ನಟ ಮೋಹನ್, ಖುಷಿ ಮುಖರ್ಜಿ, ನವೀನ್ ಕೃಷ್ಣ, ರಮೇಶ್ ಪಂಡಿತ್, ಬಿ. ಜಯಶ್ರೀ, ಶ್ರೀನಿವಾಸ ಪ್ರಭು, ಅರವಿಂದ ರಾವ್, ಬೆನಕ ಪವನ್ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ “ಇತ್ಯರ್ಥ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎಸ್.ಎ ಚಿನ್ನೇಗೌಡ, ಡಿಎಸ್ಪಿ ಶಂಕರ್, ಲಹರಿ ವೇಲು, ನಾಗರಾಜ ಕೋಟೆ ಮೊದಲಾದ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, “ಇತ್ಯರ್ಥ’ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಹೊರತಂದು ಚಿತ್ರತಂಡಕ್ಕೆ ಶುಭ ಕೋರಿದರು.
ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವವಿರುವ ಎ.ಜಿ ಶೇಷಾದ್ರಿ “ಇತ್ಯರ್ಥ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಎ.ಜಿ ಶೇಷಾದ್ರಿ, “ಸುಮಾರು ಎರಡು ವರ್ಷಗಳ ಹಿಂದೆ ಶುರುವಾದ ಸಿನಿಮಾ ಅಂತಿಮವಾಗಿ ರಿಲೀಸ್ ಹಂತದವರೆಗೆ ಬಂದಿದೆ. ಇದೊಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಪ್ಯಾಕೇಜ್ ಇರುವ ಸಿನಿಮಾ. ಇದರಲ್ಲಿ ಲವ್, ರೊಮ್ಯಾನ್ಸ್, ಕಾಮಿಡಿ, ಹಾರರ್-ಥ್ರಿಲ್ಲರ್, ಸೆಂಟಿಮೆಂಟ್, ಎಮೋಶನ್ಸ್ ಹೀಗೆ ಎಲ್ಲ ಅಂಶಗಳು ಇದೆ. ಹಾಗಾಗಿ ಇದು ಯಾವುದೋ ಒಂದು ಜಾನರ್‌ಗೆ ಸೀಮಿತವಾದ ಸಿನಿಮಾವಲ್ಲ. ಇಡೀ ಸಿನಿಮಾ ಕುತೂಹಲ ಮೂಡಿಸುತ್ತ ಆಡಿಯನ್ಸ್‌ನ ಕರೆದುಕೊಂಡು ಹೋಗುತ್ತದೆ. ಸಿನಿಮಾದಲ್ಲಿ ಕೊನೆಯ 5 ನಿಮಿಷ ಯಾರೂ ನಿರೀಕ್ಷಿಸದ ಕ್ಲೈಮ್ಯಾಕ್ಸ್ ನೋಡಬಹುದು. “ಇತ್ಯರ್ಥ’ದ ಮೂಲಕ ಸೀರಿಯಲ್ ನಿರ್ದೇಶಕನಾಗಿದ್ದ ನಾನು ಸಿನಿಮಾ ನಿರ್ದೇಶಕನಾಗುತ್ತಿದ್ದೇನೆ’ ಎಂದರು.
ಚಿತ್ರದ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕ ನಟ ಮೋಹನ್, “ಇಲ್ಲಿಯವರೆಗೆ ನಾನು ಮಾಡಿದ ಪಾತ್ರಗಳಿಗಿಂತ ವಿಭಿನ್ನವಾದ ಮತ್ತು ಹೊಸಥರದ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನೃತ್ಯ ನಿರ್ದೇಶಕ ತ್ರಿಭುವನ್ ನನಗೆ ಡಿಫರೆಂಟ್ ಸ್ಟೆಪ್ಸ್ ಹಾಕಿಸಿ ಡ್ಯಾನ್ಸ್ ಮಾಡಿಸಿದ್ದಾರೆ. “ಇತ್ಯರ್ಥ’ ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವಂಥ ಕಂಟೆಂಟ್ ಇರುವ ಸಿನಿಮಾ. ಆಡಿಯನ್ಸ್‌ಗೆ ಇಷ್ಟವಾಗುವುದೆಂಬ ನಂಬಿಕೆಯಿದೆ’ ಎಂದರು.
ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಎನ್.ಎಲ….ಎನ್ ಮೂರ್ತಿ ಚಿತ್ರಕ್ಕೆ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಗೌತಂ ಶ್ರೀವತ್ಸ ಸಂಗೀತ ಸಂಯೋಜನೆಯ “ಇತ್ಯರ್ಥ’ ಚಿತ್ರದಲ್ಲಿ 6 ಹಾಡುಗಳಿದ್ದು, ಡಾ. ವಿ ನಾಗೇಂದ್ರ ಪ್ರಸಾದ್, ಯೋಗರಾಜ ಭಟ…, ಹೃದಯಶಿವ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಬಹು ಸಮಯದ ನಂತರ ಹಿರಿಯ ನಟಿ ಬಿ. ಜಯಶ್ರೀ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವುದರ ಜೊತೆಗೆ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ತ್ರಿಭುವನ್ “ಇತ್ಯರ್ಥ’ ಚಿತ್ರದ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಡಿ. ಪ್ರಸಾದ ಬಾಬು ಛಾಯಾಗ್ರಹಣದಲ್ಲಿ ಚಿತ್ರದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಮೂಡಿಗೆರೆ, ಕಳಸ, ಕುಮುಟ, ಬೆಂಗಳೂರು ಸುತ್ತಮುತ್ತ “ಇತ್ಯರ್ಥ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಸದ್ಯ ತನ್ನ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆಯ ಮೂಲಕ “ಇತ್ಯರ್ಥ’ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ, ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಗುತ್ತಿದ್ದಂತೆ ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು “ಇತ್ಯರ್ಥ’ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.