Advertisement

ಒಗ್ಗೂಡಿ ನಡೆದರೆ ಸ್ಥಾನಮಾನ

11:43 AM Jul 28, 2018 | Team Udayavani |

ಬೆಂಗಳೂರು: ಅತ್ಯಂತ ಹಿಂದುಳಿದ ಸಮುದಾಯಗಳು ಶಿವದಾರ, ಲಿಂಗದಾರ ಎಂಬ ಭಿನ್ನತೆ ಬದಿಗಿಟ್ಟು ಒಗ್ಗೂಡಿ ನಡೆದಾಗ ಸಮುದಾಯಕ್ಕೆ ಸೂಕ್ತ ಸಾಮಾಜಿಕ ಸ್ಥಾನಮಾನ ದೊರೆಯುತ್ತದೆ ಎಂದು ಮಾಜಿ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯ ಸ್ಥಾನಮಾನ ಪಡೆಯುವ ವಿಚಾರದಲ್ಲಿ ನಾವು ಭಿನ್ನಾಭಿಪ್ರಾಯ ಹೊಂದಬಾರದು.

ಇಡೀ ಸಮುದಾಯ ಎಂದಾಕ್ಷಣ ನಾವುಗಳು ಭಿನ್ನತೆ ಬಿಟ್ಟು ಒಗ್ಗೂಡಬೇಕಾಗುತ್ತದೆ. ಆಗಲೇ ನಮ್ಮ ಸಮುದಾಯದವರು ಶಾಸಕರು ಹಾಗೂ ಸಂಸದರಾಗಲು ಸಾಧ್ಯ. ರಾಜಕೀಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮ ಪಾಲನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಶಿವಶರಣ ಜಯಂತಿಗೆ ನಾನು ಸಚಿವೆಯಾಗಿದ್ದಾಗ ಹೆಚ್ಚಿನ ಮನ್ನಣೆ ನೀಡಲಾಗಿತ್ತು. ಜೇಡರ ದಾಸಿಮಯ್ಯ ಜಯಂತಿ, ಸರ್ವಜ್ಞ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ, ನಾರಾಯಣ ಗುರು ಜಯಂತಿ ಸೇರಿದಂತೆ ವಿವಿಧ ಜಯಂತಿಗಳ ಆಚರಣೆಗಳನ್ನು ಅನುಷ್ಠಾನಕ್ಕೆ ತರಲಾಯಿತು.

ಇಲಾಖೆ ಅಡಿಯಲ್ಲಿ ಬರುವ 25 ಜಯಂತಿಗಳಲ್ಲಿ 12 ಜಯಂತಿ ಶಿವಶರಣರಿಗೆ ಸಂಬಂಧಿಸಿದ್ದಾಗಿವೆ ಎಂದು ತಿಳಿಸಿದರು. ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ ಮಾತನಾಡಿ, ಹಿಂದುಳಿದ ಸಮುದಾಯಗಳು ಎಚ್ಚರದಿಂದ ಇರಬೇಕು. ಹಡಪದ ಸಮುದಾಯಕ್ಕೆ ಸೇರಿದ ಕೆಲವೇ ಮಂದಿ ರಾಜಕೀಯ ಸ್ಥಾನಮಾನ ಪಡೆದಿದ್ದಾರೆ.

Advertisement

84 ಗ್ರಾಮ ಪಂಚಾಯಿತಿ ಸದಸ್ಯರು, 4 ಪುರಸಭೆ ಸದಸ್ಯರು ಹಾಗೂ ಓರ್ವ ತಾಲೂಕು ಪಂಚಾಯಿತಿ ಸದಸ್ಯರು ಮಾತ್ರವೇ ಹಡಪದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಮುದಾಯದವರು ಜೀವನ ರೂಪಿಸಿಕೊಳ್ಳಲು ಬ್ಯಾಂಕುಗಳು ಸಾಲ ನೀಡಲು ಮುಂದಾಗಬೇಕು. ಹಿಂದುಳಿದ ವರ್ಗದವರಿಗೆ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರಿಗೆ ಸಂಬಂಧಿಸಿದ ಕೃತಿ ಮತ್ತು ಧ್ವನಿಸುರಳಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಅಪ್ಪಣ್ಣ ದೇವರ ಮಠದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next