ನವದೆಹಲಿ:ಪ್ರಕೃತಿಯಲ್ಲಿ ಮನುಷ್ಯ ಮತ್ತು ಪ್ರಾಣಿಗಳು ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿಯೂ ಒಡಿಶಾದ ಜೈಪುರ್ ನಗರದಲ್ಲಿ ವಿಷಕಾರಿ ಹಾವಿನ ವಿರುದ್ಧವೇ ಪ್ರತೀಕಾರ ತೀರಿಸಿಕೊಂಡ ಕುತೂಹಲಕಾರಿ ಘಟನೆಯೊಂದು ವರದಿಯಾಗಿದೆ. ವ್ಯಕ್ತಿಯೊಬ್ಬನಿಗೆ ವಿಷಕಾರಿ ಹಾವೊಂದು ಕಚ್ಚಿದ್ದು, ಕೂಡಲೇ ಆತನೂ ಹಾವನ್ನು ಹಲವಾರು ಬಾರಿ ಕಚ್ಚಿ ಕೊಂದು ಹಾಕಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಒಂದು ಶತಕ- ಹಲವು ದಾಖಲೆಗಳು: ಹಲವು ದಾಖಲೆ ಬರೆದ ಕೆ.ಎಲ್.ರಾಹುಲ್
ಹಾವನ್ನು ಕಚ್ಚಿ ಕೊಂದು ಹಾಕಿರುವ ವ್ಯಕ್ತಿಯನ್ನು ಒಡಿಶಾ ಜೈಪುರ್ ಜಿಲ್ಲೆಯ ಗಂಭಾರಿಪಾಟಿಯಾ ಗ್ರಾಮದ 45 ವರ್ಷದ ಬುಡಕಟ್ಟು ಜನಾಂಗದ ವ್ಯಕ್ತಿ ಕಿಶೋರ್ ಬದ್ರಾ ಎಂದು ಗುರುತಿಸಲಾಗಿದೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.
ಕಿಶೋರ್ ಹೇಳಿಕೆಯ ಪ್ರಕಾರ, ತನ್ನ ಗದ್ದೆಯಲ್ಲಿ ಕೆಲಸ ಪೂರೈಸಿದ ನಂತರ ಬುಧವಾರ (ಆಗಸ್ಟ್ 11) ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿದ್ದು, ಕೂಡಲೇ ನಾನು ಹಾವನ್ನು ಹಿಡಿದು ವಾಪಸ್ ಕಚ್ಚಿ ಪ್ರತೀಕಾರ ತೀರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ರಾತ್ರಿ ನಾನು ಗದ್ದೆಯ ಕೆಲಸ ಪೂರೈಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾಲಿಗೆ ಏನೋ ಕಚ್ಚಿದಂತಾಯಿತು. ಆಗ ನಾನು ನನ್ನ ಟಾರ್ಜ್ ನಿಂದ ಬೆಳಕು ಹಾಕಿ ನೋಡಿದಾಗ ವಿಷಕಾರಿ ಹಾವು ಕಂಡುಬಂದಿದ್ದು, ಕೂಡಲೇ ಅದನ್ನು ಹಿಡಿದು ಹಲವಾರು ಬಾರಿ ಕಚ್ಚಿಬಿಟ್ಟಿದ್ದೆ. ಇದರ ಪರಿಣಾಮ ಹಾವು ಸತ್ತು ಹೋಗಿರುವುದಾಗಿ ಬದ್ರಾ ತಿಳಿಸಿರುವುದಾಗಿ ಪಿಟಿಐ ಹೇಳಿದೆ.
ಘಟನೆಯ ನಂತರ ಸತ್ತು ಹೋದ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ಬಂದು ಪತ್ನಿಗೆ ನಡೆದ ವಿಷಯವನ್ನು ತಿಳಿಸಿರುವುದಾಗಿ ವಿವರಿಸಿದ್ದಾನೆ. ಬದ್ರಾ ಸಾಂಪ್ರದಾಯಿಕ ಗಿಡಮೂಲಿಕೆ ಔಷಧವನ್ನು ಮಾಡಿದ್ದು, ಬಳಿಕ ಕೆಲವರ ಸಲಹೆ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ. ಹಾವು ಕಚ್ಚಿದ ನಂತರ ನನಗೆ ಯಾವುದೇ ಅಸ್ವಸ್ಥತೆ ಕಾಣಿಸಿಕೊಂಡಿಲ್ಲ. ನಾನು ಸಾಂಪ್ರದಾಯಿಕ ಗಿಡಮೂಲಿಕೆ ಔಷಧವನ್ನು ತೆಗೆದುಕೊಂಡ ನಂತರ ಗುಣಮುಖನಾಗಿದ್ದೇನೆ ಎಂದು ಪಿಟಿಐಗೆ ತಿಳಿಸಿರುವುದಾಗಿ ವರದಿ ಹೇಳಿದೆ.