Advertisement

ಲಾಲ್‌ಬಾಗ್‌ನಲ್ಲಿ ಧುಮ್ಮಿಕ್ಕಲಿದೆ ಮಿನಿ ನಯಾಗರ!

11:53 AM May 02, 2017 | |

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಪ್ರವಾಸಿಗರಿಗೆ ಇನ್ನುಮುಂದೆ ಕಣ್ಮನ ತಣಿಸುವ, ಅಮೆರಿಕದ ಜಗತøಸಿದ್ಧ ನಯಾಗರ ಜಲಪಾತ ಮಾದರಿಯ ಫಾಲ್ಸ್‌ನ ಸೊಬಗು ಲಭ್ಯವಾಗಲಿದೆ! ಹೆಚ್ಚಿನ ಪ್ರಮಾಣದ ಪ್ರವಾಸಿಗರನ್ನು ಆಕರ್ಷಿಸಲು ಮುಂದಾಗಿರುವ ತೋಟಗಾರಿಕೆ ಇಲಾಖೆ, ಉದ್ಯಾನವನದಲ್ಲಿ ನಯಾಗರ ಮಾದರಿ ಜಲಪಾತ ನಿರ್ಮಾಣಕ್ಕೆ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಯೋಜನೆಯ ನೀಲಿನಕ್ಷೆ ಸಹ ಸಿದ್ಧಪಡಿಸಿದೆ.

Advertisement

ಲಾಲ್‌ಬಾಗ್‌ನ ಕೆರೆಯಲ್ಲಿ ಲಭ್ಯವಿರುವ ನೀರನ್ನು ಬಳಸಿಕೊಂಡು ನಯಾಗರ ಮಾದರಿಯ ಆಕರ್ಷಕ ಜಲಪಾತ ನಿರ್ಮಿಸಲು ತೋಟಗಾರಿಕೆ ಇಲಾಖೆ ಕ್ರಮಕೈಗೊಂಡಿದೆ. ಉದ್ಯಾನವನದಲ್ಲಿ ಲಭ್ಯವಿರುವ 30 ಎಕರೆ ವಿಸ್ತೀರ್ಣದ ಎರಡು ಕೆರೆಯಲ್ಲಿನ ನೀರನ್ನು ಬಳಸಿಕೊಂಡು ಕೃತಕ ಜಲಪಾತ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ಧನ್ವಂತರಿಯ ಮೂಲೆಯಲ್ಲಿ ನಿರುಪಯುಕ್ತವಾಗಿರುವ ಕೆರೆಗಳ ನೀರನ್ನು ಬಳಸಿಕೊಂಡು ಜಲಪಾತವನ್ನು ಸೃಷ್ಟಿಸಲಾಗುತ್ತದೆ.

ಈ ಯೋಜನೆಗೆ  ಅಂದಾಜು 3 ಕೋಟಿ ರೂ.ವೆಚ್ಚವಾಗಲಿದೆ. ತ್ವರಿತ ಗತಿಯಲ್ಲಿ ಜಲಪಾತ ನಿರ್ಮಾಣ ಕಾರ್ಯಕ್ಕೆ ತೋಟಗಾರಿಕೆ ಇಲಾಖೆ ಚಾಲನೆ ನೀಡಿದ್ದು, ಯೋಜನೆಗೆ ತಗಲುವ ವೆಚ್ಚದ ಹಣವನ್ನು ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಪಾವತಿಸಿದ್ದು, ಟೆಂಡರ್‌ ಆಯ್ಕೆ ಪ್ರಕ್ರಿಯೆ  ಕೂಡ ಪೂರ್ಣಗೊಂಡಿದೆ. 

ಜಲಪಾತ ನಿರ್ಮಾಣದಿಂದ ಲಾಲ್‌ಬಾಗ್‌ನ ನೋಡಲು ಬರುವ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ, ಕೆರೆಯ ನಿರುಪಯುಕ್ತ ನೀರಿನ ಬಳಕೆಯಿಂದ ಜಲಚರಗಳ ವಾಸಕ್ಕೂ ಅನುಕೂಲ ಕಲ್ಪಿಸುವ ಪರಿಸರ ಕಾಳಜಿಯನ್ನು ಹೊಂದಲಾಗಿದೆ. ಜಲಪಾತ ನಿರ್ಮಾಣ ಮಾಡಿದ ನಂತರ ಆಕರ್ಷಕವಾದ ವರ್ಣರಂಜಿತ ವಿದ್ಯುತ್‌ ದೀಪಗಳನ್ನು ಸಹ ಅಳವಡಿಸಿ ಜಲಪಾತದ ಸೊಬಗನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಯನ್ನು ತೋಟಗಾರಿಕೆ ಇಲಾಖೆ ರೂಪಿಸಿದೆ.

ಜಲಪಾತ ನಿರ್ಮಾಣ ಹೇಗೆ?: ಲಾಲ್‌ಬಾಗ್‌ನ ಚಿಕ್ಕ ಕೆರೆ ಬಳಿ ಇರುವ ಬಂಡೆಗೆ (ಸ್ಟೋನ್‌ವಾಲ್‌) ಹೊಂದಿಕೊಂಡಂತೆ ಮಿನಿ ನಯಾಗರ ಫಾಲ್ಸ್‌ ನಿರ್ಮಿಸಲಾಗುವುದು. ದೊಡ್ಡ ಕೆರೆಯಿಂದ 240 ಎಚ್‌ಪಿ ಮೋಟರ್‌ ಬಳಸಿ, ಕೆರೆಯ ನೀರನ್ನು 20 ಮೀಟರ್‌ನಷ್ಟು ಎತ್ತರಕ್ಕೆ ಲಿಫ್ಟ್ ಮಾಡಿ, ಸುಮಾರು 38 ಮೀಟರ್‌ (120 ಅಡಿ) ಉದ್ದದ 5 ಅಡಿ ಎತ್ತರದ ತೊಟ್ಟಿಯಲ್ಲಿ ನೀರನ್ನು ಸಂಗ್ರಹಿಸಲಾಗುವುದು. ಅದಕ್ಕಾಗಿ 2 ಅಡಿ ವ್ಯಾಸದ ಪೈಪ್‌ ಬಳಸಿ, ಒಂದು ಸೆಕೆಂಡ್‌ಗೆ 660 ಲೀಟರ್‌ ನೀರು ಹರಿಯುವಂತೆ ಮಾಡಲಾಗುತ್ತಿದೆ. 

Advertisement

ತೊಟ್ಟಿಯಲ್ಲಿ ನೀರು ತುಂಬಿದ ಕೂಡಲೇ 2 ಇಂಚು ದಪ್ಪದ ಝರಿ ಮಾದರಿಯಲ್ಲಿ 8 ಮೀಟರ್‌ (25 ಅಡಿ) ಎತ್ತರದಿಂದ ಸುಮಾರು 38 ಮೀಟರ್‌ ಅಗಲದಲ್ಲಿ ನೀರು ಬೀಳಲಿದೆ. ಇದು ನೋಡಲು ಅಮೆರಿಕದ ನಯಾಗರ ಜಲಪಾತದ ಮಾದರಿಯಲ್ಲೇ ಕಾಣಲಿದೆ. ಅದಕ್ಕಾಗಿಯೇ 2 ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ತೊಟ್ಟಿ ನಿರ್ಮಿಸಲಾಗುತ್ತದೆ. ಈ ಕಾರ್ಯಕ್ಕೆ ಜಲಮಂಡಳಿ ತಜ್ಞರ ನೆರವು ಪಡೆಯಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ (ಕಟ್ಟಡ ವಿಭಾಗ) ವಿ.ಬಿ.ಕಲಕೇರಿ ತಿಳಿಸಿದ್ದಾರೆ. 

ನೀರಿನ ಶುದ್ಧೀಕರಣ
ಲಾಲ್‌ಬಾಗ್‌ ಕೆರೆಗಳ ನೀರು ನಿಂತಲ್ಲೇ ನಿಂತಿದೆ. ಇದರಿಂದ ಆಕ್ಸಿಜನ್‌ ಕರಗುವ ಪ್ರಮಾಣ ಕೂಡ ಕಡಿಮೆ ಇದೆ. ದೊಡ್ಡ ಕೆರೆ ನೀರು ಬಳಕೆ ಮಾಡಿಕೊಂಡು ಚಿಕ್ಕ ಕೆರೆಗೆ ನಯಾಗರ ಮಾದರಿಯ ಮಿನಿ ಫಾಲ್ಸ್‌ ಹರಿಯುವಂತೆ ಮಾಡಲಾಗುತ್ತಿದೆ. ಇದರಿಂದ ಚಿಕ್ಕ ಕೆರೆ ತುಂಬಿದ ಕೂಡಲೇ ನೀರು ದೊಡ್ಡ ಕೆರೆಗೆ ಹರಿಯಲಿದೆ. ಹೀಗೆ ಮರುಬಳಕೆ (ರೀಸೈಕಲ್‌) ಮಾಡುವುದರಿಂದ ನೀರಿನಲ್ಲಿ ಆಕ್ಸಿಜನ್‌ ಪ್ರಮಾಣ ಹೆಚ್ಚಾಗಿ ನೀರು ಶುದ್ಧೀಕರಣಗೊಳ್ಳುತ್ತದೆ. ಇದರಿಂದ ಜಲಚರಗಳು, ನೀರುಕೋಳಿ ಇತ್ಯಾದಿಗಳು ಜೀವಿಸಲು ಯೋಗ್ಯ ನೀರು ಸಿಕ್ಕಂತಾಗುತ್ತದೆ. 

ನಯಾಗರ ಮಾದರಿಯ ಮಿನಿ ಫಾಲ್ಸ್‌ ನಿರ್ಮಾಣ ಕಾರ್ಯ ಮುಂದಿನ ವಾರ ಆರಂಭಗೊಳ್ಳಲಿದೆ. ಲೋಕೋಪ ಯೋಗಿ ಇಲಾಖೆಗೆ ಜವಾಬ್ದಾರಿ ವಹಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ನಂತರ ಇದಕ್ಕೆ ಅತ್ಯಾಧುನಿಕ ಲೈಟಿಂಗ್‌ ವ್ಯವಸ್ಥೆ ಮಾಡುವ ಯೋಜನೆ ಇಲಾಖೆಗೆ ಇದೆ. 
-ಡಾ. ಎಂ. ಜಗದೀಶ್‌, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ

* ಸಂಪತ್‌ ತರೀಕರೆ

Advertisement

Udayavani is now on Telegram. Click here to join our channel and stay updated with the latest news.

Next