Advertisement
ನಿನ್ನ ಸೂಜಿಗಲ್ಲಿನಂಥ ಕಣ್ಣುಗಳ ನೆನಪು ಸೂಜಿಯಂತೆ ಘಾಸಿಗೊಳಿಸುತ್ತಿವೆ. ವಿರಹದ ನೋವಿಗೆ ಬೆಳದಿಂಗಳ ಬೆಳಕು ತಂಪೆರಚುತ್ತದೆ ಎಂದುಕೊಂಡರೆ, ನಿನ್ನ ನೆನಪುಗಳು ಬ್ಯಾಂಡೇಜ್ ಪಟ್ಟಿಯಲ್ಲಿ ಅವಿತು ಕೂತು ಉಪ್ಪು ಸವರುತ್ತಿವೆ. ನಿನ್ನ ಮರೆಯಲು ಏನೆಲ್ಲಾ ಮಾಡಿದೆ. ಆದರೂ ಅಂತರಾತ್ಮದಲ್ಲಿ ನಿನ್ನ ನೆನಪುಗಳು ಗಟ್ಟಿಯಾಗಿ ಕುಳಿತಿವೆ. ಜಿಗಿದಷ್ಟು ಆಳ, ಮೊಗೆದಷ್ಟು ಒರತೆ, ಸುರಿದಷ್ಟು ಸೋನೆ, ಎಣಿಸಿದಷ್ಟು ನಕ್ಷತ್ರ, ಅಸಂಖ್ಯ ಅಲೆಗಳಂತೆ.. ನಿನ್ನ ನೆನಪುಗಳು. ಮೌನವಾಗಿ ಸೋಲೊಪ್ಪಿಕೊಳ್ಳಲೂ ಆಗದೆ, ನಿನ್ನ ನೆನಪುಗಳನ್ನು ಗೆಲ್ಲಲೂ ಆಗದೆ ಸಂದಿಗ್ಧ ವೇದನೆಯಲ್ಲಿದ್ದೇನೆ.
ನನ್ನೆದೆಯ ನೋವನ್ನು ಹರವಿಕೊಂಡು ಅನುಕಂಪ ಗಿಟ್ಟಿಸುವ ಮನಸ್ಸಿಲ್ಲ. ವಿರಹದಿಂದ ಅಳುತ್ತಿರುವ ಹೃದಯ ನಿನ್ನನ್ನು ನೋಡಲು ಹಪಹಪಿಸುತ್ತಿದೆ. ಕೊನೆಯ ಸಲ ನಿನ್ನನ್ನೊಮ್ಮೆ ನೋಡಿ, ಎದೆಯ ಭಾರವನ್ನು ಇಳಿಸಿ ಬಿಡುತ್ತೇನೆ. ಎಷ್ಟು ಕಷ್ಟವಾದರೂ ಸರಿ, ಪ್ರಯಾಸವಾದರೂ ಸರಿ. ನಿನ್ನನ್ನು ಮರೆತೇ ಮರೆಯುತ್ತೇನೆ. ಪ್ಲೀಸ್ ಒಮ್ಮೆ ಬಾ.. – ಹನುಮಂತ.ಮ.ದೇಶಕುಲಕರ್ಣಿ