ಅತ್ತೆ ಮಾಡಿಕೊಟ್ಟ ಕಷಾಯದ ಪ್ರಭಾವದಿಂದ ಎರಡೇ ದಿನಕ್ಕೆ ಶೀತ ಕಡಿಮೆಯಾಯಿತು. ಆದರೂ ಆ ಒಂದು ವಾರ ಮನೆಯಲ್ಲಿ ಎಲ್ಲರೂ ಕೋವಿಡ್ ಅಂತ ಕನವರಿಸಿ, ಬೆಚ್ಚಿ ಬಿದ್ದದ್ದು ಸುಳ್ಳಲ್ಲ.
ಮೂಗಿದ್ದವರಿಗೆ ನೆಗಡಿ ಆಗುವುದು ಸಹಜ ಎಂಬ ಮಾತಿದೆ. ಆದರೆ, ಕೋವಿಡ್ ಕಾಲದಲ್ಲಿ ನೆಗಡಿ ಆದರೆ ಕಷ್ಟವೋ ಕಷ್ಟ. ಒಂದು ಸೀನು, ಕೆಮ್ಮು ಬಂದರೂ, ಸುತ್ತ ಇದ್ದವರು ಬೆಚ್ಚಿ ಬೀಳುತ್ತಾರೆ. ಇದು ನನಗಾದ ಸ್ವಂತ ಅನುಭವ. ದೇಶಾದ್ಯಂತ ಲಾಕ್‌ಡೌನ್ ಆದಾಗ, ನಾವು ಬೆಂಗಳೂರಿನಲ್ಲೇ ಇದ್ದೆವು. ಆದರೆ, ಯಾವಾಗ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಹೋಯ್ತೋ, ಊರಿಗೆ ಹೋಗುವ ತುಡಿತವೂ ಹೆಚ್ಚಾಯ್ತು. ಕಳೆದ ತಿಂಗಳ ಪ್ರಾರಂಭದಲ್ಲಿ ಊರಿಗೆ ಬಂದುಬಿಟ್ಟೆವು. ಬೆಂಗಳೂರಿನಿಂದ ಬಂದ ನಮ್ಮ ಬಗ್ಗೆ ಎಲ್ಲರಿಗೂ ಸಣ್ಣ ಆತಂಕ ಇದ್ದೇ ಇತ್ತು. ನಾವೂ ಮನೆಯೊಳಗೇ ಕ್ವಾರಂಟೈನ್ ಆದೆವು.
ಆದರೆ, ಮೂರ್ನಾಲ್ಕು ದಿನದಲ್ಲಿ ನಾನು ಹುಷಾರು ತಪ್ಪಿದೆ. ಶೀತ-ಜ್ವರ ಶುರು ವಾಯ್ತು. ಕೋವಿಡ್ ಅಲ್ಲ ಅಂತ ಎಷ್ಟೇ ಖಾತ್ರಿಯಿದ್ದರೂ, ಎದೆಯೊ ಳಗೆ ಸಣ್ಣ ನಡುಕ ಹುಟ್ಟಿದ್ದು ಮಾತ್ರ ನಿಜ. ಮನೆಯಲ್ಲಿ ಎಲ್ಲರಿಗೂ ಒಳಗೊಳಗೇ ಭಯ. ಆದರೂ ಬಾಯಿ ಬಿಟ್ಟು ಹೇಳಿಕೊಳ್ಳುವಂತಿಲ್ಲ. ಆದದ್ದು ಇಷ್ಟೇ; ನಾವು ಊರಿಗೆ ಬರುವಾಗ ಮಳೆಯೂ ಜೋರಾಗಿತ್ತು. ಸೀಸನ್‌ನ ಕೊನೆಯ ಹಲಸಿನ ಹಣ್ಣನ್ನು ಮಾವ ನನಗಾಗಿ ಕೊಯ್ದು ತಂದರು. ಆ ಹಣ್ಣು ನೀರು ಕುಡಿದು ಸಪ್ಪೆಯಾಗಿತ್ತು. ಅಂಥ ಹಣ್ಣು ತಿಂದರೆ ಶೀತ-ನೆಗಡಿ ಆಗೋದು ಗ್ಯಾರಂಟಿ. ಆದರೆ, ಹಲಸಿನ ಮೋಹದಿಂದ ತಪ್ಪಿಸಿಕೊಳ್ಳುವುದು ನನಗೆ ಕಷ್ಟ. ಅದರಲ್ಲೂ ಈ ವರ್ಷ ಹಲಸಿನ ಹಣ್ಣನ್ನೇ ತಿಂದಿರದ ನಾನು ಇದೇ ಕೊನೆಯ ಚಾಯ್ಸ್ ಅಂತ ಅರ್ಧ ಹಣ್ಣನ್ನು ಗುಳುಂ ಮಾಡಿಬಿಟ್ಟೆ. ಐಸ್‌ಕ್ರೀಮ್ ನೋಡಿದರೂ ನೆಗಡಿ ಅನ್ನುವ ಯಜಮಾನರು, “ನಂಗೆ ಬೇಡ’ ಅಂತ ದೂರ ಸರಿದರು. “ನಂದು ಉಷ್ಣ ದೇಹ, ನಂಗೇನಾಗಲ್ಲ’ ಅನ್ನೋ ಮೊಂಡು ಧೈರ್ಯ ನನಗೆ. ಆದರೆ, ಯಾಕೋ ಏನೋ ಮರು ದಿನವೇ ಮೂಗು ಉರಿ, ಗಂಟಲು ಕೆರೆತ, ಸಣ್ಣದಾಗಿ ಜ್ವರ ಶುರುವಾಯ್ತು. ಮೊದಲು ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಮೈ ಬಿಸಿ ಏರಿ ಎಲ್ಲರಿಗೂ ವಿಷಯ ಗೊತ್ತಾಗಿ, ಗಾಬರಿ ಶುರುವಾಯಿತು.
“ತಿನ್ಬೇಡ ಅಂದ್ರೆ ಕೇಳ್ಳೋ ದಿಲ್ಲ, ನೀರು ಕುಡಿದ ಹಲಸಿನ ಹಣ್ಣಿನಿಂದಲೇ ಜ್ವರ ಬಂದಿದೆ’ ಅಂತ ಯಜಮಾನರು ಗುರ್ರ ಅಂದರು. ಇರಬಹುದೇನೋ ಅನ್ನಿಸಿತು. ಅದರ ಮರುದಿನ ಕೆಮ್ಮು, ಸೀನು, ಗಂಟಲು ನೋವು! ನನ್ನೊಡನೆಯೇ ಇದ್ದ ಯಜಮಾನರು, ಮಕ್ಕಳೂ ನನ್ನಿಂದ ದೂರ ಸರಿದರು. ಆದರೆ ಅವರಲ್ಲಿ ಯಾವ ಲಕ್ಷಣವೂ ಕಾಣಿಸದೇ ಇದ್ದುದರಿಂದ ಕೋವಿಡ್ ಅಲ್ಲ ಎಂಬ ಧೈರ್ಯ… ಇಂಥ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಲೂ ಭಯ. ಹಾಗಾಗಿ, ವೈದ್ಯೆಯಾಗಿರುವ ಚಿಕ್ಕಪ್ಪನ ಮಗಳಿಗೆ ವಿಷಯ ತಿಳಿಸಿದೆ. ನಾನು ಮತ್ತು ಮನೆಯವರು ಬೆಂಗಳೂರಿನಲ್ಲಿ ಇರುವಾಗ ಎಲ್ಲೆಲ್ಲಿ ಓಡಾಡಿದ್ದಿರಿ, ಮನೆಗೆ ಹೇಗೆ ಬಂದಿರಿ ಅಂತೆಲ್ಲಾ ವಿಚಾರಿಸಿ, ಇದು ಕೋವಿಡ್ ಆಗಿರುವ ಸಾಧ್ಯತೆ ತೀರಾ ಕಡಿಮೆ ಇದೆ ಅಂತಲೂ, ಇನ್ನೆರಡು ದಿನ ನೋಡಿ ಜ್ವರ ಇಳಿಯದಿದ್ದರೆ, ಉಸಿರಾಟದ ತೊಂದರೆ ಶುರುವಾದರೆ ಪರೀಕ್ಷಿಸಿದರೆ ಸಾಕೆಂದೂ ಆಕೆ ಧೈರ್ಯ ಹೇಳಿದಳು. ಜ್ವರ ಬಿಟ್ಟರೂ, ಸ್ವಲ್ಪ ದಿನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅಂತ ಕಟ್ಟಪ್ಪಣೆ ಮಾಡಿದಳು. ಪುಣ್ಯಕ್ಕೆ, ಅವಳು ಹೇಳಿದಂತೆ ನನಗೆ ಬಂದಿದ್ದು ಸಾಮಾನ್ಯ ಶೀತವಾಗಿತ್ತು. ಅತ್ತೆಯ ಕಷಾಯದ ಪ್ರಭಾವದಿಂದ ಎರಡೇ ದಿನಕ್ಕೆಶೀತ ಕಡಿಮೆಯಾಯಿತು. ಆದರೂ ಆ ಒಂದು ವಾರ ಮನೆಯಲ್ಲಿ ಎಲ್ಲರೂ ಕೋವಿಡ್ ಅಂತ ಕನವರಿಸಿ, ಬೆಚ್ಚಿ ಬಿದ್ದದ್ದು ಸುಳ್ಳಲ್ಲ
– ಮಲ್ಲಿಕ ಜಿ.ಎಸ್.