ವಿಟ್ಲ: ಪೂರ್ಣಾಂಕ ಗಳಿಸಬೇಕು ಅಂದುಕೊಂಡಿದ್ದೆ. ಗಣಿತದಲ್ಲಿ ಒಂದು ಅಂಕ ಕೈಕೊಟ್ಟಿತು. ಆದರೂ ಸಿಕ್ಕಿದ ಫಲಿತಾಂಶದಿಂದ ಖುಷಿಯೇ ಆಗಿದೆ. ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನವೆಂದಾಗ ಮತ್ತಷ್ಟು ಆನಂದವಾಯಿತು…
ವಿಟuಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ಹೇಳಿದ್ದು ಹೀಗೆ.
ತಂದೆ ಎದುರ್ಕಳ ರಾಜ ನಾರಾಯಣ, ತಾಯಿ ಸೀತಾ ಆನಂದದಿಂದ ಭಾವುಕರಾದರು. ಅಂಗನ ವಾಡಿಯಿಂದಲೇ ತರಗತಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದಿರಿಸಿ ಕೊಂಡು ಬಂದಿದ್ದಾಳೆ. ಎಸೆಸೆಲ್ಸಿಯಲ್ಲಿ ಇಷ್ಟು ಅಂಕ ಗಳಿಸುವ ನಿರೀಕ್ಷೆಯಿತ್ತು. ಸಂಭ್ರಮ, ಸಂತೋಷಗಳನ್ನು ಶಬ್ದಗಳಲ್ಲಿ ವಿವರಿಸುವುದಕ್ಕೆ ಆಗುತ್ತಿಲ್ಲ. ಅವಳ ಭವಿಷ್ಯ ರೂಪಿಸುವುದಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತೇವೆ ಎಂದರು.
ವಿಟ್ಲ ಕಸಬಾ ಗ್ರಾಮದ ಬಸವನಗುಡಿ ಎಂಬ ಹಳ್ಳಿಪ್ರದೇಶ ದಲ್ಲಿರುವ ಶಾಲೆಯಿದು. ಚಿನ್ಮಯಿ ಮನೆಯೂ ಹಳ್ಳಿಯಲ್ಲೇ ಇದೆ. ಕೃಷಿ ಕುಟುಂಬ. ಚಿನ್ಮಯಿಯ ಸಾಧನೆಯಿಂದ ಕುಟುಂಬ, ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ, ಶಿಕ್ಷಕೇತರ ವೃಂದದವರ ಸಂಭ್ರಮ ಮುಗಿಲು ಮುಟ್ಟಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಶಾಲೆಗೆ ತೆರಳಿ, ಚಿನ್ಮಯಿ ಅವರಿಗೆ ಅಭಿನಂದಿಸಿ, ಶುಭ ಹಾರೈಸಿದ್ದಾರೆ.
ಪ್ರಾಂಶುಪಾಲರ, ಶಿಕ್ಷಕರ ಮತ್ತು ಹೆತ್ತವರ ಪ್ರೋತ್ಸಾಹದಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಓದಲು ಯೋಚಿಸಿದ್ದೇನೆ. ಪಿಸಿಎಂಸಿ ಆಯ್ಕೆ ಮಾಡಿಕೊಳ್ಳುತ್ತೇನೆ. ಮುಂದೆ ಸಂಶೋಧನೆ ನಡೆಸುವ ಆಸಕ್ತಿಯಿದೆ.
– ಚಿನ್ಮಯಿ