Advertisement

BJP ಪಾಳಯದಲ್ಲಿ ಅತ್ತ ದರಿ, ಇತ್ತ ಪುತ್ತಿಲ ಸ್ಥಿತಿ

12:35 AM Jul 30, 2023 | Pranav MS |

ಪುತ್ತೂರು: ವಿಧಾನಸಭಾ ಚುನಾವಣೆ ಸಂದರ್ಭ ಉದ್ಭವಿಸಿದ ಬಂಡಾಯದ ಬಿಕ್ಕಟ್ಟು ಇನ್ನೂ ಶಮನಗೊಳ್ಳದ ಪರಿಣಾಮ ಬಿಜೆಪಿ ಭದ್ರಕೋಟೆಯಲ್ಲಿ ಪಕ್ಷದ ಪ್ರಭಾವ ದಿನೇ ದಿನೇ ಕಡಿಮೆಯಾಗುವ ಆತಂಕ ಎದುರಾಗಿದೆ.

Advertisement

ಇತ್ತೀಚಿನ ಗ್ರಾ.ಪಂ.ಉಪಚುನಾ ವಣೆಯಲ್ಲಿ ತನ್ನ ತೆಕ್ಕೆಯಲ್ಲಿದ್ದ ಎರಡು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ. ಜತೆಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ವಿಧಾನಸಭಾ ಚುನಾವಣೆಯಲ್ಲೂ ಸೋತು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಆಗಿನ ಮಾದರಿಯಲ್ಲೇ ಗ್ರಾ.ಪಂ. ಚುನಾವಣೆ ಸಂದರ್ಭದಲ್ಲೂ ಕಾರ್ಯಕರ್ತರ ದೊಡ್ಡ ಪಡೆಯೇ ಬಿಜೆಪಿ ವಿರುದ್ಧ ನಿಂತಿದೆ. ಇದೇ ಸ್ಥಿತಿ ಮುಂದುವರಿದರೆ ಮುಂಬರುವ ತಾ.ಪಂ., ಜಿ.ಪಂ., ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಸಂಕಷ್ಟ ಎದುರಾಗುವ ಸಂಭವವಿದೆ.

ವಿಧಾನಸಭಾ ಚುನಾವಣೆಯ ಬಳಿಕ ಎರಡು ಬಣಗಳನ್ನು ಒಗ್ಗೂಡಿಸುವಲ್ಲಿ ರಾಷ್ಟ್ರೀಯ ನಾಯಕರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದ್ದರೂ ಫಲಪ್ರದವಾಗಲಿಲ್ಲ. ಈ ಮಧ್ಯೆ ಪುತ್ತಿಲ ಪರಿವಾರ ರಚಿತವಾಗಿ, ಬಿಜೆಪಿಯಿಂದ ಅಂತರ ಕಾಯ್ದುಕೊಂಡಿತು. ಗ್ರಾ.ಪಂ.ಉಪಚುನಾವಣೆ ಸಂದರ್ಭ ಪುತ್ತಿಲ ಪರಿವಾರದಿಂದ ಕಣಕ್ಕಿಳಿಯದಂತೆ ಒಪ್ಪಂದ ಸೂತ್ರ ಹೆಣೆದರೂ ಫಲ ಕೊಡಲಿಲ್ಲ. ಪುತ್ತಿಲ ಪರಿವಾರ ಅಖಾಡಕ್ಕೆ ಇಳಿದು ಬಿಜೆಪಿಗೆ ಸಡ್ಡು ಹೊಡೆದಿತ್ತು.

ಬಿಜೆಪಿಗೆ ಸಿಗದ ಲಾಭ
ಬಿಜೆಪಿಯ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಘಟಾನುಘಟಿ ನಾಯಕರು ಅಖಾಡಕ್ಕೆ ಇಳಿದು ವಾರ್ಡ್‌ ಮಟ್ಟದಲ್ಲಿ ಪ್ರಚಾರ ನಡೆಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸಹ ಉಪ ಚುನಾವಣೆ ಘೋಷಣೆ ಅನಂತರ ಎರಡು ಬಾರಿ ಪುತ್ತೂರಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದರು. ಇದು ಪ್ರಯೋಜನವಾಗಲಿಲ್ಲ.

ಪಟ್ಟು ಬಿಡದ ಪುತ್ತಿಲ
ಲೋಕಸಭಾ ಚುನಾವಣೆಗೂ ಸಿದ್ಧತೆ ನಡೆಸಿರುವ ಅರುಣ್‌ ಪುತ್ತಿಲ ಅವರು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇರಿಸಿದ್ದು, ಪಕ್ಷದ ಹೈಕಮಾಂಡ್‌ ಉಪಾಧ್ಯಕ್ಷ ಸ್ಥಾನದ ಭರವಸೆಯನ್ನು ನಿರಾಕರಿಸಿದ್ದಾರೆ. ಹಾಗಾಗಿ ಮತ್ತೆ ಬಂಡಾಯ ಮುಂದುವರಿದಿದೆ.

Advertisement

ಹೈಕಮಾಂಡ್‌ ನಡೆ ಅಸ್ಪಷ್ಟ
2008ರ ವಿಧಾನಸಭಾ ಚುನಾವಣೆಯಲ್ಲಿ ಶಕುಂತಳಾ ಟಿ. ಶೆಟ್ಟಿ ಅವರು ಟಿಕೆಟ್‌ ಸಿಗದೆ ಬಂಡಾಯವಾಗಿ ಸ್ಪರ್ಧಿಸಿದ್ದರು. ಆಗ ಬಿಜೆಪಿಯೇ ಗೆದ್ದಿತ್ತು. ಆದ್ದರಿಂದ ಈ ಬಾರಿ ಅರುಣ್‌ ಪುತ್ತಿಲ ಅವರ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಲೆಕ್ಕಾಚಾರ ಉಲ್ಟಾ ಆಗಿ ಬಿಜೆಪಿ ಸೋತಿತು. ಬಿಜೆಪಿ ರಾಜ್ಯ ಮುಖಂಡ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತಿತರರು ಪುತ್ತೂರಿಗೆ ಭೇಟಿ ನೀಡಿ ಪುತ್ತಿಲ ಆವರೊಂದಿಗೆ ಸಮಾಲೋಚಿಸಿದ್ದರು. ಬಳಿಕ ರಾಷ್ಟ್ರೀಯ ನಾಯಕರೂ ಮಾತುಕತೆ ನಡೆಸಿದರೂ ಉಪಯೋಗವಾಗಿಲ್ಲ. ಹೈಕಮಾಂಡ್‌ ನಡೆ ಅಸ್ಪಷ್ಟವಾಗಿದ್ದು, ಸ್ಥಳೀಯ ಮುಖಂಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬದಲಾವಣೆಗೆ ಸಿದ್ಧ ಸಂದೇಶ
ಪುತ್ತಿಲ ಅವರನ್ನು ಮಣಿಸುವ ಉತ್ಸಾಹದಲ್ಲಿದ್ದ ಬಿಜೆಪಿ ನಾಯಕರು ಎಲ್ಲ ತಂತ್ರಗಾರಿಕೆ ಪ್ರದ ರ್ಶಿಸಿದರೂ ವಿಫ‌ಲವಾದರು. ಇದು ಸ್ಥಳೀಯ ಬಿಜೆಪಿ ನಾಯಕರಲ್ಲಿನ ಉತ್ಸಾಹವನ್ನೂ ಕಡಿಮೆ ಮಾಡಿದೆ. ಹೀಗಾಗಿ ಜಿಲ್ಲಾ ಮತ್ತು ರಾಜ್ಯ ಸಮಿತಿಗಳು ಸಮ್ಮತಿಸಿದರೆ ಮಂಡಲ ಸಮಿತಿಯ ಹೊಣೆ ಕಳಚಿಕೊಳ್ಳಲು ನಾಯಕರು ಮುಂದಾಗಿದ್ದಾರೆ. ಈ ಮೂಲಕ ಪುತ್ತಿಲ ಅವರಿಗೆ ಸ್ಥಾನಮಾನ ನೀಡಲು ಆಕ್ಷೇಪ ಇಲ್ಲವೆಂಬ ಸಂದೇಶವನ್ನೂ ಹೈಕಮಾಂಡ್‌ಗೆ ರವಾನಿಸಿದ್ದಾರೆ. ಮುಂದಿನ ಉಳಿದ ಚುನಾವಣೆಗಳು ಬರುವಷ್ಟರಲ್ಲಿ ಬಿಜೆಪಿ ಹೈಕಮಾಂಡ್‌ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕಿದೆ.

ವಿಧಾನಸಭೆ, ಗ್ರಾ.ಪಂ.ಉಪ ಚುನಾವಣೆಯಲ್ಲಿ ಕಾರ್ಯಕರ್ತರ ಭಾವನೆಗಳು ಏನು ಅನ್ನುವ ಸಂದೇಶ ಸ್ಪಷ್ಟವಾಗಿದೆ. ಇದು ಪುತ್ತೂರಿಗೆ ಮಾತ್ರ ಸೀಮಿತವಲ್ಲ. ಅದು ಜಿಲ್ಲೆಯಾದ್ಯಂತ ಇದೆ. ಇದನ್ನು ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕು. ದ.ಕ. ಜಿಲ್ಲಾಧ್ಯಕ್ಷ ಸ್ಥಾನದ ಬೇಡಿಕೆ ಇರಿಸಿರುವುದು ನಿಜ. ಪಕ್ಷದ ಸಂಘಟನೆಗಾಗಿ ಅವಕಾಶ ನೀಡಬೇಕು ಅನ್ನುವುದು ಕಾರ್ಯಕರ್ತರ ಅಪೇಕ್ಷೆ.
– ಅರುಣ್‌ ಕುಮಾರ್‌ ಪುತ್ತಿಲ

ಅವಧಿ ಮುಗಿದಿರುವುದು ನಿಜ. ಹೊಸ ಸಮಿತಿ ರಚನೆಗೆ ಅವಕಾಶ ನೀಡಲು ಯಾವುದೇ ಕ್ಷಣದಲ್ಲಿಯೂ ಹುದ್ದೆ ಬಿಡಲು ಸಿದ್ಧನಿದ್ದೇನೆ. ಪುತ್ತಿಲ ಪರಿವಾರದವರು ಮತ್ತೆ ಪಕ್ಷಕ್ಕೆ ಬರುವುದಕ್ಕೆ, ಅವರಿಗೆ ಸ್ಥಾನಮಾನ ನೀಡುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಇದೆ.
– ಸಾಜ ರಾಧಾಕೃಷ್ಣ ಆಳ್ವ, ಅಧ್ಯಕ್ಷ ಬಿಜೆಪಿ ಗ್ರಾಮಾಂತರ ಮಂಡಲ ಪುತ್ತೂರು

 

Advertisement

Udayavani is now on Telegram. Click here to join our channel and stay updated with the latest news.

Next