Advertisement

Chamarajanagar: 1.34 ಕೋಟಿ ಮೌಲ್ಯದ ವಸ್ತುಗಳು ವಾರಸುದಾರರಿಗೆ ವಾಪಸ್‌

05:27 PM Sep 06, 2023 | Team Udayavani |

ಚಾಮರಾಜನಗರ: ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ 2023ನೇ ಸಾಲಿನಲ್ಲಿ ಇದುವರೆಗೆ ನಡೆದ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಚಿನ್ನ, ಬೆಳ್ಳಿಯ ಆಭರಣಗಳು, ನಗದು ಸೇರಿ 1.34 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

Advertisement

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2023ನೇ ಸಾಲಿನಲ್ಲಿ ನಡೆದ ಪ್ರಾಪರ್ಟಿ ಪೆರೇಡ್‌ ಕಾರ್ಯಕ್ರಮದಲ್ಲಿ ಎಸ್ಪಿ ಪದ್ಮಿನಿ ಸಾಹು ನೇತೃತ್ವದಲ್ಲಿ ವಿವಿಧ ಠಾಣೆಗಳ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ಕಳೆದುಕೊಂಡವರಿಗೆ ನೀಡಿದರು.

ತಮ್ಮ ಬೆಲೆ ಬಾಳುವ ಆಭರಣಗಳು, ವಸ್ತುಗಳನ್ನು ಕಳೆದುಕೊಂಡಿದ್ದ ವಾರಸುದಾರರು ಇದರಿಂದ ಸಂತಸ ಪಟ್ಟರು. ಕಳವು ಪ್ರಕರಣಗಳನ್ನು ಬೇಧಿಸಿ ತಮ್ಮ ಅಮೂಲ್ಯವಾದ ವಸ್ತುಗಳನ್ನು ವಾಪಸ್‌ ನೀಡಿದ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್ಪಿ ಪದ್ಮಿನಿ ಸಾಹು ಮಾತನಾಡಿ, ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 70 ಕಳವು ಪ್ರಕರಣಗಳ ಪೈಕಿ 44 ಪ್ರಕರಣಗಳನ್ನು ಬೇಧಿಸಲಾಗಿದ್ದು 1,34,46,261 ರೂ.ಗಳ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 44 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅನುಮತಿ ಪಡೆದು ವಾರಸುದಾರರಿಗೆ ವಸ್ತುಗಳನ್ನು ವಾಪಸ್‌ ಕೊಡಲಾಗಿದೆ ಎಂದರು.

ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ, ಕೊಳ್ಳೇಗಾಲ ಡಿವೈಎಸ್ಪಿ ಸೋಮೇಗೌಡ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ಸರ್ಕಲ್‌ ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ ಪೆಕ್ಟರ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

Advertisement

2 ಕೆ.ಜಿ. ಚಿನ್ನಾಭರಣ, 5 ಕೆ.ಜಿ. ಬೆಳ್ಳಿ ಆಬರಣ ಜಪ್ತಿ: 20 ಪ್ರಕರಣಗಳಲ್ಲಿ 1.05 ಕೋಟಿ ರೂ. ಮೌಲ್ಯದ 1 ಕೆ.ಜಿ 957.5 ಗ್ರಾಂ ಚಿನ್ನದ ಆಭರಣಗಳು ಹಾಗೂ 3,93,260 ರೂ. ಮೌಲ್ಯದ 5 ಕೆ.ಜಿ 618 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ 9 ಪ್ರಕರಣಗಳಲ್ಲಿ 3.20 ಲಕ್ಷ ಮೌಲ್ಯದ 9 ಮೋಟಾರ್‌ ಸೈಕಲ್‌(2 ವೀಲರ್‌), 2 ಪ್ರಕರಣಗಳಲ್ಲಿ 7.65 ಲಕ್ಷ ಮೌಲ್ಯದ 5 ಮೋಟಾರ್‌ ವಾಹನಗಳು, 4 ಪ್ರಕರಣಗಳಲ್ಲಿ 10,20,501 ರೂ. ಮೌಲ್ಯದ ನಗದು ಹಣ ವಶಪಡಿಸಿಕೊಳ್ಳಲಾಗಿತ್ತು ಎಂದು ಎಸ್ಪಿ ತಿಳಿಸದರು.

9 ಪ್ರಕರಣಗಳಲ್ಲಿ 3.77 ಲಕ್ಷ ಮೌಲ್ಯದ ಬ್ಯಾಟರಿ, ಎಲೆಕ್ಟ್ರಿಕಲ್‌ ವಸ್ತುಗಳು, ತಾಮ್ರ, ಕಂಚಿನ ವಸ್ತುಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಒಟ್ಟು. 1.34 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ವಾಪಸ್‌ ನೀಡಲಾಗಿದೆ. ಪ್ರಕರಣ ಬೇಧಿಸುವಲ್ಲಿ ಶ್ರಮವಹಿಸಿದ್ದ ಇಲಾಖೆಯ ಅಧಿಕಾರಿ ಗಳು ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next