ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಕ್ಷೇತ್ರಗಳ ಸ್ವರೂಪದ ಬಗ್ಗೆ ವ್ಯಾಪಕ ಚರ್ಚೆಯಾಗಬೇಕಿದೆ. ಪ್ರಾದೇಶಿಕ ಅಸಮತೋಲನದ ಬಗ್ಗೆ ಪುನರ್ ಪರಿಶೀಲನೆಯಾಗಬೇಕಾದ ಅಗತ್ಯವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯ ಪಟ್ಟರು.
ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪಿತವಾದ ಹಿಂದುಳಿದ ತಾಲೂಕುಗಳ ಪೈಕಿ ಅನೇಕ ತಾಲೂಕಿನ ಚಹರೆ ಈಗ ಬದಲಾಗಿದೆ. ಹಲವು ಕಡೆ ನೀರಾವರಿಯಾಗಿದೆ, ಇನ್ನು ಕೆಲವೆಡೆ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಹೊಸ ತಾಲೂಕುಗಳು ರಚನೆಯಾಗಿವೆ. ಹೀಗಾಗಿ ಪ್ರಾದೇಶಿಕ ಅಸಮತೋಲನೆ, ಹಿಂದುಳಿದ ಪ್ರದೇಶದ ಪುನರ್ ಪರಿ
ಶೀಲನೆಯಾಗುವ ಅಗತ್ಯವಿದೆ ಎಂದು ಹೇಳಿದರು.
ಮೂಲಸೌಕರ್ಯ ಇಲಾಖೆ ಈಗಾಗಲೇ ಈ ಬಗ್ಗೆ ವರದಿ ಸಲ್ಲಿಸಿದೆ. ವಿಸ್ತೃತ ವರದಿ ನೀಡಲು ಸೂಚನೆ ನೀಡಲಾಗಿದೆ. ಮತ್ತೂಂದು ಸಮಿತಿ ರಚಿಸುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ಚಿತ್ತಾಪುರ ಮತ ಕ್ಷೇತ್ರಕ್ಕೆ ಗಿರಿಜನ ಉಪ ಯೋಜನೆಗಳಡಿ ಯಾವುದೇ ಹೊಸ ರಸ್ತೆ ಕಾಮಗಾರಿಗೆ ಮಂಜೂರಾತಿ ನೀಡಿಲ್ಲ ಎಂಬ ಸರಕಾರದ ಲಿಖೀತ ಉತ್ತರವನ್ನೇ ಪ್ರಸ್ತಾಪಿಸಿ, ನಮ್ಮದು ಮೀಸಲು ಕ್ಷೇತ್ರ. ಇಲ್ಲಿಗೆ ರಸ್ತೆ ಕಾಮಗಾರಿ ಮಂಜೂರಾತಿ ನೀಡದೇ ಇದ್ದರೆ ಹೇಗಾಗುತ್ತದೆ. ಸರಕಾರವನ್ನು ಕೇಳಿದರೆ 100 ಹಾಸ್ಟೆಲ್ ನಿರ್ಮಿಸುತ್ತೇವೆ ಎಂದು ಉತ್ತರಿಸುತ್ತಿದೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಈ ಸಂದರ್ಭ ಬೇಸರ ವ್ಯಕ್ತಪಡಿಸಿದರು.