ತುಂಗಾರತಿ ನೆರವೇರುವ ಈ ದೃಶ್ಯ ಕಣ್ಣಿಗೊಂದು ಹಬ್ಬ. ಇನ್ನೇನು ಕರ್ಪೂರಕ್ಕೆ ದೀಪ ಸ್ಪರ್ಶಿಸಿ, ಆರತಿ ಬೆಳಗಿತು ಎನ್ನುವ ಹೊತ್ತಿಗೆ ತುಂಗೆಯಲ್ಲಿರುವ ಮೀನುಗಳು, ಹೊಂಬಣ್ಣದಿಂದ ಕಂಗೊಳಿಸುತ್ತವೆ…
“ಗಂಗಾ ಸ್ನಾನಂ, ತುಂಗಾ ಪಾನಂ’ ಎನ್ನುವ ಸಾಲು, ಕನ್ನಡಿಗರಿಗೆ ಒಂದು ಪುಳಕ. ನಮ್ಮದೇ ನಾಡಿನ ತುಂಗೆಯು ಹೋಲಿಕೆಯಲ್ಲಿ ಗಂಗೆಯ ಪಕ್ಕದಲ್ಲಿ ನಿಲ್ಲುತ್ತಾಳೆಂಬುದೇ ಮಹತ್ತರ ಹೆಮ್ಮೆ. ಕಾಶಿಯಲ್ಲಿ ಗಂಗೆಗೆ ನಿತ್ಯವೂ “ಗಂಗಾರತಿ’ಯ ಮೂಲಕ ಭಕ್ತಿ ನಮನಗಳನ್ನು ಸಲ್ಲಿಸುವುದು, ಒಂದು ಅಪೂರ್ವ ದೃಶ್ಯ. ಅದರಂತೆ, ದಕ್ಷಿಣದಲ್ಲೂ ತುಂಗಾ ನದಿಗೆ ಆರತಿ ಬೆಳಗುವುದು ಅನೇಕರಿಗೆ ತಿಳಿದಿಲ್ಲ. ಈ ಚೆಲುವಿಗೆ ಸಾಕ್ಷಿ ಬರೆಯುವುದು, ಶೃಂಗೇರಿಯ ಶಾರದಾ ಸನ್ನಿಧಾನದ ತುಂಗಾ ತೀರ.
ಕಾರ್ತೀಕ ಹುಣ್ಣಿಮೆಯ ಚುಮುಚುಮು ಚಳಿ. ಅಂದು ನಡೆಯುವ ಲಕ್ಷದೀಪೋತ್ಸವದ ವೇಳೆ, ಆಗಸದ ಚಂದಿರನ ಬೆಳಕನ್ನು ಸೋಲಿಸಲು ತುಂಗಾ ತೀರ ಸಜ್ಜಾಗಿರುತ್ತದೆ. ಲಕ್ಷ ಲಕ್ಷ ಹಣತೆಗಳ ಬೆಳಕಿನಲ್ಲಿ ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ. ತೆಪ್ಪವು ತುಂಗೆಯೊಡಲಲ್ಲಿ ಹಾಗೆ ತೇಲುತ್ತಿರಲು, ಇತ್ತ ದಡದಲ್ಲಿ ಅರ್ಚಕವೃಂದ ತುಂಗೆಗೆ ಆರತಿಯನ್ನು ಬೆಳಗುತ್ತಿರುತ್ತಾರೆ.
ತುಂಗಾರತಿ ನೆರವೇರುವ ಈ ದೃಶ್ಯ ಕಣ್ಣಿಗೊಂದು ಹಬ್ಬ. ಇನ್ನೇನು ಕರ್ಪೂರಕ್ಕೆ ದೀಪ ಸ್ಪರ್ಶಿಸಿ, ಆರತಿ ಬೆಳಗಿತು ಎನ್ನುವ ಹೊತ್ತಿಗೆ ತುಂಗೆಯಲ್ಲಿರುವ ಮೀನುಗಳು, ಹೊಂಬಣ್ಣದಿಂದ ಕಂಗೊಳಿಸುತ್ತವೆ. ಮೇಲೆದ್ದು ಕುಣಿಯುತ್ತಾ, ತಮ್ಮದೇ ಸಂಗೀತ ಸೃಷ್ಟಿಸುತ್ತವೆ. ಅವುಗಳ ಚಲನೆಯೂ ಒಂದು ಸಂಭ್ರಮ. ಶ್ರೀ ಮಠದ ಸದ್ವಿದ್ಯ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳು, ಪುರೋಹಿತರು ವೇದಘೋಷವನ್ನು ಮೊಳಗಿಸುತ್ತಾ, ಇಡೀ ವಾತಾವರಣವನ್ನು ಸ್ವರ್ಗವನ್ನಾಗಿಸುತ್ತಾರೆ.
ಕಳೆದ ಎರಡು ವರ್ಷಗಳಿಂದ ತುಂಗೆಗೆ ಆರತಿ ಸಮರ್ಪಿಸುವ ಆಚರಣೆ ಅತ್ಯಂತ ಜನಪ್ರಿಯತೆ ಪಡೆಯುತ್ತಿದೆ. ಲಕ್ಷದೀಪೋತ್ಸವ ವೇಳೆ ನಡೆಯುವ ಈ ಆರತಿಯನ್ನು ವೀಕ್ಷಿಸಲು ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುವುದು ವಿಶೇಷ. ಜಗದ್ಗುರುಗಳ ಉಪಸ್ಥಿತಿಯಲ್ಲಿ ತೆಪ್ಪೋತ್ಸವದಲ್ಲಿ ಪಂಚ ದೇವರುಗಳಿಗೆ ಮಂಗಳಾರತಿ ನಡೆದ ನಂತರ ಜಗದ್ಗುರುಗಳು ತೆಪ್ಪದಲ್ಲಿ ಪಯಣಿಸಿ, ತುಂಗೆಯ ಮತ್ತೂಂದು ದಡದ ಕುಟೀರದಲ್ಲಿ ಆಸೀನರಾಗುತ್ತಾರೆ. ಅಲ್ಲಿಂದಲೇ ತೆಪ್ಪೋತ್ಸವ, ತುಂಗಾರತಿಯನ್ನು ವೀಕ್ಷಿಸುತ್ತಾರೆ. ಇತ್ತೀಚೆಗೆ ನಡೆದ ಲಕ್ಷದೀಪೋತ್ಸವದಲ್ಲಿ ಇವೆಲ್ಲ ದೃಶ್ಯಸಂಭ್ರಮಗಳಿದ್ದವು.
* ರಮೇಶ್ ಕುರುವಾನ್ನೆ