ಕಾರ್ಕಳ: ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿಯ ಮಾಸಿಕ ಸಭೆ ಸಂಘದ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ಇವರ ಅಧ್ಯಕ್ಷತೆಯಲ್ಲಿ ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರು, ಭಾ.ಕಿ.ಸಂ. ಉಡುಪಿ ಜಿಲ್ಲೆ, ತೆಂಗು ಬೆಳೆಗಾರರ ಫೆಡರೇಶನ್ ಉಡುಪಿ ಜಿಲ್ಲೆ ಹಾಗೂ ಕಲ್ಪರಸ ಕಂಪೆನಿ ಸಹಯೋಗದಲ್ಲಿ ಜ. 12ರಂದು ಕುಂದಾಪುರದಲ್ಲಿ ನಡೆಯುವ ರಾಜ್ಯ ತೆಂಗು ಬೆಳೆಗಾರರ ಸಮಾವೇಶದ ಬಗ್ಗೆ ಭಾ.ಕಿ.ಸಂ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಅವರು ವಿಷಯ ಪ್ರಸ್ತಾವಿಸಿ, ಈ ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಕೃಷಿ ಮತ್ತು ತೋಟಗಾರಿಕಾ ಸಚಿವರು,
ಜಿಲ್ಲೆಯ ಉಸ್ತುವಾರಿ ಸಚಿವರು, ಉಡುಪಿ ಜಿಲ್ಲೆಯ ಎಲ್ಲ ಶಾಸಕರು ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕೃಷಿ ತೋಟಗಾರಿಕಾ ಇಲಾಖಾಧಿಕಾರಿಗಳು, ವಿಜ್ಞಾನಿಗಳು, ತೋಟಗಾರಿಕಾ ಬೆಳೆಗಳ ಸಂಶೋಧಕರು ಭಾಗವಹಿಸಲಿರುವರು.
ಈ ಸಮಾವೇಶದಲ್ಲಿ ತೆಂಗು ಬೆಳೆಗಾರರು ಅನುಭವಿಸುತ್ತಿರುವ ಕಷ್ಟ-ನಷ್ಟಗಳ ಬಗ್ಗೆ ಜನಪ್ರತಿನಿಧಿಗಳ ಮತ್ತು ಇಲಾಖಾಧಿಕಾರಿಗಳ ಗಮನ ಸೆಳೆಯುವಂತೆ ಹಕ್ಕೊತ್ತಾಯ ಮಾಡಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಶ್ರಮಿಸಲಾಗುವುದು ಎಂದರು. ತೆಂಗು ಉತ್ಪಾದಕರ ಸೊಸೈಟಿಗಳು ಆದಷ್ಟು ಬೇಗ ತೆಂಗು ಮಂಡಳಿಯೊಂದಿಗೆ ನೋಂದಾವಣೆ ನವೀಕರಿಸಿಕೊಂಡಲ್ಲಿ ಈ ವರ್ಷದಲ್ಲಿಯೇ ಅನುದಾನ ಪಡೆಯಲು ಅವಕಾಶವಿದೆ ಎಂದರು.
ಪ್ರತೀ 3 ವರ್ಷಗಳಿಗೊಮ್ಮೆ ನಡೆಯುವ ಜಿಲ್ಲಾ ಸಮ್ಮೇಳನವನ್ನು ಫೆ. 11ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಹೇಳಿದರು. ಜಿಲ್ಲೆಯ ರೈತರೆಲ್ಲರೂ ಒಂದೆಡೆ ಸೇರಿ ತಮ್ಮ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸುವ ಜತೆಗೆ ಕೃಷಿ ಕ್ಷೇತ್ರದ ಆಗುಹೋಗುಗಳ ಬಗ್ಗೆ ಪರಾಮರ್ಶಿಸಿ, ಸೂಕ್ತ ನಿರ್ಣಯಗಳನ್ನು ಮಾಡಿ ಸರಕಾರದ ಗಮನ ಸೆಳೆಯುತ್ತ ಬಂದಿದೆ ಎಂದರು.
ಕಾರ್ಕಳ, ಹೆಬ್ರಿ ತಾ|ನ ಎಲ್ಲ ಗ್ರಾಮದ ರೈತರನ್ನು, ಸಂಘ ಸಂಸ್ಥೆಗಳನ್ನು, ಸಹಕಾರ ಸಂಘಗಳನ್ನು ಮತ್ತು ದಾನಿಗಳನ್ನು ಸಂಪರ್ಕಿಸಿ ಸಮ್ಮೇಳನದ ಮನವಿ ಪತ್ರ ನೀಡಿ ಸಹಕಾರ ಅಪೇಕ್ಷಿಸಲು ವಲಯವಾರು ತಂಡಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಡಿಸಿ ಕಚೇರಿಯಲ್ಲಿ ಸಚಿವ ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರೈತರ ಕುಂದು ಕೊರತೆ ಸಭೆ ಉತ್ತಮ ಪರಿಣಾಮ ಬೀರುತ್ತಿದೆ. ಇಲಾಖಾಧಿಕಾರಿಗಳು ರೈತರ ಪರ ಬಹಳ ಮುತುವರ್ಜಿ ವಹಿಸುತ್ತಿವೆ.
ಅರಣ್ಯ, ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯಂತಹ ರೈತರಿಗೆ ಬಹು ಮುಖ್ಯ ವಾಗುವ ಇಲಾಖೆಗಳಿಂದ ಉತ್ತಮ ಸ್ಪಂದನೆ ದೊರಕುತ್ತಿದ್ದು ತತ್ ಕ್ಷಣದಲ್ಲಿ ಇಲಾಖಾವಾರು ಸಭೆಗಳನ್ನು ಸಂಘಟನೆ ಪ್ರತಿನಿಧಿಗಳೊಂದಿಗೆ ನಡೆಸಲು ಉತ್ಸುಕ ರಾಗಿರುವುದು ಉತ್ತಮ ಬೆಳವಣಿಗೆ ಎಂದು ಗೋವಿಂದ ರಾಜ್ ಭಟ್ ಕಡ್ತಲ ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ ಇರ್ವತ್ತೂರು ಮಾತನಾಡಿದರು. ಮೋಹನ್‌ದಾಸ ಅಡ್ಯಂತಾಯ, ಕೆ.ಪಿ.ಭಂಡಾರಿ ಕೆದಿಂಜೆ, ಅನಂತ್ ಭಟ್ ಇರ್ವತ್ತೂರು, ಶಿವಪ್ರಸಾದ್ ಭಟ್ ದುರ್ಗಾ, ಹರೀಶ್ ಕಲ್ಯಾ ಮತ್ತು ತಾಲೂಕು ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ನಿರ್ವಹಿಸಿದರು.