Advertisement

ಉಫ್.. ಇದು ಪಿಪಿಎಫ್

02:56 PM Jun 25, 2019 | Sriram |

ಪಿಪಿಎಫ್ ಗೆ ಹಣ ಹಾಕಿ ಹದಿನೈದು ವರ್ಷ ಕೈಕಟ್ಟಿ ಕುಳಿತುಕೊಳ್ಳಬೇಕು ಅನ್ನೋದೇನೋ ನಿಜ. ಆದರೆ, ಹೆಚ್ಚಿನ ಬಡ್ಡಿ ಜೊತೆಗೆ ಇದರಿಂದ ಹಲವು ಲಾಭಗಳಿವೆ.

Advertisement

ಇವತ್ತು ದೀರ್ಘಾವಧಿ ಹೂಡಿಕೆಯಲ್ಲಿ ಅತಿ ಹೆಚ್ಚು ಬಡ್ಡಿ ಕೊಡುವ ಯೋಜನೆ ಯಾವುದು ಅಂದರೆ ಅದುವೇ ಪಿಪಿಎಫ್. ಆದರೆ ಪಿಪಿಎಫ್ ಅಕೌಂಟ್‌ ತೆರೆದು 15 ವರ್ಷ ಸುಖಾ ಸುಮ್ಮನೆ ದುಡ್ಡು ತುಂಬಿಸುತ್ತಿರಬೇಕು ಅನ್ನೋದು ನಿಯಮ. ಸಕಾರಣವಿಲ್ಲದೆ ಮಧ್ಯೆ ಹಣವನ್ನು ಮುಟ್ಟಲು ಸಹ ಆಗದು. ನಿಮಗೆ ಗೊತ್ತಿಲ್ಲದೇ ಒಂದಷ್ಟು ಉಳಿತಾಯ ದೊಡ್ಡದಾಗಾಬೇಕು ಅನ್ನುವುದಾದರೆ ಪಿಪಿಎಫ್ ಮಾಡಿಸಬಹುದು. ಪ್ರಸ್ತುತ ಶೇ.8ರಷ್ಟು ಬಡ್ಡಿ ಕೊಡುವ ಉಳಿತಾಯ ಯೋಜನೆ ಇದೊಂದೇ ಇರುವುದು. ಈ ಬಡ್ಡಿ ಮೂರು ತಿಂಗಳಿಗೊಂದು ಬಾರಿ ನಿಗಧಿಯಾಗುತ್ತಿದೆ. ಪ್ರತಿ ತಿಂಗಳ ಐದನೇ ತಾರೀಖೀನ ಒಳಗೆ ಖಾತೆಗೆ ಹಣ ಪಾವತಿಸಿದರೆ ನೀವು ಕೊನೆಗೆ ಕಟ್ಟಿದ ಮೊತ್ತಕ್ಕೂ ಬಡ್ಡಿ ಸಿಗುತ್ತದೆ. ಐದನೇ ತಾರೀಖೀನ ನಂತರ ಆದರೆ ಬಡ್ಡಿ ಲೆಕ್ಕಾಚಾರ ಮುಂದಿನ ತಿಂಗಳಿಗೆ ಹೋಗುತ್ತದೆ.

ಪಿಪಿಎಫ್ಗೆ ತೆರಿಗೆ ವಿನಾಯಿತಿ ಉಂಟು. ಪ್ರತಿ ಐದು ವರ್ಷಕ್ಕೊಮ್ಮೆ ರಿನಿವಲ್‌ ಮಾಡಬಹುದು. ಆದರೆ, ಕಟ್ಟಿದ ಮೊತ್ತದ ಮೇಲೆ ಸಾಲ ಪಡೆಯುವ ಅವಕಾಶವೂ ಉಂಟಂತೆ. ಮದುವೆ, ಓದು, ವಿದೇಶಿ ಪ್ರವಾಸ, ಅಕಾಲಿಕ ಮರಣದಂಥ ಸಮಯ ಎದುರಾದರೆ ಆಗ ನಿಮ್ಮ ಪಿಪಿಎಫ್ ಅಕೌಂಟ್‌ನಿಂದ ಹಣವನ್ನು ಸರಾಗವಾಗಿ ತೆಗೆಯಬಹುದು. ಇದಕ್ಕೆ ಸೂಕ್ತ ದಾಖಲೆ ಒದಗಿಸಬೇಕಾಗುತ್ತದೆ ಅನ್ನೋದು ಗೊತ್ತಿರಬೇಕಾದ ವಿಷಯ.

ಎನ್‌ಆರ್‌ಐಗೆ ಇಲ್ಲ
ಎನ್‌ಆರ್‌ಐಗಳು ಈ ಪಿಪಿಎಫ್ಗಳನ್ನು ಶುರು ಮಾಡಲು ಅವಕಾಶವಿಲ್ಲ. ಈ ಉಳಿತಾಯ ಯೋಜನೆ ಇರುವುದು ಬರೀ ದೇಶಿಗರಿಗೆ. ಆದರೆ, ನೀವು ವಿದೇಶಕ್ಕೆ ಹೋಗುವ ಮೊದಲೇ ಇಲ್ಲಿನ ಬ್ಯಾಂಕ್‌ಗಳಲ್ಲಿ ಪಿಪಿಎಫ್ ಖಾತೆ ತೆರೆದಿದ್ದರೆ ಚಿಂತೆ ಇಲ್ಲ. ಅದನ್ನು ಮುಂದುವರಿಸಲು ಯಾವ ಕಾನೂನೂ ಅಡ್ಡಿ ಮಾಡುವುದಿಲ್ಲ. ಪಿಪಿಎಫ್ ಖಾತೆ ತೆರೆದು, ಅದರೊಳಗೆ ಇದ್ದ ಬಂದ ಹಣವನ್ನೆಲ್ಲಾ ಅದರೊಳಗೆ ಸುರಿಯುವ ಯೋಜನೆ ಇದ್ದರೆ ಸ್ವಲ್ಪ ನಿಲ್ಲಿ. ವರ್ಷಕ್ಕೆ 500ರೂ ನಿಂದ 1,50,00 ಲಕ್ಷ ಹಣ ಮಾತ್ರ ಖಾತೆಯಲ್ಲಿರಬೇಕು ಅನ್ನೋ ನಿರ್ಬಂಧವಿದೆ. ಅದಕ್ಕಿಂತ ಹೆಚ್ಚು ಹಣ ಜಮೆ ಮಾಡಲು ಅವಕಾಶವಿಲ್ಲ. ಅದೂ ಜಮೆ ಮಾಡುವುದು ಅಂದರೆ ಹೇಗೆ, ಎಣಿಸಿ, ಎಣಿಸಿ ವರ್ಷಕ್ಕೆ 12 ಸಲ ಹಣ ತುಂಬಬಹುದು ಅಷ್ಟೇ. ಈಗಾಗಲೇ ಹೇಳಿದಂತೆ ವಿಶೇಷ ಕಾರಣಗಳಿದ್ದಲ್ಲಿ ಅವಧಿಗಿಂತ ಮೊದಲೇ ಖಾತೆಯನ್ನು ಕ್ಲೋಸ್‌ ಮಾಡಬಹುದು. ಅದಕ್ಕೂ ಕೆಲ ನಿಯಮಗಳಿವೆ. ಅದೇನೆಂದರೆ, ನಿಮಗೆ ಸಿಗುವ ಬಡ್ಡಿಯಲ್ಲಿ ಶೇ.1ರಷ್ಟು ಕಟಾವು ಮಾಡಿ ಕೊಡುತ್ತಾರೆ. ಇದನ್ನು ದಂಡ ಅಂತಲಾದರೂ ಅಂದುಕೊಳ್ಳಬಹುದು ಅಥವಾ ಅವಧಿಗೂ ಮೊದಲೇ ತೆಗೆದದ್ದಕ್ಕೆ ಹೀಗೆ ಅಂತಲೂ ಊಹಿಸಬಹುದು. ಪಿಪಿಎಫ್ ಮಾಡಿದರೆ ಇನ್ನೊಂದು ಲಾಭ ಇದೆ. ಅದೇನೆಂದರೆ, ನೀವು ಒಂದು ಪಕ್ಷ ಸಾಲ ಮಾಡಿ, ನ್ಯಾಯಾಲಯ ಆಸ್ತಿಯನ್ನು ಡಿಕ್ರಿ ಮಾಡಿದರೆ, ಪಿಪಿಎಫ್ ಅನ್ನೂ ಆ ಮೊಕದ್ದಮೆಗೆ ಅಟ್ಯಾಚ್‌ ಮಾಡಿದ್ದರೆ ನಿಮ್ಮ ಪಿಪಿಎಫ್ ಹಣ ಆ ಸಾಲದ ವ್ಯಾಪ್ತಿಗೆ ಬರುವುದಿಲ್ಲ.

ವಾಪಸ್ಸು ಪಡೆಯೋದು ಹೇಗೆ?
ಪಿಪಿಎಫ್ ಹಣ ಹಾಕಿದ ನಂತರ ನೀವು ಏಳು ವರ್ಷ ಕಾಯಲೇಬೇಕು. ಆ ನಂತರ ನಾಲ್ಕನೇ ವರ್ಷದ ಕೊನೆಯಲ್ಲಿ ಖಾತೆಯೊಳಗೆ ಉಳಿದು ಕೊಂಡಿರುವ ಮೊತ್ತದಲ್ಲಿ ಶೇ.50ರಷ್ಟು ಹೊರ ತೆಗೆಯಬಹುದು. ಹೀಗೆ ತೆಗೆದ ಹಣಕ್ಕೆ ಯಾವುದೇ ತೆರಿಗೆ ಬೀಳುವುದಿಲ್ಲ. ಆನಂತರ 15 ವರ್ಷದ ಟರ್ಮ್ ಅನ್ನು ಪ್ರತಿ ತಿಂಗಳು ಅಥವಾ ವರ್ಷದಲ್ಲಿ 12 ಸಲ ದಂತೆ ಹಣ ಜಮೆ ಮಾಡುತ್ತಾ ಮುಂದುವರಿಸಬಹುದು.

Advertisement

ಹದಿನೈದು ವರ್ಷದ ನಂತರ ಪಿಪಿಎಫ್ ಮೆಚೂÂರ್‌ ಆಗುತ್ತದೆ. ಆ ಹಣವನ್ನು ಹಾಗೇ ಬಿಟ್ಟರೆ ತೊಂದರೆ ಇಲ್ಲವೇ? ಸಸ್ಪೆನ್ಸ್‌ ಖಾತೆಗೆ ಏನಾದರೂ ತಳ್ಳಬಹುದೇ? ಅನ್ನೋ ಅನುಮಾನ ಇರಬಹುದು. ಅದಕ್ಕೆ ಹೀಗೂ ಮಾಡಬಹುದು. ನೀವು ಪಿಪಿಎಫ್ ಖಾತೆಯಲ್ಲಿ ಮೆಚೂÂರ್‌ ಆಗಿರುವ ಮೊತ್ತ ಹಾಗೇ ಬಿಟ್ಟರೆ, ಬಡ್ಡಿಯಿಂದ ಬೆಳೆಯುತ್ತಲೇ ಇರುತ್ತದೆ. ನಿಮಗೆ ಯಾವಾಗ ಬೇಡ ಎನಿಸುತ್ತದೋ ಆಗ ಪಿಪಿಎಫ್ ಖಾತೆಯನ್ನು ಮುಚ್ಚಿ ಹಣ ಹಿಂಪಡೆಯಬಹುದು. ಆದರೆ ಒಂದು ವಿಚಾರ ನೆನಪಿರಲಿ. ಹದಿನೈದು ವರ್ಷದ ನಂತರವೂ ನೀವು ಪಿಪಿಎಫ್ ಖಾತೆಯನ್ನು ಮುಂದುವರಿಸಬೇಕು ಅನ್ನೋ ಇಚ್ಚೆ ಹೊಂದಿದ್ದರೆ, ಮೆಚ್ಯುರಿಟಿ ಆದ ಒಂದು ವರ್ಷದ ಒಳಗೆ ಫಾರ್ಮ್ ಎಚ್‌ ಅನ್ನು ತುಂಬಿ ಕೊಡಬೇಕು. ಹೀಗೆ ಮಾಡಿದರೆ ಪ್ರತಿ ಐದು ವರ್ಷಕ್ಕೊಮ್ಮೆ ನಿಮ್ಮ ಖಾತೆಯನ್ನು ರಿನಿವಲ್‌ ಮಾಡುವ ಮೂಲಕ ಹಾಗೇ ಮುಂದುವರಿಸಬಹುದು. ಹೀಗೆ ಎಷ್ಟು ಸಲ ಬೇಕಾದರೂ ಕೂಡ ವಿಸ್ತರಿಸುವ ಅವಕಾಶ ಕಾನೂನು ನೀಡಿದೆ.

ಪಿಪಿಎಫ್ ವರ್ಗಾವಣೆ ಮಾಡಬಹುದಾ?
ನಿಮದು ಒಂದು ಪಿಪಿಎಫ್ ಖಾತೆ ಇದೆ. ಇದನ್ನು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಅಥವಾ ಒಂದು ಬ್ಯಾಂಕಿನ ಬ್ರಾಂಚಿನಿಂದ ಇನ್ನೊಂದು ಬ್ಯಾಂಕಿನ ಬ್ರಾಂಚಿಗೆ ಪಿಪಿಎಫ್ ವರ್ಗಾವಣೆ ಮಾಡಲು ಸಾಧ್ಯವಿದೆ. ಹೇಗೆಂದರೆ, ಅದಕ್ಕೆ ಹಾಲಿ ಪಿಪಿಎಫ್ ಖಾತೆ ಹೊಂದಿರುವ ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕು. ಜೊತೆಗೆ, ಪಿಪಿಎಫ್ ಅಕೌಂಟಿನ ಪಾಸ್‌ ಬುಕ್‌ ಅಪ್‌ಡೇಟ್‌ ಮಾಡಿಸಿರಬೇಕು. ಅಸಲು ಎಷ್ಟು, ಬಡ್ಡಿ ಎಷ್ಟು ಕ್ರೂಡೀಕರಣವಾಗಿದೆ, ಕೊನೆ ಡಿಪಾಸಿಟ್‌ ಯಾವಾಗ ಮಾಡಿದ್ದು ಎಂಬುದರ ವಿವರವನ್ನು ನಮೂದು ಮಾಡಿಸಿರಬೇಕು. ಏಕೆಂದರೆ, ಅರ್ಜಿ ಸಲ್ಲಿಸಿದ ನಂತರ ವರ್ಗಾವಣೆ ಆಗಬೇಕಿರುವ ಬ್ಯಾಂಕ್‌ನವರು ಈ ಎಲ್ಲವನ್ನೂ ಪರಿಶೀಲಿಸುತ್ತಾರೆ. ನಿಮ್ಮ ಸಹಿ ಸರಿ ಇದೆಯೋ ಇಲ್ಲವೋ ಎನ್ನುವ ಹೊಂದಾಣಿಕೆಯನ್ನೂ ಗಮನಿಸುತ್ತಾರೆ. ಕೆ.ವೈಸಿ( ನೋ ಯುವರ್‌ ಕಸ್ಟಮರ್‌) ನಾಮಿನೇಷನ್‌ ಎಲ್ಲವೂ ಆಗ ಪರಿಶೀಲನೆಯಾಗುತ್ತದೆ. ಆನಂತರವೇ, ಹೊಸ ಬ್ಯಾಂಕಿನಲ್ಲಿ ಹೊಸ ಪಿಪಿಎಫ್ ಖಾತೆ ಪ್ರಾರಂಭವಾಗುವುದು. ನೀವು ಅರೆ, ಹೊಸೆ ಖಾತೆಯೇ, ಹಾಗಾದರೆ ಹಳೆ ಖಾತೆಯ ಕತೆ ಏನು? ಅನ್ನಬಹುದು. ನಿಜ, ಹೊಸ ಖಾತೆ ಅಂದರೆ ಹಳೆ ಖಾತೆಯ ವಿಸ್ತರಣೆ ಅಷ್ಟೇ. ಹಳೆ ಬ್ಯಾಂಕಿನ ಪಿಪಿಎಫ್ ಖಾತೆಯಲ್ಲಿ ನೀವಿಟ್ಟ ಮೊತ್ತ, ಅದರಿಂದ ದೊರೆತ ಬಡ್ಡಿ ಇಲ್ಲಿ ನೇರವಾಗಿ ಹೊಸ ಬ್ಯಾಂಕಿನ ಖಾತೆಗೆ ಬಂದು ಬೀಳುತ್ತದೆ. ಬ್ಯಾಂಕಿಗೆ ಹೊಸ ಖಾತೆ. ನಿಮಗೆ ಹಳೆಯದ್ದೇ.

-ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next