಮುಂದಿದೆ ಎನ್ನ ಬಹುದು. ನಮ್ಮ ಕೃಷಿಕರು ಇದನ್ನು ಮನಗಾಣಬೇಕು. ಸರಕಾರ ಹಲಸಿಗೆ ತೋಟಗಾರಿಕಾ ಬೆಳೆಯ ಮಾನ್ಯತೆ ನೀಡಬೇಕು.
-ಭಾಸ್ಕರ ರೈ, ಕುಕ್ಕುವಳ್ಳಿ