ಬೆಂಗಳೂರು: ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸರ್ಕಾರ ರದ್ದು ಮಾಡಿದೆ. ಇದರಿಂದ ಸಮುದಾಯದ ಜನರಿಗೆ ನೋವಾಗಿದೆ. ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರು ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಘೋಷಿಸಿದ್ದರು. 200 ಕೋಟಿ ರೂ.ಗಳನ್ನು ನಿಗಮಕ್ಕೆ ಇಡಲಾಗಿತ್ತು, ಅದರಲ್ಲಿ 75 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಇದೀಗ ನಿಗಮವನ್ನು ರದ್ಧುಪಡಿಸಲಾಗಿದೆ ಎಂದರು.
ರಾಜ್ಯದಲ್ಲಿ ಸಮುದಾಯದ 30 ಲಕ್ಷ ಜನರಿದ್ದೇವೆ. 27 ಜಿಲ್ಲೆಗಳಲ್ಲಿ ನಮ್ಮ ಸಮುದಾಯ ಹರಡಿದೆ. ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ನಮ್ಮ ಕೊಡುಗೆ ಅಪಾರ. ಇವತ್ತಿಗೂ ಆರ್ಥಿಕವಾಗಿ ಹಿಂದುಳಿದಿದೆ. ಆದರೆ ಅಭಿವೃದ್ದಿ ನಿಗಮ ಘೋಷಿಸಿ ತಡೆಹಿಡಿದಿದ್ದು ಏಕೆ? ಇದಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಖಚಿತ: ಕನ್ನಡಪರ ಸಂಘಟನೆಗಳ ನಿರ್ಧಾರ
ನಮಗೆ ಆಸೆ ತೋರಿಸಿ ಏಕಾಏಕಿ ಈ ನಿರ್ಧಾರ ಮಾಡಿದ್ದು ಸರಿಯೇ? ನಮ್ಮ ಸಮುದಾಯಕ್ಕೆ ಇದರಿಂದ ತುಂಬಾ ನೋವಾಗಿದೆ. ನಿಮ್ಮ ಆದೇಶವನ್ನು ವಾಪಸ್ ಪಡೆಯಬೇಕು. ನಿಗಮ ಮಂಡಳಿ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು ಎಂದರು
ನಿಗಮ ರದ್ಧತಿಯ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ. ಆದೇಶ ವಾಪಸ್ ಪಡೆಯಲು ಆಗ್ರಹಿಸುತ್ತೇವೆ. ಆದೇಶ ವಾಪಸ್ ಪಡೆಯದೆ ಹೋದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಐವನ್ ಡಿಸೋಜಾ ಹೇಳಿದರು.