ನವದೆಹಲಿ: ಭಾರತೀಯ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥ ದಿ. ಜನರಲ್ ಬಿಪಿನ್ ರಾವತ್ ಅವರ ಸ್ಮರಣಾರ್ಥ ಎರಡು ಪ್ರಶಸ್ತಿಗಳನ್ನು ನೀಡುವುದಾಗಿ ಭಾರತೀಯ ನೌಕಾಪಡೆ ಘೋಷಿಸಿದೆ.
ಗುರುವಾರ ನಡೆದ ರಾವತ್ ಅವರ 65ನೇ ಜಯಂತಿ ಸಂದರ್ಭದಲ್ಲಿ ನೌಕಾಪಡೆ ಈ ಘೋಷಣೆ ಮಾಡಿದೆ. ಮಹಿಳಾ ಅಗ್ನಿವೀರರ ತರಬೇತಿಯಲ್ಲಿ ಒಟ್ಟಾರೆ ಮೆರಿಟ್‌ನಲ್ಲಿ ಮೊದಲ ಸ್ಥಾನ ಪಡೆದವರಿಗೆ “ಜ. ಬಿಪಿನ್ ರಾವತ್ ರೋಲಿಂಗ್ ಟ್ರೋಫಿ” ಪ್ರದಾನ ಮಾಡಲಾಗುತ್ತದೆ. ಈ ವರ್ಷದ ಟ್ರೋಫಿಯನ್ನು ಐಎನ್‌ಎಸ್ ಚಿಲ್ಕಾದ ಪ್ರಧಾನ ನಾವಿಕರ ತರಬೇತಿ ಕೇಂದ್ರದಲ್ಲಿ ಮಾ.28ರಂದು ನಡೆಯುವ ನಿರ್ಗಮನ ಪಥಸಂಚಲನದಲ್ಲಿ ಪ್ರದಾನ ಮಾಡಲಾಗುತ್ತದೆ.
ಅದೇ ರೀತಿ ಗೋವಾದ ನೌಕಾ ಯುದ್ಧ ಕಾಲೇಜ್(ಎನ್‌ಡಬ್ಲೂಸಿ)ನಲ್ಲಿ ನೌಕಾಪಡೆಯ ಉನ್ನತ ಕಮಾಂಡ್ ಕೋರ್ಸ್ ಪಡೆಯುವರ ಪೈಕಿ “ಅತ್ಯಂತ ಹುರುಪಿನ ಅಧಿಕಾರಿ”ಗೆ ಎರಡನೇ “ಜ.ಬಿಪಿನ್ ರಾವತ್ ರೋಲಿಂಗ್ ಟ್ರೋಫಿ”ಯನ್ನು ಪ್ರದಾನ ಮಾಡಲಾಗುತ್ತದೆ ಎಂದು ನೌಕಾಪಡೆ ತಿಳಿಸಿದೆ.
2021ರ ಡಿ.8ರಂದು ತಮಿಳುನಾಡಿನ ಕುನೂರು ಸಮೀಪ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ರಾವತ್, ಪತ್ನಿ ಮಧುಲಿಕಾ ರಾವತ್ ಹಾಗೂ ಇತರೆ 12 ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.