ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 2013ರಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಪಕ್ಷ ನೀಡಿದ್ದ 165 ಭರವಸೆಗಳನ್ನು ಶೇ.99 ರಷ್ಟು ಈಡೇರಿಸಿದೆ. ಅದೇ ರೀತಿ ದೇಶದಲ್ಲಿ ನುಡಿದಂತೆ ನಡೆಯುತ್ತಿರುವ ಸರ್ಕಾರ ಯಾವುದಾದರೂ ಇದ್ದರೆ ಅದು ಕೇವಲ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿ ಬಿಸಲಹಳ್ಳಿಯಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಬುಧವಾರ ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಿ ಅವರು ಮಾತನಾಡಿದರು.
ಬಿಜೆಪಿ ಹುಸಿ ಭರವಸೆ: ಕೇಂದ್ರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅನೇಕ ಭರವಸೆಗಳು ಹುಸಿಯಾಗಿದೆ. ಪ್ರತಿ ಖಾತೆಗೆ 15 ಲಕ್ಷ ರೂ. ಹಾಕುವುದು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ, ಕಪ್ಪು ಹಣ ಪತ್ತೆ ಮಾಡುವುದನ್ನು ಬಿಜೆಪಿ ಸರ್ಕಾರ ಸಂಪೂರ್ಣ ಮರೆತಿದೆ. ರಾಜ್ಯ ಬಿಜೆಪಿ ನಾಯಕರು ಕೂಡ ಕಳೆದ ಬಾರಿ ಜನ ಅವರಿಗೆ ಅವಕಾಶ ಕೊಟ್ಟಾಗ ಏನು ಮಾಡಲಿಲ್ಲ. ಈಗ ನಾವೇ ಅಧಿಕಾರಕ್ಕೆ ಬರುತ್ತೇ ವೆಂದು ಹಗಲು ಕನಸು ಕಾಣುತ್ತಿದ್ದಾರೆಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ರೈತ ವಿರೋಧಿ: ಸತತ ನಾಲ್ಕೈದು ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ರಾಜ್ಯದ ರೈತರು ಸಹಕಾರ ಬ್ಯಾಂಕ್‌ಗಳಲ್ಲಿ ಮಾಡಿದ್ದ 50 ಸಾವಿರ ರೂ. ವರೆಗಿನ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿತು. ಇದರಿಂದ ಸರ್ಕಾರಕ್ಕೆ ಒಟ್ಟು 8,150 ಕೋಟಿ ರೂ. ಹೊರೆ ಆಯಿತು.
ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಹಿತ ಕಾಪಾಡಿದರು. ಆದರೆ, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿದ್ದ ಸಾಲವನ್ನು ಮನ್ನಾ ಮಾಡದೇ ನಾವು ರೈತ ವಿರೋಧಿಗಳು ಎಂಬುದನ್ನು ನಿರೂಪಿಸಿದೆ. ಹಿಂದೆ ಯುಪಿಎ ಸರ್ಕಾರದಲ್ಲಿ ಪ್ರಧಾನಿ ಮನಮೋಹನ ಸಿಂಗ್ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 70 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದರು. ಆದರೆ, ಈಗಿನ ಪ್ರಧಾನಿಗೆ ರೈತರ ಸಾಲ ಮನ್ನಾ ಏಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದರು. ಚುನಾವಣೆ ಸಂದರ್ಭದಲ್ಲಾದರೂ ಪ್ರಧಾನಿ ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡಿದರೆ ಅದನ್ನು ಪಕ್ಷಾತೀತವಾಗಿ ಸ್ವಾಗತಿಸುತ್ತದೆಯೆಂದರು.
ಲಕ್ಷ ಕೃಷಿ ಹೊಂಡ: ರೈತರು, ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಿ ಸಮಾಜದ
ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ಸರ್ಕಾರ 3 ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲ ನೀಡುತ್ತಿದೆ. ಜೊತೆಗೆ
ಲಕ್ಷಕ್ಕೂ ಅಧಿಕ ಕೃಷಿ ಹೊಂಡ ನಿರ್ಮಿಸಲಾಗಿದೆ ಎಂದರು.
24 ಸಂಘಗಳಿಗೆ 71.33 ಲಕ್ಷ ವಿತರಣೆ: ಬಿಸಲಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಒಟ್ಟು 24 ಸ್ತ್ರೀಶಕ್ತಿ ಸಂಘಗಳ ಮಹಿಳಾ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಒಟ್ಟು 71.33 ಲಕ್ಷ ರೂ. ಸಾಲದ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ವಿರೂಪಕ್ಷಗೌಡ, ಜಿಪಂ ಸದಸ್ಯ ಪಿ.ಎನ್.ಪ್ರಕಾಶ್, ಡಿಸಿಸಿ ಬ್ಯಾಂಕ್ ಹಿರಿಯ ನಿರ್ದೇಶಕರಾದ ಶ್ರೀರಾಮರೆಡ್ಡಿ, ಹನುಮೇಗೌಡ, ಹನುಂತರೆಡ್ಡಿ, ತಾಪಂ ಸದಸ್ಯರಾದ ಮೋಹನ್, ಬಾಲಕೃಷ್ಣ, ಮಾಜಿ ಜಿಪಂ ಸದಸ್ಯರಾದ ಜಗನ್ನಾಥ, ಮುಖಂಡರಾದ ಸುರೇಶ್, ಸುದರ್ಶನರೆಡ್ಡಿ, ಸುಬ್ಟಾರೆಡ್ಡಿ, ರಿಯಾಜ್, ಗೆಂಗಿರೆಡ್ಡಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನಾರಾಯಣಸ್ವಾಮಿ ಇತರರಿದ್ದರು.