Advertisement

ಶ್ರೀಕ್ಷೇತ್ರ ಸಿದ್ದರಬೆಟ್ಟಕ್ಕೆ ಮೆಟ್ಟಿಲು ಭಾಗ್ಯ

04:18 PM Aug 20, 2017 | |

ನೆಲಮಂಗಲ: ಸಿದ್ದರಬೆಟ್ಟವು ಹಿಂದೂ, ಮುಸ್ಲಿಂರ ಭಾವಕ್ಯತೆಯ ಕೇಂದ್ರ. ಇಲ್ಲಿಗೆ ಬರುವ ಭಕ್ತರಿಗೆ ಮತ್ತು ಯಾತ್ರಿಕರಿಗೆ ಹೆಚ್ಚಿನ ಸೌಲಭ್ಯ ಇಲ್ಲದೆ ಪರದಾಡುವಂತಾಗಿದ್ದು, ಇದೀಗ ಬೆಟ್ಟಕ್ಕೆ ಮೆಟ್ಟಲು ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಪಂ ಸದಸ್ಯ ನಂಜುಂಡಯ್ಯ ಹೇಳಿದರು.

Advertisement

ತಾಲೂಕಿನ ಸೋಂಪುರ ಹೋಬಳಿಯ ಸಿದ್ದರಬೆಟ್ಟಕ್ಕೆ ಮೆಟ್ಟಿಲು ನಿರ್ಮಾಣ ಹಾಗೂ ಶಿಥಿಲಗೊಂಡಿರುವ ಲಕ್ಷ್ಮೀನರಸಿಂಹಸ್ವಾಮಿ, ಗಣಪತಿ, ಆಂಜನೇಯ, ಮಲ್ಲಿಕಾರ್ಜುನ ಗುಹೆ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ದರಬೆಟ್ಟವು ಸಾಧು ಸಂತರ ತಪೋ ಸ್ಥಳ ಹಾಗೂ ನಿಜಗಲ್‌ರಾಣಿ ಮತ್ತು ಪಾಳೆಗಾರರು ಆಳ್ವಿಕೆಯಲ್ಲಿ ಸಿದ್ದರಬೆಟ್ಟವು ಸುಂದರ ಪರಿಸರದಲ್ಲಿದ್ದು, ನೋಡುಗರಿಗೆ ಭಾವನಾತ್ಮಕವಾಗಿ ಕಾಣುವ ಮೂಲಕ ಎಲ್ಲರನ್ನು ಆಕರ್ಷಿಸುವ ಕೇಂದ್ರವಾಗಿದೆ ಎಂದು ವಿವರಿಸಿದರು.

ಬೆಟ್ಟ ಏರಲು ಮೆಟ್ಟಿಲು ಇಲ್ಲದೆ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಬೆಟ್ಟದ ಬುಡದಲ್ಲಿಯೇ ನಿಂತುದೇವರಿಗೆ ನಮಿಸುತ್ತಾರೆ. ಇದನ್ನು ತಪ್ಪಿಸಲು ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ ಮತ್ತು ಶಿಥಿಲಗೊಂಡಿರುವ ದೇವಾಲಯಗಳ ಜೀರ್ಣೋದ್ಧಾರ, ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಲು ನಿಜಗಲ್ಲು ಸಿದ್ದರಬೆಟ್ಟ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್‌ ರೂಪಿಸಲಾಗಿದೆ ಎಂದು ವಿವರಿಸಿದರು. 

ಕಾಂಗ್ರೆಸ್‌ ಮುಖಂಡ ಸಿದ್ದರಾಮು ಮಾತನಾಡಿ, ಕ್ಷೇತ್ರವು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಮತ್ತು ಸೈನಿಕ ತರಬೇತಿ ನೆಲೆಯಾಗಿತ್ತು. ಹಿಂದೆ ಈ ಸ್ಥಳವು ತಾಲೂಕು ಕೇಂದ್ರವಾಗಿತ್ತು. ಈ ಸಿದ್ದರಬೆಟ್ಟದ ಮೇಲಿರುವ ಸಿದ್ದಪ್ಪಸ್ವಾಮಿಯ ಶಕ್ತಿ ಮತ್ತು ಪವಾಡಕ್ಕೆ ಮಾರುಹೋದ ಸಿದ್ಧಗಂಗೆಯ ಉದ್ದಾನ ಸ್ವಾಮೀಜಿ ಬಾಲ್ಯದಲ್ಲಿ ಇದೇ ಬೆಟ್ಟದ ಗವಿಗಳಲ್ಲಿ ತಪಸ್ಸು ಮಾಡುತ್ತಾ ಬೇತಾಲವನ್ನು ವಶಪಡಿಸಿಕೊಂಡಿದ್ದರು.

ಈ ಕಾರಣದಿಂದಲೇ ಮಠವನ್ನು ಅಭಿವೃದ್ಧಿ ಪಡಿಸಿದರು ಎಂಬ ಮಾತು ಈ ಭಾಗದಲ್ಲಿ ಜನಜನಿತವಾಗಿದೆ. ಸಿದ್ದರಬೆಟ್ಟದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದ್ದು, 1288ರ ಹೊಯ್ಸಳರ ಕಾಲದ ಶಾಸನದಲ್ಲಿ ಉಲ್ಲೇಖವಿದೆ. ಆಗ ಈ ಬೆಟ್ಟವನ್ನು ನಿಜಗಲಿಪುರ ಬೆಟ್ಟವೆಂದು ಕರೆಯುತ್ತಿದ್ದರು. ಮುಂದೆ ಮೈಸೂರು ಅರಸರ ಸೇವಕ ಬಿಳುಗಿಲೆ ದಾಸರಾಜಯ್ಯ ನಿಜಗಲ್ಲಿನ ರಕ್ಷಣೆಗಾಗಿ 1698ರಲ್ಲಿ ಕಲ್ಲಿನಕೋಟೆಯನ್ನು ನಿರ್ಮಿಸಲು ಆರಂಭಿಸಿದ್ದರ ಬಗ್ಗೆ ಮೈಸೂರು ಗ್ಯಾಜಟಿಯರ್‌ನಲ್ಲಿ ಮಾಹಿತಿ ಇದೆ ಎಂದು ಹೇಳಿದರು.

Advertisement

ಆರ್ಯವೈಶ್ಯ ಸಂಘದ ಮುಖಂಡ ಡಿಎಂಎಲ್‌ಎನ್‌ ಮೂರ್ತಿ ಮಾತನಾಡಿ, ಹಿರಿಯರು ಈ ಬೆಟ್ಟದ ಮೇಲಿರುವ ಸಿದ್ದಪ್ಪಸ್ವಾಮಿ, ಲಕ್ಷ್ಮೀನಾರಾಯಣಸ್ವಾಮಿ ಮತ್ತು ಗಣಪತಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ನೂರಾರು ಭಕ್ತರಿಗೆ ಊಟದ ವ್ಯವಸ್ಥೆ ಮಾಡಿಕೊಂಡು ಬರುತ್ತಿದ್ದೇವೆ. ಈ ಬೆಟ್ಟಕ್ಕೆ ಹತ್ತಲು ವ್ಯವಸ್ಥಿತವಾದ ಮೆಟ್ಟಿಲು ಇಲ್ಲದಿರುವುದರಿಂದ ಸಾಕಷ್ಟು ಭಕ್ತರು ಬೆಟ್ಟದ ಕೆಳಗೆ ನಿಂತು ಕೈಮುಗಿದು ಹೋಗುತ್ತಿದ್ದರು. ಈ ಸಮಸ್ಯೆಯನ್ನು ತಪ್ಪಿಸಲು ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್‌ ಅಸ್ಥಿತ್ವಕ್ಕೆ ಬಂದು ಮೆಟ್ಟಿಲು ನಿರ್ಮಾಣ ಮತ್ತು ದೇವಾಲಯಗಳು ಜೀರ್ಣೋದ್ಧಾರ ನಡೆಸಲು ಮುಂದಾಗಿದೆ. ತಾವು ಸಹ ಶಕ್ತಿ ಮೀರಿ ಸಹಾಯ ಮಾಡುತ್ತೀದ್ದೇವೆ ಎಂದು ವಿವರಿಸಿದರು.

ರಾಮು ಜೋಗಿಹಳ್ಳಿ ಮಾತನಾಡಿ, ಪರಿಸರದ ಗೀತೆಯನ್ನು ಹಾಡಿ ಮರಗಿಡಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಎಚ್‌.ರಾಮಕೃಷ್ಣಯ್ಯ, ಖಜಾಂಚಿ ಶ್ರೀಕಾಂತ್‌, ಸಂಘಟನಾ ಕಾರ್ಯದರ್ಶಿ ಸಿದ್ದರಾಮು, ಉಪಾಧ್ಯಕ್ಷರಾದ ನಂಜುಂಡಯ್ಯ, ಗೋವಿಂದರಾಜು, ಮೂರ್ತಿ, ವೆಂಕಟೇಶ್‌, ಸಹ ಕಾರ್ಯದರ್ಶಿ ಪುಟ್ಟೇಗೌಡ, ನಿರ್ದೇಶಕರಾದ ಸುರೇಶ್‌, ಜಗದೀಶ್‌, ಮುನೇಂದ್ರ, ಗೋವಿಂದರಾಜು, ಮುರಳೀಧರ, ಸಿದ್ದರಾಜು, ಶ್ರೀನಿವಾಸ್‌, ಮಂಜುನಾಥ್‌, ಪ್ರದೀಪ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next