Advertisement

ಎರಡೂ ಹುದ್ದೆ ನಿಭಾಯಿಸುವುದು ಕಷ್ಟ: ಬಿ.ಎಸ್‌. ಯಡಿಯೂರಪ್ಪ

11:02 PM May 05, 2019 | Team Udayavani |

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಮಾಡಲಾಗುತ್ತದೆ ಎಂಬ ಮಾತು ಚಾಲ್ತಿಯಲ್ಲಿರುವಾಗಲೇ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬಿಟ್ಟಿದ್ದು.

Advertisement

ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ. ವಿಧಾನಸಭೆ ವಿಪಕ್ಷ ನಾಯಕ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಎರಡನ್ನೂ ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದು ಕುತೂಹಲ ಮೂಡಿಸಿದೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆ ಫ‌ಲಿತಾಂಶದ ಬಳಿಕ ರಾಜ್ಯ ಸರ್ಕಾರ ಇರುವುದಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ.

ಮುಖ್ಯಮಂತ್ರಿ ಆಗುತ್ತೇನೆಂಬ ಕನಸನ್ನೂ ಹೊಂದಿಲ್ಲ. ಮೇ 23ರ ನಂತರ ರಾಜ್ಯದ ಮೈತ್ರಿ ಸರ್ಕಾರ ಪತನಗೊಳುತ್ತದೆ ಎಂದು ಇನ್ಮುಂದೆ ಬಿಜೆಪಿಯ ಮುಖಂಡರು ಹೇಳಿಕೆ ನೀಡಬಾರದು. ಗೃಹ ಸಚಿವ ಎಂ.ಬಿ. ಪಾಟೀಲ ಅವರ ಒತ್ತಡದ ಮೇರೆಗೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಕಿರುಕುಳ ಕೊಡುತ್ತಿದ್ದಾರೆ.

ಇದನ್ನು ಖಂಡಿಸಿ ರಾಜ್ಯಾದ್ಯಂತ ಮೇ 6ರಂದು ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಒಂದು ತಾಸು ಪ್ರತಿಭಟನೆ ನಡೆಸಲಾಗುವುದು ಎಂದರು. ಜೆಡಿಎಸ್‌ ವರ್ತನೆ ವಿರುದ್ಧ ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಶಾಸಕರು ಅಸಮಾಧಾನಗೊಂಡಿದ್ದಾರೆ. ಲೋಕಸಭೆ ಚುನಾವಣೆ ಫ‌ಲಿತಾಂಶ ಬಳಿಕ ಸಮ್ಮಿಶ್ರ ಸರ್ಕಾರ ಆಂತರಿಕ ಕಚ್ಚಾಟದಿಂದಲೇ ಪತನಗೊಳ್ಳಲಿದೆ.

ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಸಂಘಟಿತರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲಲಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

Advertisement

ಸಮ್ಮಿಶ್ರ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದ ಸಿಎಂ ಕುಮಾರಸ್ವಾಮಿ, ಋಣಮುಕ್ತ ಪತ್ರದ ಬದಲು ಸಾಂತ್ವನ ಪತ್ರ ನೀಡಲು ಮುಂದಾಗುವ ಮೂಲಕ ರೈತರಿಗೆ ವಂಚನೆ ಮಾಡಿದ್ದಾರೆ ಎಂದರು.

ಸಿದ್ದು ಬೊಗಳೆದಾಸ – ಗೋವಿಂದ ಕಾರಜೋಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೊಗಳೆದಾಸ. ತಮ್ಮ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ 1 ರೂ. ಕೂಡ ನೀಡಲಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10,000 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು.

5 ವರ್ಷಗಳಲ್ಲಿ ನೀಡಿದ್ದು ಕೇವಲ 3,500 ಕೋಟಿ ರೂ.ಮಾತ್ರ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಸಿಎಂ ಕುಮಾರಸ್ವಾಮಿ ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ 1 ರೂ. ಕೂಡ ಆಯವ್ಯಯದಲ್ಲಿ ಮೀಸಲಿಟ್ಟಿಲ್ಲ. ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ. ಉಕ ಅಭಿವೃದ್ಧಿ ನಿರ್ಲಕ್ಷಿಸಿ ಅನ್ಯಾಯ ಮಾಡಿದ್ದಾರೆ ಎಂದರು.

ಸಿದ್ದು ಕಾಂಗ್ರೆಸ್‌ನ ವಿಲನ್‌ – ಈಶ್ವರಪ್ಪ: ಕಾಂಗ್ರೆಸ್‌ ಪಾಲಿಗೆ ಸಿದ್ದರಾಮಯ್ಯ ವಿಲನ್‌ ಆಗಿದ್ದಾರೆ. ದಲಿತರಿಗೆ ಯಾವುದೇ ಸೌಲಭ್ಯ ನೀಡದೆ ಮೋಸ ಮಾಡಿದ್ದಾರೆ. ಲಿಂಗಾಯತ-ವೀರಶೈವ ನಡುವೆ ಜಗಳ ಹಚ್ಚಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಪ್ರತ್ಯೇಕ ಸ್ಪರ್ಧೆಗೆ ಏಕೆ ಮುಂದಾಗಿವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಶೀಘ್ರವೇ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದ್ದು, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.

ಗೃಹಸಚಿವ ಎಂ.ಬಿ.ಪಾಟೀಲ್‌ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ಕೆಲವು ಬಿಜೆಪಿ ಕಾರ್ಯಕರ್ತರ ಮೇಲೆ ಅನಗತ್ಯ ಪ್ರಕರಣ ದಾಖಲಿಸಿರುವ ಕ್ರಮ ಖಂಡಿಸಿ ಬಿಜೆಪಿ ಮೇ 6ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ.
-ಜಗದೀಶ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next