ರೋಮ್: ಕೋವಿಡ್ 19 ಮಹಾಮಾರಿಯಿಂದ ನಲುಗಿ ಹೋಗಿರುವ ಇಟಲಿ ಮತ್ತೆ ಮೇ 3ರವರೆಗೆ ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ. ಲಾಕ್ ಡೌನ್ ಮುಂದುವರಿಸುವ ಕುರಿತು ಇಟಲಿ ಪ್ರಧಾನಿ ಗ್ಯುಸೆಪ್ಪೆ ಕೋಂಟೆ ಅಧಿಕೃತವಾಗಿ ಘೋಷಿಸಿದ್ದಾರೆ.
“ನಾವು ಈಗ ಬಿಟ್ಟುಕೊಟ್ಟರೆ, ಈವರೆಗೆ ಲಾಕ್ ಡೌನ್ ನಿಂದ ಸಾಧಿಸಿರುವ ಎಲ್ಲಾ ಶ್ರಮ ವ್ಯರ್ಥವಾಗಲಿದೆ. ಅಷ್ಟೇ ಮತ್ತೆ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚಾಗುವ ಅಪಾಯವಿದೆ” ಎಂದು ಪ್ರಧಾನಿ ಕೋಂಟೆ ಹೇಳಿದ್ದಾರೆ.
ಕೋವಿಡ್ 19 ವೈರಸ್ ಕಾಲಿಟ್ಟ ನಂತರ ದೇಶಾದ್ಯಂತ ಒಂದು ತಿಂಗಳ ಕಾಲ ಜನರ ಓಡಾಟ, ವಸ್ತುಗಳ ಖರೀದಿ ಮೇಲೆ ಕಠಿಣ ನಿರ್ಬಂಧ ವಿಧಿಸಲಾಗಿತ್ತು. ಫೆಬ್ರುವರಿ 20ರಂದು ಇಟಲಿಯ ಉತ್ತರ ನಗರ ಕೋಡೋಗ್ನೋ ಪ್ರದೇಶದಲ್ಲಿ ಮೊದಲ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿತ್ತು. ಆ ನಂತರ ಇಡೀ ಇಟಲಿ ಸಾವಿನ ಮನೆಯಂತಾಗಿ ಹೋಗಿತ್ತು.
ಕೋವಿಡ್ ವೈರಸ್ ಗೆ ಇಟಲಿಯಲ್ಲಿ ಈಗಾಗಲೇ ಸಾವನ್ನಪ್ಪಿರುವವರ ಸಂಖ್ಯೆ 18ಸಾವಿರ ದಾಟಿದೆ. ಕಳೆದ 24ಗಂಟೆಯಲ್ಲಿ 570 ಜನರು ಸಾವನ್ನಪ್ಪಿದ್ದಾರೆ. ಇದು ಸೋಂಕು ಹರಡುವ ಮುನ್ನ ಇದ್ದ ಪ್ರಮಾಣಕ್ಕಿಂತ ಕಡಿಮೆಯದ್ದಾಗಿದೆ ಎಂದು ತಿಳಿಸಿದೆ. ಏಪ್ರಿಲ್ ನಿಂದ ಸೋಂಕಿತರ ಪ್ರಮಾಣದಲ್ಲಿ ಇಳಿಕೆಯಾಗಿರುವುದಾಗಿ ವಿವರಿಸಿದೆ.
ಒಂದು ವಾರದ ಹಿಂದೆ 4,068 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಶುಕ್ರವಾರದ ಹೊತ್ತಿಗೆ ಈ ಸಂಖ್ಯೆ 3,497ಕ್ಕೆ ಇಳಿಕೆಯಾಗಿರುವುದಾಗಿ ತಿಳಿಸಿದೆ.