Advertisement

ಬಂಜೆತನ ನೀಗಿಸಲು ಐವಿಎಫ್‌ ತಂತ್ರಜ್ಞಾನ ವರದಾನ

10:55 AM Dec 23, 2019 | Suhan S |

ಹುಬ್ಬಳ್ಳಿ: ಬಂಜೆತನ ನೀಗಿಸುವ ನಿಟ್ಟಿನಲ್ಲಿ ಐವಿಎಫ್‌ ಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯುವ ಕಾರ್ಯ ಶ್ಲಾಘನೀಯ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದ ನವೀನ್‌ ಹೊಟೇಲ್‌ನಲ್ಲಿ ಆಕಾಂಕ್ಷ ಐವಿಎಫ್‌ ಸೆಂಟರ್‌ ವತಿಯಿಂದ ಐವಿಎಫ್‌ ಮೂಲಕ ಮಕ್ಕಳು ಪಡೆದ ದಂಪತಿಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿವಾಹಿತ ಮಹಿಳೆ ಮಕ್ಕಳನ್ನು ಪಡೆಯಲು ಬಯಸುತ್ತಾಳೆ. ಆದರೆ ದೈಹಿಕ ಸಮಸ್ಯೆಯಿಂದ ಹಲವರಿಗೆ ಮಕ್ಕಳಾಗಲ್ಲ. ಇಂಥ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆ ಅನಿವಾರ್ಯವಾಗುತ್ತದೆ. ವೈದ್ಯಕೀಯ ತಂತ್ರಜ್ಞಾನದಿಂದ ಹಲವರು ಮಕ್ಕಳನ್ನು ಪಡೆಯುತ್ತಾರೆ. ಇಂಥ ಪುಣ್ಯ ಕಾರ್ಯ ಮಾಡುತ್ತಿರುವ ವೈದ್ಯ ದಂಪತಿ ಪ್ರಶಂಸನಾರ್ಹರು ಎಂದರು.

ಇದು ಅತ್ಯಂತ ಹೃದಯಸ್ಪರ್ಶಿ ಕಾಯಕ್ರಮ. ಮಕ್ಕಳನ್ನು ಪಡೆದ ತಾಯಂದಿರ ಖುಷಿ ವರ್ಣಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ತಾಯಿಯನ್ನು ಮಾತ್ರ ದೇವರ ಸ್ವರೂಪದಲ್ಲಿ ನೋಡುತ್ತೇವೆ. ಜೀವ ಕೊಡುವವಳು ತಾಯಿ ಮಾತ್ರ ಎಂದರು. ಮಕ್ಕಳಾಗದ ಹೆಣ್ಣು ಮಕ್ಕಳು ಬಂಜೆತನದಿಂದ ಜೀವನದುದ್ದಕ್ಕೂ ತೊಂದರೆ ಅನುಭವಿಸಬೇಕಾಗುತ್ತದೆ. ಅಂಥ ಸ್ಥಿತಿಯಲ್ಲಿ ಐವಿಎಫ್‌ ತಂತ್ರಜ್ಞಾನ ವರದಾನದಂತಿದೆ. ಮಹಿಳೆಯರಿಗೆ ಮಗುವಿಗಿಂತ ಸಂತೋಷ ಬೇರೊಂದಿಲ್ಲ. ಕೋಟಿ ರೂ. ಕೊಟ್ಟರೂ ಅವರಿಗೆ ಮಕ್ಕಳನ್ನು ಪಡೆದಾಗ ಆಗುವಷ್ಟು ಖುಷಿ ಆಗಲ್ಲ ಎಂದು ನುಡಿದರು. ಮರುಭೂಮಿಯಲ್ಲಿ ಓಯಸಿಸ್‌ನಂತೆ ಐವಿಎಫ್‌ ಚಿಕಿತ್ಸೆ ಇದೆ. ಸೆಂಟರ್‌ ಮೂಲಕ ಕೃತಕ ಗರ್ಭಧಾರಣೆಯಿಂದ 104 ಜನ ತಾಯಂದಿರು ಮಕ್ಕಳನ್ನು ಪಡೆದಿರುವುದು ಸಂತಸದ ಸಂಗತಿ ಎಂದರು. ಮಕ್ಕಳು ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ. ಇದಕ್ಕೆ ಮಕ್ಕಳಿಗೆ ಸಂಸ್ಕಾರ ನೀಡದಿರುವುದೇ ಕಾರಣವಾಗಿದ್ದು, ತಾಯಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಇದು ವೈದ್ಯ ದಂಪತಿಯ ದೊಡ್ಡ ಸಾಧನೆಯಾಗಿದೆ. ಐವಿಎಫ್‌ ಮಕ್ಕಳ ಸಂಖ್ಯೆ ಹೆಚ್ಚಾಗಿ ಮಕ್ಕಳ ಕೊರಗು ನೀಗುವಂತಾಗಲಿ. ದೇವರ ಕರುಣೆ-ವೈದ್ಯರ ಸಹಕಾರದಿಂದ ಮಕ್ಕಳನ್ನು ಪಡೆಯಲು ಸಾಧ್ಯವಾಗಿದೆ. ಪ್ರಾಮಾಣಿಕ ಕಾರ್ಯ ಇದಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, 100ಕ್ಕೂ ಹೆಚ್ಚು ದಂಪತಿಗಳು ಮಕ್ಕಳನ್ನು ಪಡೆದಿದ್ದಾರೆ. ಅವರೆಲ್ಲರೂ ಭಾಗ್ಯವಂತರು. ವೈದ್ಯಕೀಯ ಚಿಕಿತ್ಸೆ ಮೂಲಕ ಮಕ್ಕಳನ್ನು ದಯಪಾಲಿಸಿದ ವೈದ್ಯ ದಂಪತಿ ಕಾರ್ಯ ಶ್ಲಾಘನೀಯ ಎಂದರು. ಗೃಹಸ್ಥ ಬದುಕಿನಲ್ಲಿ ಮಗು ಪಡೆಯುವುದು ಮಹತ್ವದ್ದು. ಸಾರ್ಥಕತೆ ಮಗು ಪಡೆಯುವುದರಲ್ಲಿ ಇರುತ್ತದೆ. ಮಕ್ಕಳಿಂದ ಮನೆಯ ವಾತಾವರಣ ಹರ್ಷದಾಯಕವಾಗಿರುತ್ತದೆ. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಕೊಂಕು ಮಾತು ಕೇಳಬೇಕಾಗುತ್ತದೆ. ವೈದ್ಯ ದಂಪತಿಯ ಮಹತ್ಕಾರ್ಯ ನಿರಂತರವಾಗಿ ನಡೆಯಲಿ. ಐವಿಎಫ್‌ ಚಿಕಿತ್ಸೆ ಮೂಲಕ ಸಮಾಜದಲ್ಲಿ ಮಕ್ಕಳಿಲ್ಲದವರ ಕೊರತೆ ನೀಗಿಸಲಿ ಎಂದರು. ಡಾ| ವಿಶ್ವನಾಥ ಶಿವನಗುತ್ತಿ, ಡಾ|ಸುಶ್ಮಾ ಶಿವನಗುತ್ತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next