Advertisement

ಸಿಕ್ಕಲ್ಲೆಲ್ಲ ಬಿಲ್ಡಿಂಗ್‌ ಕಟ್ಟಿ ಹಸಿವು ನೀಗಿಸಿಕೊಳ್ಳೋಕ್ಕೆ ಆಗೋಲ್ಲ

01:10 AM Aug 06, 2017 | Harsha Rao |

ನನ್ನ ತೋಟದ ಪಕ್ಕ ಮೂರು ಎಕರೆ ಜಮೀನಿದೆ. ಅದರಲ್ಲಿ ಅಣ್ಣ ತಮ್ಮಂದಿರು ಸೇರಿ ಹತ್ತಿ ಬೆಳೀತಾರೆ. ಮಳೆಯಾಧಾರಿತ ಕೃಷಿ ಅವರದು. ವರ್ಷಕ್ಕೆ 6 ತಿಂಗಳು ವ್ಯವಸಾಯ. ಇನ್ನುಳಿದಂತೆ ಹೊರಗಡೆ ಭೂಮೀಲಿ ಕೂಲಿ ಮಾಡುತ್ತಾರೆ. ಒಂದು ದಿನ ಹರಟೆಯ ಮಧ್ಯೆ “ಒಳ್ಳೇ ಲಾಭ ಸಿಕ್ತಿದೆ ಸಾರ್‌’ ಅಂದರು. ಎಷ್ಟು ಎಂದೆ.
“ವರ್ಷಕ್ಕೆ ಒಂದು ಲಕ್ಷ ಇಪ್ಪತ್ತು ಸಾವಿರ’ ಅಂದರು.   

Advertisement

“ಎಲ್ಲಿ ಬನ್ನಿ’ ಅಂತ ಬಿತ್ತನೆ ಬೀಜದ ಖರ್ಚು ಹಾಕಿ, ಬಿತ್ತನೆ ಕೆಲಸದವರ ಖರ್ಚು ಹಾಕಿ, ಮೊದಲ ಸಲ, ಎರಡನೇ ಸಲ ಮೆಡಿಸನ್‌ ಹೊಡೆಯೋಕೆ ಮಾಡಿದ ಖರ್ಚು, ಬೆಳೆ ಕೊಯ್ಲು ಮಾಡಿದ್ದು, ತಗೊಂಡು ಹೋಗಿ ಮಾರ್ಕೆಟ್‌ಗೆ ಹಾಕಿದ್ದು ಹೀಗೆ ಎಲ್ಲಾ ಖರ್ಚುಗಳೆನ್ನಲ್ಲ ಒಂದು ಕಡೆ ಕೂಡುಹಾಕಿದರೆ ಒಟ್ಟು 98 ಸಾವಿರ ಕೈಕಟ್ಟಿ ನಿಂತುಕೊಂಡಿತು. ದುಡಿಯುವ ಅವರ ಹೆಂಡತಿ, ಮಕ್ಕಳು ಎಲ್ಲರದ್ದೂ ಸೇರಿಸಿದರೆ ತಿಂಗಳ ಆದಾಯ ತಲಾ ಎರಡು ಸಾವಿರ ಕೂಡ ದಾಟಲಿಲ್ಲ. ಅವರ ತಲೆಯಲ್ಲಿ ಖರ್ಚು ಜಮೆಯೇ ಆಗಿರಲಿಲ್ಲ. ಬರೀ ಆದಾಯದ ಕಡೆ ಕಣ್ಣು ನೆಟ್ಟು, ಅದನ್ನು ನಂಬಿ ಅಲ್ಲಿ ಸಾಲ, ಇಲ್ಲಿ ಸಾಲ, ಎಲ್ಲೆಲ್ಲೋ ಸಾಲ ಮಾಡುತ್ತಿದ್ದರು. ಕೇಳಿದರೆ, “ಆ ದುಡ್ಡು ಬರುತ್ತಲ್ಲಾ’ ಅನ್ನೋ ಹುಂಬು ಧೈರ್ಯ. 

“ಅಲ್ಲ, ಇಷ್ಟು ಲಾಭಕ್ಕೆ ವರ್ಷವೆಲ್ಲಾ ಕಷ್ಟ ಪಡ್ತೀರಿ. ಸೀಜನ್‌ ಬೆಳೆಗಳನ್ನು ಬೆಳೀಬಾರ್ದಾ?’ ಅಂದೆ. ಅವರ ಮುಖವೇ ಆಶ್ಚರ್ಯ ಸೂಚಕ ಚಿಹ್ನೆ ಆಗಿಬಿಡೋದಾ!

ನನಗೆ ಆಗ ತಟಕ್ಕನೆ ನೆನಪಾಗಿದ್ದು ದೇವನೂರು ಮಹದೇವ.  ಒಂದು ಸಲ ಅವರು ಹೋಗ್ತಾ ಇರಬೇಕಾದರೆ ಮೈಸೂರು ಹೆದ್ದಾರಿಯ ಸರ್ಕಲ್‌ವೊಂದರ ಅಂಚಿನಲ್ಲಿ ಒಂದಷ್ಟು ಜನರ ಗುಂಪು ನಿಂತಿತ್ತಂತೆ. “ಯಾರವರು?’ ಅಂತ ದೇವನೂರರು ವಿಚಾರಿಸಿದಾಗ. ಕೂಲಿಯವರು ಅನ್ನೋ ಉತ್ತರ ಸಿಕ್ಕಿದೆ. ಇಷ್ಟಕ್ಕೆ ಬಿಡಲಿಲ್ಲ. ಹತ್ತಿರಕ್ಕೆ ಹೋಗಿ ನೋಡಿದ್ದಾರೆ. ಆಗ ಗೊತ್ತಾದದ್ದು ಕೂಲಿಯವರಲ್ಲ, ರೈತರು ಅಂತ. ದೇವನೂರರಿಗೆ ದೊಡ್ಡ ಶಾಕ್‌. ಅನ್ನ ಹಾಕೋರೇ ಬೇರೆಯವರ ಹತ್ತಿರ ಗಂಜಿ ಕೇಳ್ತಾ ಇದ್ದಾರಲ್ಲಪ್ಪಾ ಅಂತ.  

ನನ್ನ ಪಕ್ಕದ ತೋಟದ ಈ ರೈತದ್ವಯರನ್ನು ನೋಡಿದಾಗಲೆಲ್ಲಾ ರೈತರು ಕೂಲಿಗಳಾಗುತ್ತಿರುವ ದುರಂತವೂ, ದೇವನೂರರ ಈ ಮಿಡಿತವೂ ಒಟ್ಟೊಟ್ಟಿಗೆ ನೆನಪಾಗಿ ಮರುಕಳಿಸಿಬಿಡುತ್ತದೆ.  

Advertisement

ಇವತ್ತು ಕೃಷಿ ಹವಾಮಾನದೊಂದಿಗಿನ ಜೂಜಲ್ಲ; ಮಧ್ಯವರ್ತಿಗಳೊಂದಿಗಿನ ಗೇಮು. ಇದೂ ಒಂಥರ ಸಿನಿಮಾ ಇದ್ದ ಹಾಗೆ. ಒಳ್ಳೇ ಸಿನಿಮಾ ತೆಗೆಯೋದು ದೊಡ್ಡದಲ್ಲ, ಸರಿಯಾದ ಟೈಮಿಗೆ ರಿಲೀಸು ಮಾಡೋದು ದೊಡ್ಡದು. ಹಾಗೇ ಒಳ್ಳೇ ಬೆಳೆ ತೆಗೆಯೋದು ದೊಡ್ಡದಲ್ಲ, ಅದನ್ನು ಸರಿಯಾದ ಟೈಮಿಗೆ ಮಾರ್ಕೆಟ್‌ಗೆ ಹಾಕಬೇಕು. ರೈತ ಬೆಳೆಯೋದಷ್ಟೇ ನನ್ನ ಕೆಲಸ ಅಂತ ಬೌಂಡರಿ ಹಾಕ್ಕೊಂಡು ಬದುಕೋಕೆ ಆಗೋಲ್ಲ. ಅವನೊಳಗೆ ಒಬ್ಬ ಒಳ್ಳೆ ಮಾರ್ಕೆಟಿಂಗ್‌ ಮ್ಯಾನೇಜರ್‌, ಅಕೌಂಟೆಂಟ್‌, ಹವಾಮಾನ ತಜ್ಞ ಕೂಡ ಇರಬೇಕಾಗುತ್ತೆ. ಇಂದಿನ ತುರ್ತು ಇದು.   ಪರಿಸ್ಥಿತಿ ಹೇಗಿದೆ ಅಂದರೆ, ರೈತ ಹಾಗಲಕಾಯಿ ಬೆಳೆದ ಎಂದರೆ ಬೆಳಗ್ಗೆ ನಾಲ್ಕಕ್ಕೆ ಎದ್ದು, ಕಿತ್ತು, ಟೆಂಪೋ ಹಿಡಿದು ನೀಟಾಗಿ ಜೋಡಿಸಿಕೊಂಡು, ಫ್ರೆಶ್‌ ಆಗಿ ಮಾರುಕಟ್ಟೆ ಮುಂದೆ ನಿಂತರೆ- 15ರೂ. ಬೆಲೆ ಇದ್ದದ್ದು 10ರೂ.ಗೂ ಕೇಳ್ಳೋನಿರಲ್ಲ.  ನಿದ್ದೆಗೆಟ್ಟು, ಒದ್ದಾಡಿ ತಂದದ್ದಕ್ಕೆ ಇಷ್ಟೇನಾ ಬೆಲೆ? ಹಾಗಾದರೆ ರೈತ ಯಾರಿಗೆ ಅಂತ, ಏತಕ್ಕೆ ಅಂತ ಬೆಳೀಬೇಕು? ಇಂಥ ಪ್ರಶ್ನೆಗಳು ರೈತರಲ್ಲಿ ಬೀಜವಾಗಿರದೇ ಹೆಮ್ಮರವಾಗಿವೆ. ಅದಕ್ಕೇ ಇವತ್ತು ಹುಲಿ, ಸಿಂಹಗಳಂತೆ ವಿನಾಶದ ಅಂಚಿನಲ್ಲಿರುವ “ತಳಿ’ ಎಂದರೆ ಅದು ಈ ರೈತ.  

ಮುಂದಿನ ಗತಿ ಏನಪ್ಪಾ?
ಇರೋದು ಒಂದೇ ದಾರಿ. ರೈತೋ ರಕ್ಷತಿ ರಕ್ಷಿತಃ. ಅವರನ್ನು ನಾವು ರಕ್ಷಿಸಿದರೆ, ನಮ್ಮನ್ನು ಅವರು ರಕ್ಷಿಸುತ್ತಾರೆ. ಮುಂದಿನ ಪೀಳಿಗೆ ಇದನ್ನ ಅರ್ಥ ಮಾಡಿಕೊಳ್ಳಬೇಕು. ಉಳಿಸಿಕೊಳ್ಳುವುದು ಅಂದರೇನು? ಇದಕ್ಕೊಂದು ಐಡಿಯಾ ಇದೆ.   ನಿಮ್ಮೂರಲ್ಲಿ 500 ಮನೆಗಳಿರೋ ಅಪಾರ್ಟ್‌ಮೆಂಟ್‌ ಇದೆ ಅಂತಿಟ್ಟುಕೊಳ್ಳಿ.  ಅವರು ಡಿಸೈಡ್‌ ಮಾಡಿದರೆ ಒಂದು ಹಳ್ಳಿàನ್ನೇ ದತ್ತು ತಗೋಬಹುದು. ಅದು ಹೇಗೆ ಅಂತ ಹೇಳ್ತೀನಿ. ನಿಮ್ಮ ಮನೆಯಲ್ಲಿ ಹೂವು, ಹಾಲಿನ ವರ್ತನೆ ಮಾಡಿಕೊಳ್ಳುತ್ತೀರಲ್ಲ,  ಅದೇ ರೀತಿ. ನಿಮ್ಮ ಅಪಾರ್ಟ್‌ಮೆಂಟ್‌ ವಾಸಿಗರ ದೈನಿಕ ಅಗತ್ಯವನ್ನು ಲೆಕ್ಕ ಮಾಡಿ, ಒಂದು ಹಳ್ಳಿಯಲ್ಲಿ ಏನೇನು ಬೆಳೆಯುತ್ತಿದ್ದಾರೆ ನೋಡಿ, ನಿಮಗೆ ಅದರಲ್ಲಿ ಏನೇನು ಬೇಕು ಗಮನಿಸಿ. ಇಷ್ಟು ದುಡ್ಡು ಕೊಡುತ್ತೇವೆ ತಂದು ಹಾಕಿ ಅಂತ ಹೇಳಿ. ಆಗ ಲಾಭವೆಲ್ಲವೂ ರೈತನಿಗೆ; ನಿಶ್ಚಿತ ಆದಾಯ ಗುರುತಾಗುತ್ತದೆ. ಮಧ್ಯವರ್ತಿಗಳ, ಬೆಲೆ ಏರುಪೇರಿನ ಭಯ ಇರೋದಿಲ್ಲ. ಬೆಂಗಳೂರಿನಲ್ಲಿ ಸಾವಿರಾರು ಸಮುತ್ಛಯಗಳಿವೆ ಅಲ್ವೇ? ಹಾಗಾದರೆ, ಅವು ಎಷ್ಟು ಹಳ್ಳಿಗಳನ್ನು ದತ್ತು ತಗೋಬಹುದೋ ಲೆಕ್ಕ ಹಾಕಿ?! 
**
ಕೃಷಿ ಅನ್ನೋದು ಬದುಕುವ ಕ್ರಮ. ಅದನ್ನು ಕಮರ್ಷಿಯಲ್ಲಾಗಿ ಏಕೆ ನೋಡ್ತೀರಾ? ಹೀಗೆ ನೋಡೋಕೆ ಶುರುವಾದ ಮೇಲೆ ಒತ್ತಡಗಳು ಜಾಸ್ತಿಯಾಗಿದ್ದು; ಮಾಫಿಯಾಗಳು ಹುಟ್ಟಿದ್ದು. ರೈತ ಬೆಳೆದಷ್ಟೇ ಸಾಕು ನಮಗೆ. ಹಸುವನ್ನೇ ತಗೊಳ್ಳಿ.  ಹಸು ಏನು ಹಾಲು ಕೊಡುವ ಮಿಷನ್ನಾ? ನೀವು ಜಿಮ್‌ಗೆ ಹೋಗಬೇಕು, ಆರೋಗ್ಯವಾಗಿರಬೇಕು ಅಂತ ದಿನಕ್ಕೆ 4 ಲೀಟರ್‌ ಹಾಲು ಕುಡಿಯೋಕೆ ಶುರುಮಾಡಿದರೆ ಯಾರ ತಪ್ಪು ಅದು? ಹಳ್ಳಿಗಳಲ್ಲಿ ಹಾಲನ್ನು ಏತಕ್ಕೆ ಬಳಸ್ತಾರೆ ಹೇಳಿ? ಮೊಸರು, ಮಜ್ಜಿಗೆ ಮಾಡೋಕೆ ಸ್ವಲ್ಪ ಹೆಪ್ಪಾಕ್ತಾರೆ. ಅದು ಬಿಟ್ಟರೆ ಹಬ್ಬಗಳಲ್ಲಿ ಸ್ವಲ್ಪ ಜಾಸ್ತಿ ಬಳಸ್ತಾರೆ ಅಲ್ವಾ? ಆದರೆ ನಾವು? ಸಿಕ್ಕಾಪಟ್ಟೆ ಬಳಸೋದರಿಂದಲೇ ಇರುವ ಹಸುಗಳಲ್ಲೇ ಹೆಚ್ಚೆಚ್ಚು ಹಾಲು ಹಿಂಡುತ್ತಿರುವುದು.   

ಇಷ್ಟೇ ಅಲ್ಲ, ರೈತನಿಗೆ ಆಂತರಿಕ, ಬಾಹ್ಯ ಒತ್ತಡಗಳು ಜಾಸ್ತಿ. ಸಾಲದ ಒತ್ತಡ. ಹೆಂಡತೀನ ಆಸ್ಪತ್ರೆಗೆ ಸೇರಿಸಬೇಕು ಅನ್ನೋ ಒತ್ತಡ, ಮಕ್ಕಳನ್ನು ಓದಿಸಬೇಕು ಅನ್ನೋ ಒತ್ತಡ. ಅವರ ಮಗನನ್ನು ಪೇಟೆಯಲ್ಲಿ ಓದಿಸ್ತಾರೆ, ನನ್ನ ಮಗನ್ನೂ ಅಲ್ಲೇ ಓದಿಸಬೇಕು. ಇಲ್ಲಾಂದರೆ ಜೀವನದಲ್ಲಿ ಮುಂದೆ ಬರೋಲ್ಲ ಅನ್ನೋ ಒತ್ತಡ-  ಇದನ್ನು ಯಾರು ಹೇಳಿದರು ಇವರಿಗೆ? ನಾವೇ ಸೃಷ್ಟಿ ಮಾಡಿದ್ದು. 

ಸುಮ್ಮನೆ ನೋಡಿ. ಈ ರೈತ ಸಂಕುಲಕ್ಕೆ ಸಮಾಜದಲ್ಲಿ ಏನಾದರು ಕಿಲುಬುಗಾಸಿನ ಗೌರವ ಇದೆಯಾ ? ಅಂತ. ನಮ್ಮಪ್ಪ ರೈತ ಅಂತ ಎದೆ ಮುಟ್ಟಿಕೊಂಡು ಹೇಳ್ಳೋಕೆ ಆಗ್ತಿದೆಯಾ? ಇಲ್ಲ. ನಾವ್ಯಾರೂ ರೈತನಿಗೆ ಬೆಲೇನೇ ಕೊಡ್ತಿಲ್ಲ. ಆದರಿಸುವುದೂ ಇಲ್ಲ.  ಹೀಗಾಗಿ ಅವನಿಗೆ ಆತ್ಮ ಗೌರವ ಅನ್ನೋದೇ ಇಲ್ಲ. ರೈತನ ಮಗ ರೈತನಾಗ್ತಿಲ್ಲ ಗೊತ್ತಿದೆಯಾ? “ಅರೆ, ಅದೇನು ಮಹಾ, ಡಾಕ್ಟರ್‌ ಮಗನೂ, ಎಂಜಿನಿಯರ್‌ ಮಗನ ಹಾಗೇನೇ’ ಅಂತನ್ನಬಹುದು ನೀವು. ನಿಜ, ಆ ಉದ್ಯೋಗಕ್ಕೆ ಬೇರೆಯವರನ್ನು ಸೆಳೆಯೋ ತಾಕತ್ತಿದೆ. ಆದರೆ ಕೃಷಿಗೆ ಅದಿಲ್ಲವೇ? ಯಜಮಾನನಿಗೆ ಮನೆಯಲ್ಲೇ ಗೌರವವಿಲ್ಲದಾಗ ಪಕ್ಕದ ಮನೆಯವರು ಕೊಡುತ್ತಾರೇನು?  ರೈತ ಐದು ವರ್ಷಕ್ಕೊಂದು ಬಾರಿ ವೋಟು ಹಾಕೋ ಮಷೀನು ರೀ. ಅಪ್ಪ ತೋಟದಲ್ಲಿ ಕೆಲಸ ಮಾಡೋದನ್ನು ಬಿಟ್ಟು ಮೈದಾನದಲ್ಲಿ ಹುಚ್ಚು ಖೋಡಿ ಮನಸ್ಸುಗಳ ಭಾಷಣಕ್ಕೆ ಚಪ್ಪಾಳೆ ಹಾಕುತ್ತಿದ್ದರೆ ಮಗನಿಗೆ ಏನನಿಸಬೇಡ? ಅದಕ್ಕೇ ಬರ ಅನ್ನೋದು ರಾಜಕೀಯಕ್ಕೆ ರೈತರನ್ನು ಸರಬರಾಜು ಮಾಡುವ ಸಪ್ಲೆ„ಯರ್‌ ಆಗಿರೋದು.   

ಇವತ್ತು ಕಣ್ಣಿಗೆ ಕಾಣೋ ಲೋಕಲ್‌ ರೌಡಿಗಳಿಲ್ಲ; ಆ ಜಾಗದಲ್ಲಿ ಕಂಪೆನಿಗಳಿವೆ.  ಎಷ್ಟೋ ರೈತರ ಮಕ್ಕಳು ಟ್ಯಾಕ್ಸಿ ಡ್ರೈವರ್‌ಗಳು, ಸೇಲ್ಸ್‌ ರೆಪ್ರಸೆಂಟೇಟೀವ್‌ಗಳಾಗಿದ್ದಾರೆ. ಒಬ್ಬ ಬೇರೆಯವರ ಮನೆಗೆ ವಿಷ ಮಾರುತ್ತಿದ್ದರೆ, ಅವನ ಮನೆಗೆ ಇನ್ನೊಬ್ಬ ವಿಷ  ಮಾರುತ್ತಿರುತ್ತಾನೆ. ಅನ್ನ ಇಕ್ಕುವ ಕೈಗಳು ವಿಷ ಮಾರೋಕೆ ನಿಂತಿವೆ ಎಂದರೆ ಎಂಥ ದುರಂತ ಸ್ಥಿತಿ ನಮ್ಮದು. ಕಮರ್ಷಿಯಲ್‌ ಅಂದರೇನೆ ಹೀಗೆ. ಮಾಫಿಯ ಇರಬೇಕು, ದಂಧೆಯಾಗಬೇಕು. ಈ ಮಾಫಿಯಾಗಳಿಂದ ರೈತನಿಗೆ ಲಾಭ ಏನಿದೆ ಹೇಳಿ?

ಈಗಂತೂ ಆರ್ಗಾÂನಿಕ್‌ ಜಪ ಶುರುವಾಗಿದೆ. ಇದನ್ನು ಸರ್ಟಿಫೈ ಮಾಡೋರು ಯಾರು? ಅದನ್ನು ನಂಬೋದು ಹೇಗೆ? ಆಯ್ತು, ಈ ಪದ್ಧತಿಯಲ್ಲಿ ಬೆಳೆದ ರೈತನಿಗೆ ಲಾಭಾಂಶ ಸರಿಯಾಗಿ ಹೋಗುತ್ತಿದೆಯೇ? ಇಲ್ನೋಡಿ. ಶಿರಸಿಯಿಂದ 30ರೂ.ಗೆ ಅಕ್ಕಿ ತಂದು ಇಲ್ಲಿ 70ರೂ.ಗೆ ಮಾರುತ್ತಾರೆ. ಭತ್ತ, ಬೆಳೆದ ಖರ್ಚು ಕೆ.ಜಿಗೆ 25ರೂ. ಅಂದರೂ 5 ರೂ. ಲಾಭ ಅವನಿಗೆ. ಅದನ್ನು ಬೆಂಗಳೂರಿಗೆ ತಂದು ಮಾರುವ ಮಧ್ಯವರ್ತಿಗೆ 40ರೂ. ಲಾಭ ! ದುಡ್ಡು ಹಾಕಿ, ಬೆವರು ಸುರಿಸಿ, ಕಣ್ಣಿಗೆ ಹರಳೆಣ್ಣೆ ಬಿಟ್ಟುಕೊಂಡು ಬೆಳೆದ ರೈತನಿಗೆ ಇಲ್ಲೂ ಮೋಸ. ನಮ್ಮಲ್ಲಿ ಏನಾಗಿದೆ ಎಂದರೆ ಬೆಳೆಯದೆ ಕೊಂಡು ತಿನ್ನದೇ ಇರೋ ವರ್ಗ ಇದೆಯಲ್ಲ ಅದನ್ನು ಬೆಳೆಸೋ ಕೆಲ್ಸ ಮಾಡ್ತಾ ಇದ್ದೀವಿ.  ಎಲ್ಲದಕ್ಕೂ ಕಾರಣ ಮನುಷ್ಯನ ತೆವಲು.

ತೆವಲಿಗೆ ಬೆಸ್ಟ್‌ ಉದಾಹರಣೆ ಈ ಚಹ.  ಟೀ ಇಲ್ಲದೇ ಎಷ್ಟೋ ಶತಮಾನಗಳು ಜೀವಿಸಿದ್ದೀವಿ. ಇವತ್ತು ಹೇಗಾಗಿದೆ ಅಂದರೆ ಟೀ ಇಲ್ಲದೇ ಬದುಕೋಕೆR ಆಗೋಲ್ಲ ಅನ್ನೋ ಭ್ರಮೆಯೇ ನೆಪವಾಗಿ, ಗಲ್ಲಿಗೆ ನಾಲ್ಕು ಟೀ ಸ್ಟಾಲ್‌ ಹುಟ್ಟಿವೆ. ಗಂಟೆಗೆ ಮೂರು ಸಲ ಟೀ ಹೀತೇìವೆ. ಈ ತೆವಲಿನ ಲಾಭ ಯಾರಿಗೆ? ಕಂಪೆನಿಗೆ. ಯಾವುದೋ ಟೀ. ಕಂಪೆನಿ ಸಮೃದ್ಧವಾಗಿದ್ದ ನಮ್ಮ ಗುಡ್ಡಗಳ ತಲೆ ಬೋಳಿಸಿ, ಅಲ್ಲಿ ಟೀ ಗಿಡಗಳನ್ನು ನೆಟ್ಟು, ಎಸ್ಟೇಟ್‌ ಮಾಡಿ, ಮರಗಳಿಗೆ ಹುಳ ಹಿಡೀಬಾರದು ಅಂತ ರಾಸಾಯನಿಕ ಸಿಂಪಡಿಸಿ, ಅದರಿಂದ ಹರಿಯುವ ನೀರ ಮೂಲಕ ಭೂಮಿಗೆ ವಿಷ ಇಂಗಿಸಿ, ಪ್ರಕೃತಿಯನ್ನು ಹಾಳು ಮಾಡಿ, ಮೋನೋಕಲ್ಚರ್‌ ನಾಂದಿ ಹಾಡಿದ್ದರಿಂದಲೇ ಇವತ್ತು ನಾವೆಲ್ಲಾ ಟೀ ಜೊತೆಗೆ ವಿಷವನ್ನೂ “ಫ್ರೀ’ಯಾಗಿ ಕುಡಿಯುತ್ತಿರುವುದು. ಸತ್ಯ ಏನೆಂದರೆ, ಮನುಷ್ಯ ಪ್ರಕೃತಿಯನ್ನ ಹಾಳುಗೆಡವಬಹುದು. ಆದರೆ ಪ್ರಕೃತಿಗೇನು ಆಗೋಲ್ಲ. ಆ ನಂತರ ಅದರ ಮರುಹುಟ್ಟಾಗುತ್ತದೆ. ನಾಶವಾಗುವ ಮನುಷ್ಯನ ಮರುಹುಟ್ಟು ಆಗುತ್ತಾ? 
ಭವಿಷ್ಯ ಹೀಗೇ ಇರೋಲ್ಲ. ಇವತ್ತು ರೈತನಿಗೆ ಕೊಡಬೇಕಾದ ಮರ್ಯಾದೆ ಕೊಡಲಿಲ್ಲ ಅಂದರೆ, ಅವನನ್ನು ನಾವು ಉಳಿಸಿಕೊಳ್ಳದೇ ಹೋದರೆ ಇಬ್ಬರೂ ಅಳೀತೀವಿ. ದೇವನೂರರ ಆತಂಕ ಎಲ್ಲರ ಎದೆಗೂ ಬೀಳುತ್ತದೆ. ಭೂಮಿಗೆ ಬೆಲೆ ಬಂದಿರಬಹುದು; ರೈತನಿಗಲ್ಲ. ಬೆಲೆ ಇದೆ ಅಂತ ಸಿಕ್ಕ, ಸಿಕ್ಕ ಕಡೆ ಬಿಲ್ಡಿಂಗ್‌ ಕಟ್ಟಿ ಹಸಿವನ್ನು ನೀಗಿಸಿಕೊಳ್ಳೋದಕ್ಕೆ ಆಗೋಲ್ಲ. ಅಲ್ವೇ?

– ಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next