Advertisement

ಇವಿಎಂ ಹೋರಾಟಕ್ಕಾಗಿ ಮಡಿವಂತಿಕೆ ಬಿಡಲು ಸಿದ್ಧ: ಮಾಯಾವತಿ

03:50 AM Apr 15, 2017 | |

ಲಕ್ನೋ: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳಲ್ಲಿನ ದೋಷಗಳ ಬಗ್ಗೆ ಜನರಿಗೆ ಮನವರಿಕೆ ಮಾಡಲು ಮಡಿವಂತಿಕೆ ಬಿಟ್ಟು ಬಿಜೆಪಿಯೇತರ ಪಕ್ಷಗಳ ಜೊತೆ ಕೈಜೋಡಿಸಲು ಸಿದ್ಧ ಎಂದು ಬಿಎಸ್‌ಪಿ ನಾಯಕಿ, ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಹೇಳಿದ್ದಾರೆ.

Advertisement

ಶುಕ್ರವಾರ ಪಕ್ಷದ ಕಚೇರಿಯಲ್ಲಿ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, “ಇವಿಎಂ ತಿರುಚುವಿಕೆ ವಿರುದ್ಧ ಹೋರಾಟ ಮಾಡಲು ಹಾಗೂ ಇದಕ್ಕೆ ಇತರೆ ಪಕ್ಷಗಳ ಬೆಂಬಲ ಪಡೆಯಲು ಯಾವುದೇ ಸಂಕೋಚವಿಲ್ಲದೆ ಮಾತುಕತೆಗೆ ತಯಾರಿದ್ದೇನೆ. ಎಲ್ಲಕ್ಕಿಂತ ಮೊದಲು ನನಗೆ ಪ್ರಜಾತಂತ್ರ ಉಳಿಯಬೇಕಿದೆ. ಅದಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ,’ ಎಂದಿದ್ದಾರೆ. ಜತೆಗೆ, ಬಿಜೆಪಿಯು ಉತ್ತರಪ್ರದೇಶದ 403 ಕ್ಷೇತ್ರಗಳ ಪೈಕಿ 250ರಲ್ಲಿ ಇವಿಎಂಗಳನ್ನು ತಿರುಚಿದೆ ಎಂದು ಆರೋಪಿಸಿದ್ದಾರೆ.

ಇವಿಎಂಗಳ ಜೊತೆಗೆ ಮತ ದೃಢೀಕರಣ ಪತ್ರ ಅಳವಡಿಸುವ ಸಾಧ್ಯತೆಯನ್ನು ಪರಿಶೀಲಿಸಿ ಎಂದು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿರುವ ಹಿನ್ನಲೆಯಲ್ಲಿ ತಮ್ಮ ಪಕ್ಷ ಹಾಕಿದ್ದ ತಕರಾರು ಮನವಿಯನ್ನು ವಾಪಸ್‌ ಪಡೆದಿರುವುದಾಗಿಯೂ ಅವರು ಹೇಳಿದ್ದಾರೆ.

ತ್ರಿವಳಿ ತಲಾಖ್‌ ಸುಪ್ರೀಂಗೆ ಬಿಟ್ಟಿದ್ದು: ಇದೇ ವೇಳೆ, ತ್ರಿವಳಿ ತಲಾಖ್‌ಗೆ ಸಂಬಂಧಿಸಿಯೂ ಮಾತನಾಡಿದ ಮಾಯಾ, ಇದು ಸುಪ್ರೀಂ ಕೋರ್ಟ್‌ಗೆ ಬಿಟ್ಟ ವಿಚಾರ. ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ ಅನ್ವಯ ನ್ಯಾಯಾಲಯವೇ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.

ಸಹೋದರನಿಗೆ ಪಟ್ಟ
ಸಹೋದರ ಆನಂದ ಕುಮಾರ್‌ನನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಯಾವತಿ ನೇಮಕ ಮಾಡಿದ್ದಾರೆ. ಆದರೆ ಅವನನ್ನು ಎಂದಿಗೂ ಸಂಸದ, ಶಾಸಕ ಇಲ್ಲವೇ ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂಬ ಷರತ್ತಿನೊಂದಿಗೆ ಈ ನೇಮಕ ಮಾಡಿದ್ದೇನೆ. ಅವನ ಪೂರ್ಣ ಕೆಲಸ ಕೇವಲ ಪಕ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದೂ ಇದೇ ಸಂದರ್ಭದಲ್ಲಿ ಮಾಯಾ ಸ್ಪಷ್ಟಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯ ಸೋಲಿನ ನಂತರ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next