Advertisement

ಜಕಣಾಚಾರಿಯ ಕೊನೆ ದೇವಾಲಯ ಕೈದಾಳ ಚನ್ನಕೇಶವ

01:21 PM Apr 14, 2020 | |

ತುಮಕೂರು ಪಟ್ಟಣದ ಹತ್ತಿರ ಇರುವ ಕೈದಾಳ ಒಂದು ಪುಣ್ಯಕ್ಷೇತ್ರ.   ಹಿಂದೆ  ಈ ಕೈದಾಳ  ಗ್ರಾಮವನ್ನು  ಕಿರದೀಕಾಪುರ, ಕಿರಿದಾನಗರಿ ಎಂಬ  ಹೆಸರಿನಿಂದ  ಕರೆಯಲಾಗುತ್ತಿತ್ತು.   ಸುಮಾರು ಕ್ರಿ.ಶ. 1150ರಲ್ಲಿ  ದ್ರಾವಿಡ ಹಾಗೂ ಹೊಯ್ಸಳ  ಶೈಲಿಯಲ್ಲಿ   ನಿರ್ಮಾಣವಾದ   ಇಲ್ಲಿನ ಚನ್ನಕೇಶವ ದೇವಸ್ಥಾನ, ಉತ್ಕೃಷ್ಟಮಟ್ಟದ   ಕಲಾ ವೈಭವವನ್ನು  ಹೊಂದಿರುವ  ವಿಶೇಷ ದೇವಸ್ಥಾನವೆಂದೇ ಹೇಳಬಹುದು.  ಕಾರಣ ಕೈದಾಳದಲ್ಲಿರುವ ಈ ಚನ್ನಕೇಶವ  ದೇವಸ್ಥಾನ ಅಮರಶಿಲ್ಪಿ  ಜಕಣಾಚಾರಿ ನಿರ್ಮಿಸಿದ  ಕೊನೆಯ ದೇವಾಲಯ ಕೂಡ ಆಗಿದೆ.

Advertisement

ಈ  ಚನ್ನಕೇಶವ  ದೇವಸ್ಥಾನದ  ಇತಿಹಾಸ ಕೂಡ  ಅಷ್ಟೇ  ಮಹತ್ವ ಪಡೆದಿದೆ.   ಈ ಸ್ಥಳದಲ್ಲಿಯೇ  ಜಕಣಾಚಾರಿ  ತನ್ನ  ಬಲಗೈಯನ್ನು  ಮರಳಿ ಪಡೆದನೆಂಬ  ಐತಿಹ್ಯವಿದೆ.   ಇಲ್ಲಿನ  ಒಂದು  ದಂತಕಥೆಯ ಪ್ರಕಾರ  ಅಮರಶಿಲ್ಪಿ  ಜಕಣಾಚಾರಿ  ತುಂಬಾ ಚಿಕ್ಕವಯಸ್ಸಿನಲ್ಲಿಯೇ  ತಮ್ಮ  ಕಲೆಯನ್ನು  ಬೆಳೆಸುವುದಕ್ಕೋಸ್ಕರ  ಇತರ  ಶಿಲ್ಪಿಗಳ ಜೊತೆಗೂಡಿ ತಮ್ಮ  ಹೆಂಡತಿ,  ಮನೆ, ಊರು ಎಲ್ಲವನ್ನೂ  ತೊರೆದು  ಬೇಲೂರು, ಹಳೇಬೀಡು ಪಟ್ಟಣಕ್ಕೆ ಬಂದರು.

ಇಂಥ ಮಹಾನ್‌ ದೇವಾಲಯವನ್ನು   ನಿರ್ಮಿಸುತ್ತಿದ್ದರಂತೆ. ಹೀಗಿರುವಾಗ ಒಮ್ಮೆ  ಹೊಯ್ಸಳ ರಾಜರು ನಿರ್ಮಿಸಲು ಹೇಳಿದ್ದ  ಚನ್ನಕೇಶವ ದೇವಸ್ಥಾನದ ನಿರ್ಮಾಣವನ್ನು  ಕೈಗೆತ್ತಿಕೊಳ್ಳುತ್ತಾನೆ.  ಅವನು  ಊರಲ್ಲಿ  ಬಿಟ್ಟು  ಬಂದಿದ್ದ ಅವನ ಮಗ  ಈಗ ದೊಡ್ಡವನಾಗಿ, ಅವನೂ ಕೂಡ ತಂದೆಯಂತೆ  ಶಿಲ್ಪಕಲೆಗಳ ಗೀಳು  ಹಚ್ಚಿಕೊಂಡು  ತಂದೆಯನ್ನು   ಅರಸುತ್ತಾ  ಬೇಲೂರಿಗೆ ಬರುತ್ತಾನೆ.
ಜಕಣಾಚಾರಿ ನಿರ್ಮಿಸಿದ   ಅತ್ಯಂತ  ಅದ್ಭುತವಾದ  ಚನ್ನಕೇಶವ  ದೇವಸ್ಥಾನ ಮುಗಿಯುವ ಹಂತಕ್ಕೆ  ಬಂದಿರುತ್ತದೆ.  ಇನ್ನು  ಬರೀ ಚನ್ನಕೇಶವನ  ಗ್ರಹ   ಪ್ರತಿಷ್ಠಾಪನೆ ಮಾತ್ರ  ಬಾಕಿ ಇರುವಾಗ  ಜಕಣಾಚಾರಿಯ ಮಗ ಡಕಣಾಚಾರಿ ದೇವಸ್ಥಾನದ ಕಾರ್ಯ ನಡೆಯುತ್ತಿದ್ದ ಜಾಗಕ್ಕೆ ಬಂದನಂತೆ. ಆಮೇಲೆ ಎಲ್ಲವನ್ನೂ  ಕೂಲಂಕಶವಾಗಿ ಪರೀಕ್ಷಿಸುತ್ತಾ  ಈ ಚನ್ನಕೇಶವನ ವಿಗ್ರಹವನ್ನು  ನೋಡಿ  ಇದರಲ್ಲಿ   ಒಂದು ನ್ಯೂನತೆ ಇದೆ. ಇದು ಪೂಜಿಸಲು ಯೋಗ್ಯವಾಗಿಲ್ಲ ಎಂದು  ಹೇಳಿಬಿಟ್ಟನಂತೆ.

ಇದರಿಂದ ಕುಪಿತನಾದ  ಜಕಣಾಚಾರಿ   ಈ ವಿಗ್ರಹದಲ್ಲಿ  ಏನಾದರೂ ನ್ಯೂನತೆ ಇದ್ದರೆ ತನ್ನ   ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ  ಪ್ರಮಾಣ ಮಾಡುತ್ತಾನೆ.   ನಂತರ  ಎಲ್ಲರೂ ಸೇರಿ  ಈ  ವಿಗ್ರಹವನ್ನು  ಪರೀಕ್ಷೆ ಮಾಡಲು ಒಪ್ಪಿಕೊಂಡು,  ವಿಗ್ರಹಕ್ಕೆ  ಸಂಪೂರ್ಣವಾಗಿ  ಚಂದನದ  ಲೇಪನವನ್ನು   ಹಚ್ಚುತ್ತಾರೆ.  ಚಂದನ  ಒಣಗಿ ವಿಗ್ರಹದ  ಹೊಕ್ಕಳು ಭಾಗ ಮಾತ್ರ  ಹಸಿಯಾಗಿ ಉಳಿಯುತ್ತದೆ.  ಆಗ  ಅದರೊಳಗೆ  ಏನಿರಬಹುದೆಂದು  ಪರೀಕ್ಷಿಸಲು,  ಅಲ್ಲಿ  ಒಂದು ಜೀವಂತ ಕಪ್ಪೆ  ಕುಳಿತಿರುತ್ತದೆ.  ಆಗ ಜಕಣಾಚಾರಿ  ತಾನು ಪ್ರಮಾಣ ಮಾಡಿದಂತೆ ತನ್ನ  ಬಲಗೈಯನ್ನು  ಕತ್ತರಿಸಿಕೊಳ್ಳುತ್ತಾನೆ.  ಅಂದಿನಿಂದ  ಈ  ವಿಗ್ರಹ  ಕಪ್ಪೇಚನ್ನಿಗರಾಯ  ಎಂಬ ಹೆಸರಿನಿಂದ ಖ್ಯಾತಿಪಡೆಯಿತು ಎನ್ನುತ್ತದೆ ಇತಿಹಾಸ.

Advertisement

ನಂತರ   ಜಕಣಾಚಾರಿಗೆ,  ಡಕಣಾಚಾರಿಯೇ ತನ್ನ  ಮಗನೆಂದು ಗೊತ್ತಾಗುತ್ತದೆ.  ನಂತರದ ದಿನದಲ್ಲಿ  ಜಕಣಾಚಾರಿ ಮತ್ತೆ  ಚನ್ನಕೇಶವನ  ವಿಗ್ರಹವನ್ನು  ನಿರ್ಮಿಸುತ್ತಾನೆ.   ಆಗ ಅವನು ಕತ್ತರಿಸಿಕೊಂಡಿದ್ದ  ಬಲಗೈ  ಮತ್ತೆ ಮರಳಿ ಪಡೆದನು ಎಂಬ ಐತಿಹ್ಯವಿದೆ.   ಸುಮಾರು ಐದುವರೆ ಅಡಿ ಎತ್ತರದ,  ಕಪ್ಪು  ಕಲ್ಲಿನಿಂದ  ನಿರ್ಮಾಣಮಾಡಲಾದ  ಚನ್ನಕೇಶವನ  ವಿಗ್ರಹ  ಎಂಥವರನ್ನೂ  ಸೂಜಿಗಲ್ಲಿನಂತೆ  ಸೆಳೆಯುತ್ತದೆ. ಅಷ್ಟೊಂದು  ಅದ್ಭುತವಾದ  ಸುಂದರ  ಕಲಾಕೃತಿ ಇದಾಗಿದ್ದು,  ಇದು ಜಕಣಾಚಾರಿ ನಿರ್ಮಾಣದ ಕೊನೆಯ  ದೇವಸ್ಥಾನವಾಗಿದೆ.

ಬೆಂಗಳೂರಿನಿಂದ  ಸುಮಾರು 71 ಕಿ.ಮೀ ಅಂತರದಲ್ಲಿರುವ  ತುಮಕೂರಿಗೆ  ಸಾಕಷ್ಟು  ಬಸ್‌, ರೈಲುಗಳ ವ್ಯವಸ್ಥೆ ಇದೆ.   ಇಲ್ಲಿಂದ ಕೇವಲ 10 ರಿಂದ 15 ನಿಮಿಷಗಳಲ್ಲಿ  ಚನ್ನಕೇಶವ ದೇವಸ್ಥಾನ ತಲುಪಬಹುದು.

 ಆಶಾ ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next