“ನಾನು ಪ್ರಾಮೀಸ್ ಮಾಡಿ ಹೇಳ್ತೀನಿ ಸಾರ್… ತೆಲುಗು, ತಮಿಳು ಇಂಡಸ್ಟ್ರಿ ಮಂದಿ ಮಲ್ಟಿಪ್ಲೆಕ್ಸ್‌ನಲ್ಲಿ ನಮ್ ಸಿನಿಮಾ ನೋಡಿದರೆ, ಕನ್ನಡದಲ್ಲಿ ಇಂಥಾ ಸಿನಿಮಾ ಬಂದಿದೆಯಾ ಅನ್ನೋದು ಗ್ಯಾರಂಟಿ. ಅಂಥಾ ಚಿತ್ರ ಇದಾಗಲಿದೆ…’ ಅಂದು ನಿರ್ದೇಶಕ ರಾಘವಾಂಕ ಪ್ರಭು ತುಂಬ ವಿಶ್ವಾಸದಿಂದಲೇ ಈ ಮಾತನ್ನು ಒತ್ತಿ ಒತ್ತಿ ಹೇಳಿಕೊಂಡರು. ಅವರಿಗೆ ಸಿನಿಮಾ ರಂಗ ಹೊಸದು. “ಇದಂ ಪ್ರೇಮಂ ಜೀವನಂ’ ಎಂಬ ಸಿನಿಮಾ ಕೂಡ ಮೊದಲ ಅನುಭವ.
ಅದು ಮೊದಲ ಪತ್ರಿಕಾಗೋಷ್ಠಿಯೂ ಹೌದು. ಹಾಗಾಗಿ, ಒಂದಷ್ಟು ಆತ್ಮವಿಶ್ವಾಸದಿಂದಲೇ ತಮ್ಮ ಚೊಚ್ಚಲ ಚಿತ್ರದ ಕುರಿತು ಹೇಳುತ್ತಾ ಹೋದರು ನಿರ್ದೇಶಕರು. “ಶೀರ್ಷಿಕೆ ಕೇಳಿದಾಗ ಹೊಸ ಸೌಂಡಿಂಗ್ ಅನಿಸುತ್ತೆ. ಇದು ಸಂಸ್ಕೃತ ಪದ. ಜಗತ್ತಿನಲ್ಲಿರೋದು ಪ್ರೀತಿ ಮತ್ತು ಜೀವನ. ಅದರ ಆಪ್ತತೆ ಅರಿತು, ವಾಸ್ತವ ಅಂಶಗಳನ್ನಿಟ್ಟುಕೊಂಡು ಚಿತ್ರ ಮಾಡಿದ್ದೇನೆ.
ಒಂದಂತೂ ನಿಜ, ಇಲ್ಲಿ ಕಣ್ಣುಗಳು ಒದ್ದೆಯಾಗುತ್ತವೆ. ಮನಸು ಭಾರವಾಗುತ್ತೆ, ಮುಖದಲ್ಲಿ ಮಂದಹಾಸವೂ ಬೀರುತ್ತೆ. ಅಂತಹ ಸೂಕ್ಷ್ಮತೆಯ ಅಂಶಗಳು ಇಲ್ಲಿವೆ. ಅಪ್ಪ-ಅಮ್ಮ ಫಸ್ಟ್, ಪ್ರೀತಿ-ಪ್ರೇಮ ನೆಕ್ಸ್ಟ್ ಎಂಬ ಸಾರಾಂಶ ಈ ಚಿತ್ರದಲ್ಲಿದೆ. ಬೆಂಗಳೂರು, ಮಂಡ್ಯ, ದೇವನಹಳ್ಳಿ, ಗುಡಿಬಂಡೆ ಸುತ್ತಮುತ್ತ ಮೂರು ಹಂತದಲ್ಲಿ ಸುಮಾರು 45 ದಿನಗಳ ಚಿತ್ರೀಕರಣ ಮಾಡಿದ್ದಾಗಿ ವಿವರ ಕೊಟ್ಟರು ನಿರ್ದೇಶಕರು.
ಸನತ್ ಚಿತ್ರದ ಹೀರೋ. “ಇಲ್ಲಿ ತಂದೆ, ತಾಯಿ ಪ್ರೀತಿಗಿಂತ ಯಾವುದೂ ದೊಡ್ಡದ್ದಲ್ಲ ಎಂಬ ವಿಷಯ ಮೇಲೆ ಕಥೆ ಮೂಡಿಬಂದಿದೆ. ಅಭಿಮನ್ಯು ಎಂಬ ಪಾತ್ರ ಮಾಡಿದ್ದೇನೆ. ನನಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ. ಆದರೂ, ನಿರ್ದೇಶಕರು ಹೀರೋ ಅವಕಾಶ ಕೊಟ್ಟಿದ್ದಾರೆ. ಅದು ಪ್ರತಿಭೆಗೆ ಸಿಕ್ಕ ಫಲ ಅಂದುಕೊಂಡಿದ್ದೇನೆ. ಪ್ರತಿಯೊಬ್ಬರ ಶ್ರಮದಿಂದಾಗಿ ಒಳ್ಳೆಯ ಔಟ್‌ಪುಟ್ ಸಿಕ್ಕಿದೆ.
ನನ್ನ ಬದುಕಿನಲ್ಲಿ ಇಂಥದ್ದೊಂದು ಚಿತ್ರ ಸಿಗುತ್ತೆ ಅಂತ ಭಾವಿಸಿರಲಿಲ್ಲ. ನಿಮ್ಮೆಲ್ಲರ ಸಹಕಾರ ನಮಗಿರಲಿ’ ಅಂದರು ಸನತ್. ಹುಬ್ಬಳ್ಳಿ ಹುಡುಗಿ ಶನಾಯ ಕಾಟೆ³ ಚಿತ್ರದ ನಾಯಕಿ. ಅವರಿಗೆ ಇದು ದೊಡ್ಡ ಅವಕಾಶವಂತೆ. ತಂದೆ, ತಾಯಿಯನ್ನು ಅತಿಯಾಗಿ ಪ್ರೀತಿ ಮಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇಡೀ ಚಿತ್ರದ ಕಥೆ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತೆ. ಅಷ್ಟರಮಟ್ಟಿಗೆ ನಿರ್ದೇಶಕರು ಕೆಲಸ ಮಾಡಿದ್ದಾರೆ.
ಎಲ್ಲರ ಸಹಕಾರದಿಂದ ನಾನು ಕ್ಯಾಮೆರಾ ಮುಂದೆ ಧೈರ್ಯವಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಅಂದರು ಕಾಟೆ³. ಗೋಕುಲ್ ಮತ್ತು ನವೀನ್ ಚಿತ್ರದ ನಿರ್ಮಾಪಕರು. ಇವರಿಬ್ಬರೂ, ನಿರ್ದೇಶಕರ ಗೆಳೆಯರು. ಒಂದೇ ಕಾಲೇಜಿನಲ್ಲಿ ಓದಿದ್ದ ಅವರು ನಿರ್ದೇಶಕರ ಕಥೆ ಒಪ್ಪಿ, ಹಣ ಹಾಕಿದ್ದಾರೆ. ಅದರಲ್ಲೂ ಸಿನಿಮಾ ಮೇಲೆ ಎಷ್ಟರಮಟ್ಟಿಗೆ ಪ್ರೀತಿ ಅಂದರೆ, ನಿರ್ಮಾಪಕರೊಬ್ಬರ ಪತ್ನಿಯ ಸೀಮಂತ ಸಮಾರಂಭ ವೇಳೆ, ಸಿನಿಮಾಗೆ ಐದು ಲಕ್ಷ ಹಣ ತುರ್ತು ಬೇಕಾಗಿತ್ತಂತೆ.
ಆಗ, ಪತ್ನಿಯ ಸೀಮಂತಕ್ಕೆ ಆಭರಣ ತರುವುದು ಮುಖ್ಯವೋ, ಸಿನಿಮಾ ಮುಖ್ಯವೋ ಎಂಬುದನ್ನು ಯೋಚಿಸದ ಅವರು, ಸಿನಿಮಾಗೆ ಹಣ ಕೊಟ್ಟು, ಪ್ರೀತಿ ತೋರಿದರಂತೆ. ಅದು ತಂಡದ ಖುಷಿಗೆ ಕಾರಣವೂ ಆಗಿದೆ. ಸಿರಿ ರಾಜು ಎಂಬ ಇನ್ನೊಬ್ಬ ನಟಿಗೂ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಉಳಿದಂತೆ ಚಿತ್ರದಲ್ಲಿ ಅವಿನಾಶ್, ಮಾಳವಿಕ, ಭಾವನಾ ಪ್ರೀತಂ, ದೀಪು, ರಾಮು, ಭರತ್, ನಾಗಾರ್ಜುನ್ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕ್ಯಾಮೆರಾ ಹಿಡಿದರೆ, ಕುಮಾರ್ ಸಂಕಲನ ಮಾಡಿದ್ದಾರೆ. ಜ್ಯೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ.
* ವಿಜಯ್ ಭರಮಸಾಗರ