Advertisement
ಕೇಂದ್ರ ಸರ್ಕಾರದ ಉನ್ನತ ಭಾರತ ಅಭಿಯಾನ 2.0 ಅಡಿಯಲ್ಲಿ ರಾಜ್ಯದ ಎರಡು ಕಾಲೇಜುಗಳನ್ನು ಆಯ್ಕೆ ಮಾಡಲಾಗಿದ್ದು, ಎರಡೂ ಉತ್ತರ ಕರ್ನಾಟಕದ ಕಾಲೇಜುಗಳು ಎಂಬುದು ಹೆಮ್ಮೆಯ ವಿಷಯ. ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಪಿ.ಸಿ.ಜಾಬಿನ್ ಕಾಲೇಜು ಹಾಗೂ ಬಾಗಲಕೋಟೆ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಅಭಿಯಾನಕ್ಕೆ ಆಯ್ಕೆಯಾಗಿವೆ. ಪಿ.ಸಿ.ಜಾಬಿನ್ ಕಾಲೇಜು ಐದು ಗ್ರಾಮಗಳನ್ನು ದತ್ತು ಪಡೆದು ಹಲವು ಜಾಗೃತಿ, ಅಭಿವೃದ್ಧಿಗೆ ಪೂರಕ ಕಾರ್ಯಗಳನ್ನು ಈಗಾಗಲೇ ಕೈಗೊಂಡಿದೆ.
Related Articles
Advertisement
ಐದು ಗ್ರಾಮಗಳಿಗೆ ಪ್ರತ್ಯೇಕವಾಗಿ ಇಬ್ಬರು ಉಪನ್ಯಾಸಕರ ನೇತೃತ್ವದಲ್ಲಿ ತಲಾ 25 ವಿದ್ಯಾರ್ಥಿಗಳ ತಂಡವನ್ನು ರೂಪಿಸಲಾಗಿದ್ದು, ಆಯಾ ತಂಡಗಳು ನಿಗದಿಪಡಿಸುವ ಗ್ರಾಮಗಳಿಗೆ ಕನಿಷ್ಟ ತಿಂಗಳಿಗೊಮ್ಮೆಯಾದರೂ ತೆರಳಿ ಅಲ್ಲಿನ ಜನರೊಂದಿಗೆ ಬೆರೆಯುವ, ಅವರ ಸಮಸ್ಯೆಗಳನ್ನು ಆಲಿಸುವ, ಜಾಗೃತಿ ಮೂಡಿಸುವ, ಸೌಲಭ್ಯಗಳ ಪಡೆಯುವ ನಿಟ್ಟಿನಲ್ಲಿ ಅಗತ್ಯ ಸಹಕಾರ ತೋರುವ ಕಾರ್ಯ ಮಾಡುತ್ತಿದ್ದಾರೆ.
ಜಲ ಸಂರಕ್ಷಣೆ- ಸಂವರ್ಧನೆಗೆ ಆದ್ಯತೆ: ಐದು ಗ್ರಾಮಗಳಲ್ಲಿ ಪರಸರ ಸಂರಕ್ಷಣೆ ನಿಟ್ಟಿನಲ್ಲಿ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗಿದ್ದು, ಟೀಕ್, ಬೇವು, ಸಿಲ್ವರ್ ಓಕ್, ವಿವಿಧ ಔಷಧಿ ಗುಣಗಳ ಗಿಡಗಳನ್ನು ನಡೆಲಾಗಿದೆ. ಸರ್ಕಾರಿ ಶಾಲೆ ಆವರಣದಲ್ಲಿ ಹಾಗೂ ರೈತರ ಹೊಲಗಳಲ್ಲಿಯೂ ಗಿಡಗಳನ್ನು ನೆಡಲಾಗಿದ್ದು, ಸ್ಥಳೀಯ ಒಬ್ಬ ವಿದ್ಯಾರ್ಥಿಗಳಿಗೆ ಒಂದು ಗಿಡದ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಜತೆಗೆ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ಅಭಿಯಾನ ಕೈಗೊಳ್ಳಲಾಗಿದೆ. ಜಲಶಕ್ತಿ ಅಭಿಯಾನದಡಿ ಜಲ ಸಂರಕ್ಷಣೆ, ಸಂವರ್ಧನೆ ಹಾಗೂ ನಿರ್ವಹಣೆ ಕುರಿತಾಗಿ ಜಾಗೃತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಜಲ ಸಂರಕ್ಷಣೆಯಲ್ಲಿ ಜನರ ಪಾಲ್ಗೊಳ್ಳುವಿಕೆ, ಜಲ ಬಜೆಟ್ ತಯಾರು, ನೀರು ಬಳಕೆ ನಿರ್ವಹಣೆ, ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಇತರೆ ಜಲ ಮೂಲಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ರ್ಯಾಲಿಗಳನ್ನು ಕೈಗೊಳ್ಳಲಾಗಿದ್ದು, ಜನರಿಗೆ ಮಳೆ ನೀರು ಕೊಯ್ಲು ಅಳವಡಿಕೆಗೆ ಪ್ರೇರಣೆ ನೀಡುವ ಕಾರ್ಯ ಮಾಡಲಾಗುತ್ತಿದೆ.
ಉನ್ನತ ಭಾರತ ಅಭಿಯಾನದಡಿ ನಮ್ಮ ಕಾಲೇಜು ಐದು ಗ್ರಾಮಗಳನ್ನು ದತ್ತು ಪಡೆದು ವಿವಿಧ ಜಾಗೃತಿ, ಅಭಿವೃದ್ಧಿ ಪೂರಕ ಕಾರ್ಯಗಳಿಗೆ ಮುಂದಾಗಿದ್ದು, ಗ್ರಾಮದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಐದು ಗ್ರಾಮಗಳಲ್ಲಿನ ಸುಮಾರು 24 ನಿವೃತ್ತ ಸೈನಿಕರನ್ನು ಆಹ್ವಾನಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಸನ್ಮಾನ ಮಾಡಿದ್ದೇವೆ. ಗ್ರಾಮೀಣ ಜನರ ಹಲವು ಸಮಸ್ಯೆಗಳಿಗೆ ಸ್ಪಂದಿಸುವ, ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರೆದಿದೆ. -ಡಾ| ಎಸ್.ವಿ.ಹಿರೇಮಠ, ಪ್ರಾಂಶುಪಾಲ, ಪಿ.ಸಿ.ಜಾಬಿನ್ ಕಾಲೇಜು
-ಅಮರೇಗೌಡ ಗೋನವಾರ